ADVERTISEMENT

ಸೇತುವೆ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 4:30 IST
Last Updated 12 ಜುಲೈ 2020, 4:30 IST
ಶಹಾಬಾದ್‌ ತಾಲ್ಲೂಕಿನ ಭಂಕೂರ– ಮುತ್ತಗಾ ರಸ್ತೆಯಲ್ಲಿ ಸೇತುವೆಯ ಹಳೆಯ ರಿಂಗ್‌ಗಳನ್ನು ಅರ್ಧದಷ್ಟು ಬೀಳಿಸಿ, ಹನ್ನೆರಡರ ಬದಲು ಕೇವಲ ನಾಲ್ಕು ರಿಂಗ್‍ಗಳನ್ನು ಹಾಕಿರುವುದು
ಶಹಾಬಾದ್‌ ತಾಲ್ಲೂಕಿನ ಭಂಕೂರ– ಮುತ್ತಗಾ ರಸ್ತೆಯಲ್ಲಿ ಸೇತುವೆಯ ಹಳೆಯ ರಿಂಗ್‌ಗಳನ್ನು ಅರ್ಧದಷ್ಟು ಬೀಳಿಸಿ, ಹನ್ನೆರಡರ ಬದಲು ಕೇವಲ ನಾಲ್ಕು ರಿಂಗ್‍ಗಳನ್ನು ಹಾಕಿರುವುದು   

ಶಹಾಬಾದ್‌: ತಾಲ್ಲೂಕಿನ ಭಂಕೂರ– ಮುತ್ತಗಾ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು ₹4.25 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಮುಖಂಡ ಮಹೇಂದ್ರ ಕೋರಿ ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿ ಮಾಡುವಾಗ ಮುರುಮ್ ಮತ್ತು ಕಂಕರ್ ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು. ಆದರೆ ಇಲ್ಲಿ ರಸ್ತೆಯ ಬದಿಯಲ್ಲಿರುವ ಹೊಲದ ಮಣ್ಣು, ಕಲ್ಲಿನ ಗಣಿಯಲ್ಲಿರುವ ತ್ಯಾಜ್ಯ ಕಲ್ಲುಗಳನ್ನು ಹಾಕಿದ್ದಾರೆ. ಇದು ನಿಯಮ ಬಾಹಿರವಾದರೂ ಗುತ್ತಿಗೆದಾರರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರು. ಸೇತುವೆಗೆ ಹಾಕಿದ ಸಿಮೆಂಟ್ ರಿಂಗ್ (ಗುಮ್ಮಿ) ಒಡೆದು ಹೋಗಿವೆ. ಹಳೆಯ ಸೇತುವೆ ಕೆಳಗಡೆ ನೀರು ಹರಿದು ಹೋಗಲು 12 ಸಿಮೆಂಟ್‌ ರಿಂಗ್‍ಗಳನ್ನು ಅಳವಡಿಸಲಾಗಿತ್ತು. ಆದರೆ ಗುತ್ತಿಗೆದಾರ ಹಳೆಯ ಸೇತುವೆಯನ್ನು ಅರ್ಧದಷ್ಟು ಬೀಳಿಸಿ, ಕೇವಲ ನಾಲ್ಕು ರಿಂಗ್‌ಗಳನ್ನು ಹಾಕಿದ್ದಾರೆ. ಇಷ್ಟೊಂದು ಕಳಪೆ ಕಾಮಗಾರಿ ಮಾಡಿದರೂ ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ಇದನ್ನು ತರಲಾಗಿದೆ. ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಗುತ್ತಿಗೆದಾರರ ಬಿಲ್ ತಡೆಹಿಡಿದು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.