
ಕಲಬುರಗಿ: ಉತ್ತರದಿಂದ ದಕ್ಷಿಣಕ್ಕೆ ಇಳಿಜಾರಾದ ಭೂ ಪ್ರದೇಶದಿಂದ ಕೂಡಿರುವ ಕಲಬುರಗಿಯಲ್ಲಿ ಭೀಮಾ, ಕಾಗಿಣಾ, ಮುಲ್ಲಮಾರಿ, ಕಮಲಾವತಿ, ಅಮರ್ಜಾ ಸೇರಿ ಇತರೆ ನದಿ, ಹಳ್ಳಗಳು ಮಳೆಗಾಲದಲ್ಲಿ ತುಂಬಿ ಹರಿದು, ನೆರೆಯನ್ನು ಹೊತ್ತು ತಂದು ಸೇತುವೆಗಳ ಮೇಲೆ ಹರಿದಾಡಿ ರಸ್ತೆ ಸಂಪರ್ಕಕ್ಕೆ ಸಂಚಕಾರ ತರುತ್ತಿವೆ.
ಹತ್ತಾರು ಗ್ರಾಮಗಳಲ್ಲಿ ಹೊಸ ಸೇತುವೆ ನಿರ್ಮಾಣ, ಸೇತುವೆ ಎತ್ತರ ಹೆಚ್ಚಳ, ದುರಸ್ತಿಯಂತಹ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಅವುಗಳಲ್ಲಿ ಕೆಲವೊಂದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ‘ಭರವಸೆ’ ಲಭಿಸಿದ್ದರೆ, ಮತ್ತೆ ಕೆಲವು ಕಡತಗಳಲ್ಲೇ ಉಳಿದಿವೆ.
ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ಸೇರಿ ಜಿಲ್ಲೆಯಲ್ಲಿ 14,925 ಕಿ.ಮೀ. ರಸ್ತೆ ವಿಸ್ತರಿಸಿಕೊಂಡಿದೆ. 49 ಭಾರಿ ಸೇತುವೆಗಳು, 100ಕ್ಕೂ ಅಧಿಕ ಮಧ್ಯಮ, ಕಿರು ಸೇತುವೆಗಳಿವೆ. ಹಲವು ಸೇತುವೆಗಳು ಶಿಥಲಾವಸ್ಥೆ, ಅಗತ್ಯಕ್ಕಿಂತ ಕಡಿಮೆ ಎತ್ತರದಲ್ಲಿವೆ. ಮತ್ತೆ ಕೆಲವು ಮಳೆಗೆ ಕೊಚ್ಚಿ ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ಪಟ್ಟಣ ಮತ್ತು ಹಳ್ಳಿಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಸೇತುವೆಗಳ ಪೈಕಿ ಕೆಲವು ಸೇತುವೆಗಳು ಮಳೆಗಾಲದಲ್ಲಿ ಸಾರಿಗೆ ಸಂಚಾರಕ್ಕೆ ತೀವ್ರ ಅನಾನುಕೂಲತೆ ಉಂಟುಮಾಡುತ್ತಿವೆ. ಇದರಿಂದ ಪ್ರಯಾಣಿಕರು ಸಮಯದ ಜತೆಗೆ ಅಧಿಕ ಹಣವನ್ನೂ ವ್ಯಯಿಸಬೇಕಿದೆ. ಅನಾರೋಗ್ಯ, ತುರ್ತು ಚಿಕಿತ್ಸೆಯಂತಹ ಸಂದರ್ಭದಲ್ಲಿ ‘ಮೃತ್ಯುವಿನ’ ಮಾರ್ಗವಾಗುತ್ತಿವೆ ಎಂಬ ಅಳುಕು ಸೇತುವೆ ಅವಲಂಬಿತ ಗ್ರಾಮಗಳ ನಿವಾಸಿಗಳದ್ದು.
‘ಆಳಂದ ತಾಲ್ಲೂಕಿನ ದೇಗಾಂವ– ಬಿಲಗುಂದಿ ನಡುವಿನ ದೊಡ್ಡ ಹಳ್ಳದ ಸೇತುವೆ ಕೊಚ್ಚಿ ಹೋಗಿದೆ. ದೇಗಾಂವ ಗ್ರಾಮಸ್ಥರು 35 ಕಿ.ಮೀ. ದೂರದ ಕಲಬುರಗಿಗೆ ಹೋಗಬೇಕಾದರೆ ಆಳಂದ ಮೂಲಕ 65 ಕಿ.ಮೀ. ಪ್ರಯಾಣಿಸಬೇಕು. ಬಿಲಗುಂದಿ ಗ್ರಾಮಸ್ಥರು 18 ಕಿ.ಮೀ. ಅಂತರದಲ್ಲಿನ ಆಳಂದಕ್ಕೆ ಕಡಗಂಚಿ ಮೂಲಕ 35 ಕಿ.ಮೀ. ದೂರ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಕನಿಷ್ಠ 1 ಕಿ.ಮೀ. ರಸ್ತೆ ಮಾಡಿ, ಎರಡು ಸೇತುವೆಗಳು ನಿರ್ಮಿಸಿದರೆ ಹತ್ತಾರು ಹಳ್ಳಿಗಳಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ದೇಗಾಂವ ಗ್ರಾಮದ ಶರಣಪ್ಪ ರಂಗೋಜಿ.
ಕಾಳಗಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾದರೆ ಹಲವು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ಮಂಗಲಗಿ, ರಾಜಾಪುರ, ಹೊಸಳ್ಳಿ, ತೆಂಗಳಿ, ಮಲಘಾಣ, ಚಿಂತಪಳ್ಳಿ, ಕಂಚನಾಳ, ಕೋಡ್ಲಿ, ಹಲಚೇರಾ ಗ್ರಾಮಸ್ಥರ ಗೋಳು ಕೇಳುವವರಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರ ಸ್ಥಳೀಯರದ್ದು.
ಸೇತುವೆ ಎತ್ತರ ಹೆಚ್ಚಳ ಮಾಡಿ: ಚಿಂಚೋಳಿ ತಾಲ್ಲೂಕಿನಲ್ಲಿ ನಾಗರಾಳ ಜಲಾಶಯದ ನೀರು ನದಿಗೆ ಬಿಟ್ಟರೆ ಚಿಮ್ಮನಚೋಡ, ಗಾರಂಪಳ್ಳಿ, ತಾಜಲಾಪುರ ಹಾಗೂ ಗರಕಪಳ್ಳಿ ಭಕ್ತಂಪಳ್ಳಿ ಸೇತುವೆ ಮುಳುಗಿ ಸಂಪರ್ಕ ಕಡಿತವಾಗುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಜನರು ಜಲ ದಿಗ್ಬಂಧನಕ್ಕೆ ಒಳಗಾಗುವಂತಾಗಿದೆ. ಹೀಗಾಗಿ, ಸೇತುವೆಗಳ ಎತ್ತರ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ.
ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಸಂಜಯ ಪಾಟೀಲ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್, ಅವಿನಾಶ ಬೋರಂಚಿ, ವೆಂಕಟೇಶ ಹರವಾಳ, ಮಂಜುನಾಥ ದೊಡಮನಿ, ಗುಂಡಪ್ಪ ಕರೆಮನೋರ.
ಮಳೆಯಿಂದ ಮುಳುಗಡೆಯಾಗುವ ಸೇತುವೆಗಳನ್ನು ಗುರುತಿಸಲಾಗಿದ್ದು ಜನರ ಓಡಾಟಕ್ಕೆ ಪರ್ಯಾಯ ಮಾರ್ಗಗಳೂ ಗುರುತಿಸಲಾಗಿದೆ. ಯಡ್ರಾಮಿಯಲ್ಲಿ ಹಗ್ಗದ ಸಹಾಯದಿಂದ ಹಳ್ಳ ದಾಟಿದ ಸಂಬಂಧ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಜೂನ್ ಆರಂಭದಲ್ಲಿ ಸುರಿದ ಮಳೆಗೆ ರಸ್ತೆ ಸೇತುವೆ ಹಾಳಾಗಿವೆ. ತಾತ್ಕಾಲಿಕ ದುರಸ್ತಿಗೆ ₹1.15 ಅನುದಾನದನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಳಿಕ ದುರಸ್ತಿ ಕಾರ್ಯ ಶುರುವಾಗಲಿದೆಯಲ್ಲಪ್ಪ ಸುಬೇದಾರ ಆಳಂದ ತಹಶೀಲ್ದಾರ್
ಹೊದಲೂರು–ಜಮಗಾ (ಆರ್) ನಡುವಿನ ಸೇತುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ಸಂಪರ್ಕ ಕಡಿತದಿಂದ ಎರಡು ಗ್ರಾಮಗಳ ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಮಸ್ಯೆಯಾಗಿದೆಶಾಂತಕುಮಾರ ಪಾಟೀಲ ಹೊದಲೂರು ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.