ADVERTISEMENT

'ಮೋದಿ ನೇಣು ಹಾಕಿಕೊಳ್ಳುತ್ತಾನಾ' ಎಂದಿರುವ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿ–ಶೋಭಾ

​ಪ್ರಜಾವಾಣಿ ವಾರ್ತೆ
Published 13 ಮೇ 2019, 9:32 IST
Last Updated 13 ಮೇ 2019, 9:32 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಕಲಬುರ್ಗಿ: ‘ಕಾಂಗ್ರೆಸ್ 40ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂಬ ಹೇಳಿಕೆ ನೀಡಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಲಿನ ಭಯ, ಹತಾಶೆಯಿಂದಾಗಿ ಖರ್ಗೆ ಅವರು ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಮೋದಿ ವಿಜಯ್ ಚೌಕ್‌ನಲ್ಲಿ ನೇಣು ಹಾಕಿಕೊಳ್ಳುವುದಿಲ್ಲ; ಬದಲಿಗೆ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ’ ಎಂದು ತಿರುಗೇಟು ನೀಡಿದರು.

‘ಹಿಂದುಳಿದ ವರ್ಗದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಹಿಂದ ವರ್ಗಕ್ಕೆ ಏನು ಮಾಡಿದರು ಎಂಬುದನ್ನು ಮೊದಲು ಹೇಳಲಿ. ನಮಗೆ ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಿಲ್ಲ’ ಎಂದು ಕುಟುಕಿದರು.

ADVERTISEMENT

'ವಿಶ್ವನಾಥ್ಸತ್ಯವನ್ನೇ ಹೇಳಿದ್ದಾರೆ'

‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯನವರ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಒಳಬೇಗುದಿಯನ್ನು ಹೊರಹಾಕಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಕಾಂಗ್ರೆಸ್ ಪಕ್ಷದವರು ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ವಿರುದ್ಧ ಪ್ರಚಾರ ಮಾಡಿದ್ದಾರೆ. ಸುಮಲತಾ ಜತೆ ಡಿನ್ನರ್ ಪಾರ್ಟಿಗೆ ಹೋದವರಿಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ಎರಡೂ ಪಕ್ಷದವರು ಸತ್ಯದ ಪರಾಮರ್ಶೆಯನ್ನು ಮಾಡಿಕೊಳ್ಳಬೇಕು’ ಎಂದು ಲೇವಡಿ ಮಾಡಿದರು.

'ಸರ್ಕಾರ ಹಾಸಿಗೆ ಹಾಸಿಕೊಂಡು ಮಲಗಿದೆ'

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್‌ನಲ್ಲಿದ್ದಾರೆ. ಸರ್ಕಾರ ಹಾಸಿಗೆ ಹಾಸಿಕೊಂಡು ಮಲಗಿದೆ. ರಾಜ್ಯದ ಜನರ ಬಗ್ಗೆ ಮೈತ್ರಿ ಸರ್ಕಾರಕ್ಕೆ ಕಾಳಜಿ ಇಲ್ಲ. ಸಚಿವರು ಚುನಾವಣೆಗೆ ಸೀಮಿತರಾಗಿದ್ದಾರೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡಿದ ಹಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಳೆಯುತ್ತಿದೆ. ಈ ಸಮ್ಮಿಶ್ರ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಇದನ್ನು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಇಂತಹ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರಿಯಬಾರದು’ ಎಂದರು.

'ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಬುಲಾವ್ ಕೊಟ್ಟಿಲ್ಲ'

‘ಕುಂದಗೋಳ ಉಪ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ದುಡ್ಡು ಹಂಚಿದರೂ ಯಾರನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಾವು ಆಪರೇಷನ್ ಕಮಲಕ್ಕೆ ಮುಂದಾಗುವುದಿಲ್ಲ. ಅವರ ಒಳ ಜಗಳದಿಂದ ಅನೇಕ ಶಾಸಕರು ಪಕ್ಷದಿಂದ ಹೊರಬರಲು ಸಿದ್ಧರಾಗಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಬುಲಾವ್ ಕೊಟ್ಟಿಲ್ಲ. ಕಾಂಗ್ರೆಸ್‌ನ ಆಂತರಿಕ ಜಗಳ ಅವರನ್ನು ಬೆಂಗಳೂರಿಗೆ ಬರುವಂತೆ ಮಾಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.