ADVERTISEMENT

ಲೇಖಕರಿಗೆ ಸ್ವಂತ ನುಡಿಗಟ್ಟು ಅಗತ್ಯ; ಪ್ರೊ. ವಿಕ್ರಮ ವಿಸಾಜಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:12 IST
Last Updated 7 ಅಕ್ಟೋಬರ್ 2022, 6:12 IST
ಕಲಬುರಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅನೇಕಲವ್ಯ’, ‘ಅಂಬೇಡ್ಕರ್ ಫಸಲು’ ಹಾಗೂ ‘ಕಾಲದ ಕನ್ನಡಿ’ ಪುಸ್ತಕಗಳು ಬಿಡುಗಡೆ ಮಾಡಿದ ಗಣ್ಯರು
ಕಲಬುರಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅನೇಕಲವ್ಯ’, ‘ಅಂಬೇಡ್ಕರ್ ಫಸಲು’ ಹಾಗೂ ‘ಕಾಲದ ಕನ್ನಡಿ’ ಪುಸ್ತಕಗಳು ಬಿಡುಗಡೆ ಮಾಡಿದ ಗಣ್ಯರು   

ಕಲಬುರಗಿ: ‘ಬರಹಗಾರ ತನ್ನದೇ ಆದ ಸ್ವಂತಿಕೆಯ ನುಡಿಗಟ್ಟು ಬಳಸಿಕೊಂಡು ಸಾಹಿತ್ಯ ಕೃಷಿಯಲ್ಲಿ ನಿರತವಾಗಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ(ಸಿಯುಕೆ) ಪ್ರೊ.ವಿಕ್ರಮ ವಿಸಾಜಿ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಪ್ನ ಬುಕ್ ಹೌಸ್ ಗುರುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ. ಎಚ್‌.ಟಿ.ಪೋತೆ ಅವರ ‘ಅನೇಕಲವ್ಯ’, ‘ಅಂಬೇಡ್ಕರ್ ಫಸಲು’ ಹಾಗೂಸಂದರ್ಶಕ ಪ್ರಾಧ್ಯಾಪಕ ಶ್ರೀಶೈಲ ನಾಗರಾಳ ‘ಕಾಲದ ಕನ್ನಡಿ’ ಪುಸ್ತಕಗಳನ್ನು ಪರಿಚಯಿಸಿ ಅವರು ಮಾತನಾಡಿದರು.

‘ಬೇಂದ್ರ, ಕುವೆಂಪು, ಕಾರಂತ, ಕಂಬಾರರು ಸೇರಿ ಹಲವು ಮೇರು ಸಾಹಿತಿಗಳು ತಮ್ಮದೇ ಆದ ಶೈಲಿಯಲ್ಲಿ ಸ್ವಂತಿಕೆಯ ನುಡಿಗಟ್ಟು ಹೊಂದಿದ್ದರು. ಅಂತಹುದೇ ನುಡಿಗಟ್ಟು ಪ್ರತಿಯೊಬ್ಬರಲ್ಲೂ ಇರಬೇಕು. ಬರವಣೆಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಇದು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಬರವಣಿಗೆ ಸುಲಭದ ಕಾರ್ಯವಲ್ಲ. ಬರಹಗಾರ, ಓದುಗ ಮತ್ತು ಸಮಾಜದ ನಡುವೆ ಆಳವಾದ ನೈತಿಕ ಸಂಬಂಧ ಬೆಸೆದಿರುತ್ತದೆ. ಅದು ಕಾಲ, ಧರ್ಮ, ಭಾಷೆ, ಪಂಥಗಳನ್ನು ಮೀರಿರುತ್ತದೆ’ ಎಂದು ಹೇಳಿದರು.

‘ವಿಮರ್ಶೆ ಅರೆ ಮೌಲ್ಯಮಾಪನ. ಕೃತಿಯ ಮೂಲಸ್ವರೂಪಕ್ಕೆ ಹೊಕ್ಕು ಅದರ ಧ್ವನಿಗಳನ್ನು ಅರ್ಥೈಸಿಕೊಳ್ಳಬೇಕು. ಅದು ಎಂತಹ ದರ್ಶನ, ಅನುಭವ, ಕಾಣಿಕೆ, ಲೋಕದೃಷ್ಟಿ ಕೊಡುತ್ತದೆ ಎಂಬುದನ್ನು ಹುಡುಕಬೇಕು’ ಎಂದು ವಿಶ್ಲೇಷಿಸಿದರು.

ಸಾಹಿತಿ ಜಯಪ್ರಕಾಶ ಮಾವಿನಕುಳಿ ಮಾತನಾಡಿ, ‘ದೊಡ್ಡ ರೂಪಕಗಳ ಕಥೆಗಳಿಗಿಂತ ಹೃದಯವನ್ನು ಹಿಂಡುವ ಸಣ್ಣ ಕಥೆಗಳೇ ಮೇಲು. ಮನಷ್ಯರನ್ನು ಮನಷ್ಯರನ್ನಾಗಿ ರೂಪಿಸುವ ಸ್ಥಾಯಿ ಭಾವ ಇರಬೇಕು’ ಎಂದರು.

‘ಧರ್ಮ, ಜಾತಿ, ಪಂಥ, ಅಂತಸ್ತು, ಹೆಸರಿನಲ್ಲಿ ಶೋಷಣೆಗೆ ಒಳಗಾದವರಿಗೆ ಪುಸ್ತಕ ಎಂಬುವುದು ಸೂರ್ಯ ಇದ್ದಂತೆ. ಅವುಗಳನ್ನು ಓದಿ ಹೊಸ ವಿಚಾರ, ಜ್ಞಾನ ಸಂಪಾದನೆ ಮಾಡಿ ಉನ್ನತಿಗೆ ಏರಬಹುದು’ ಎಂದು ಹೇಳಿದರು.

ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಸಮೂಹ ವ್ಯವಸ್ಥಾಪಕ ಸೋಮಲಿಂಗ ಜಿ. ಗೆಣ್ಣೂರ್ ಮಾತನಾಡಿ, ‘ಅವಮಾನಗಳನ್ನು ಸವಾಲಾಗಿ ತೆಗೆದುಕೊಳ್ಳಬೇಕೆ ಹೊರತು ಸೇಡಿನ ರೂಪದಲ್ಲಿ ಸ್ವೀಕರಿಸಬಾರದು. ಜೀವನದ ಕಷ್ಟಗಳನ್ನು ಮೆಟ್ಟಿ ಉನ್ನತ ಹುದ್ದೆಗೆ ಏರಬೇಕು’ ಎಂದರು.

ಸಂಸ್ಥೆ ಅಧ್ಯಕ್ಷ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ‘ಇಂದಿನ ಯುವಕರು ಹೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಬೇಕು. ವೈಚಾರಿಕ ಚಿಂತನೆಯನ್ನು ಕೃತಿಗಳ ಮೂಲಕ ಹೊರ ತರಬೇಕು. ಯುವಕರು ನಮ್ಮನ್ನು ಹಿಂದಿಕ್ಕಿ ಮುಂದೆ ಹೋಗಬೇಕು’ ಎಂದರು.

ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣೆ ನಿಕಾಯದ ಮುಖ್ಯಸ್ಥ ಪ್ರೊ.ಬಿಎಂ ಕನಹಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ ಬಡಿಗೇರ, ಸಂದರ್ಶಕ ಪ್ರಾಧ್ಯಾಪಕ ಶ್ರೀಶೈಲ ನಾಗರಾಳ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.