ADVERTISEMENT

ಕಲಬುರಗಿ: ಕಬ್ಬು ನುರಿಸಲು ನೀಡಬೇಕು ಬಾಂಡ್!

ಗುರುವಾರದಿಂದ ಕಬ್ಬು ನುರಿಸಲಿದೆ ಕೆಪಿಆರ್‌ ಸಕ್ಕರೆ ಕಾರ್ಖಾನೆ

ಮನೋಜ ಕುಮಾರ್ ಗುದ್ದಿ
Published 9 ನವೆಂಬರ್ 2022, 10:07 IST
Last Updated 9 ನವೆಂಬರ್ 2022, 10:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರಗಿ: ಆಳಂದ ತಾಲ್ಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಮತ್ತು ಅಫಜಲ‍ಪುರ ತಾಲ್ಲೂಕಿನ ಚಿಣಮಗೇರಾದಲ್ಲಿರುವ ಕೆಪಿಆರ್‌ ಸಕ್ಕರೆ ಕಾರ್ಖಾನೆ ಮಧ್ಯದ ಕಾನೂನು ಹೋರಾಟ ತಾತ್ಕಾಲಿಕವಾಗಿ ಸುಖಾಂತ್ಯವಾಗಿದೆ. ಗುರುವಾರದಿಂದ ಕೆಪಿಆರ್‌ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸಲಿದೆ.

ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ. ಕೆಪಿಆರ್‌ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ₹ 100 ಮೊತ್ತದ ಬಾಂಡ್ ಜೊತೆಗೆ ₹ 5 ಮೊತ್ತದ ಚಲನ್‌ ಪಡೆದು ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಆ ಅನುಮತಿಯ ಮೇರೆಗೆ ಕೆಪಿಆರ್‌ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸುವರು.

ಗುರುವಾರ (ನವೆಂಬರ್ 10) ಕಾರ್ಖಾನೆ ಪುನರಾರಂಭವಾಗಲಿದೆ ಎಂದು ಕೆಪಿಆರ್‌ ಸಕ್ಕರೆ ಕಾರ್ಖಾನೆಯ ಉಪ ಪ್ರಧಾನ ವ್ಯವಸ್ಥಾಪಕ (ಸಕ್ಕರೆ) ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ವ್ಯವಸ್ಥೆ ರಾಜ್ಯದಲ್ಲೇ ಮೊದಲ ಬಾರಿ ‍ಪರಿಚಯಿಸಲಾಗುತ್ತಿದೆ. ಜಿಲ್ಲಾಡಳಿತವು ಬಾಂಡ್ ಮೇಲೆ ಅನುಮತಿ ನೀಡಿದ ಸೀಲ್ ಒತ್ತುತ್ತದೆ. ಆ ಅನುಮತಿ ಪತ್ರ ಪಡೆದು ಬಂದವರಿಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಅವಕಾಶ ನೀಡಲಾಗುತ್ತಿದೆ’ ಎಂದರು.

‘ನಮ್ಮ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು ಏಳೆಂಟು ಸಾವಿರ ರೈತರು ಕಬ್ಬು ತರುವ ನಿರೀಕ್ಷೆಯಿದ್ದು, ₹ 3129 ಎಫ್‌ಆರ್‌ಪಿ ದರವನ್ನು ನಿಗದಿಪಡಿಸಲಾಗಿದ್ದು, ಕಟಾವು ಹಾಗೂ ಇತರ ಆಡಳಿತಾತ್ಮಕ ಖರ್ಚು ಕಳೆದು ರೈತರ ಖಾತೆಗಳಿಗೆ ಪ್ರತಿ ಟನ್‌ಗೆ ₹ 2380 ಜಮಾ ಆಗಲಿದೆ. ಈ ಮೊತ್ತವನ್ನು ಹೆಚ್ಚಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆವು. ಪೂರಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಹೆಚ್ಚಿದ ರೈತರ ಒತ್ತಡ: ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ಚಿಣಮಗೇರಾದ ಸಕ್ಕರೆ ಕಾರ್ಖಾನೆ ಎದುರು ರೈತರು ಸಿದ್ದರಾಮ ಶಿವಾಚಾರ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ತಕ್ಷಣ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸದಿದ್ದರೆ ಚೌಡಾಪುರ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಬಾಂಡ್ ನೀಡಿ ಅನುಮತಿ ಪಡೆಯುವ ಯೋಜನೆಯನ್ನು ರೂಪಿಸಿದೆ.

ಒಬ್ಬ ರೈತರಿಗೆ ಒಂದು ಬಾಂಡ್: ಒಬ್ಬ ರೈತರ ಬಳಿ ಎಷ್ಟೇ ಟನ್‌ ಕಬ್ಬು ಇದ್ದರೂ ಒಂದು ಪರ್ಮಿಟ್ ಮಾತ್ರ ನೀಡಲಾಗುತ್ತದೆ. ಅದನ್ನು ಪಡೆದರೆ ಮಾತ್ರ ಕೆಪಿಆರ್‌ ಕಾರ್ಖಾನೆಯಲ್ಲಿ ಕಬ್ಬು ನುರಿಸಬಹುದಾಗಿದೆ. ಪರ್ಮಿಟ್ ಇಲ್ಲದ ರೈತರ ಕಬ್ಬನ್ನು ನುರಿಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

‘ಸಕ್ಕರೆ ನುರಿಸುವ ಕುರಿತು ಇದ್ದ ವಿವಾದ ಇತ್ಯರ್ಥಪಡಿಸಲಾಗಿದ್ದು, ಗುರುವಾರದಿಂದ ಕೆಪಿಆರ್ ಸಕ್ಕರೆ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ. ಭೂಸನೂರು ಎನ್‌ಎಸ್‌ಎಲ್‌ ಕಾರ್ಖಾನೆಯೂ ಶೀಘ್ರ ಕಾರ್ಯಾರಂಭ ಮಾಡಲಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.