ADVERTISEMENT

‘ನಾಫೆಡ್‌ ನಿರ್ಧಾರದಿಂದ ತೊಗರಿ ಬೆಲೆ ಕುಸಿತ‌’

ಮಾಜಿ ಶಾಸಕ ಬಿ.ಆರ್.ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:49 IST
Last Updated 11 ಜನವರಿ 2021, 2:49 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರ್ಗಿ: ‘ರಾಷ್ಟ್ರೀಯ ಕೃಷಿ ಮಾರಾಟ ಮಂಡಳಿಯವರು (ನಾಫೆಡ್‌) ಕಳೆದ ವರ್ಷ ಖರೀದಿಸಿದ್ದ ತೊಗರಿಯನ್ನು ಈಗ ಏಕಾಏಕಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ ತೊಗರಿ ಬೆಲೆ ಗಣನೀಯವಾಗಿ ಇಳಿಕೆಯಾಗಲಿದ್ದು, ರೈತರಿಗೆ ಪೆಟ್ಟು ಬೀಳಲಿದೆ. ಇದನ್ನು ಕಂಡೂ ಕಾಣದಂತೆ ಬಿಜೆಪಿ ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ
ಟೀಕಿಸಿದ್ದಾರೆ.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ ₹ 6000 ನಾಮಕೇ ವಾಸ್ತೆ ಘೋಷಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಅದಕ್ಕಿಂತ ಹೆಚ್ಚಾಗಿ ಗಾಯದ ಮೇಲೆ ಬರೆ ಎಳೆದಂತೆ ಕಳೆದ ವರ್ಷ ದಾಸ್ತಾನು ಮಾಡಿದ 1.60 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಇದೀಗ ಮಾರುಕಟ್ಟೆಯಲ್ಲಿ ₹ 5000ದಂತೆ ಪ್ರತಿ ಟನ್‌ಗೆ ಹರಾಜು ಮಾಡುವ ಮೂಲಕ ಸರ್ಕಾರವೇ ರೈತರಿಗೆ ಹೆಚ್ಚಿನ ಬೆಲೆ ಸಿಗದಂತೆ ಅನ್ಯಾಯ ಮಾಡುತ್ತಿದೆ’ ಎಂದು ಅವರು
ಆರೋಪಿಸಿದ್ದಾರೆ.

‘ಖಾಸಗಿ ಮಾರುಕಟ್ಟೆಯಂತೂ ಸಂಪೂರ್ಣವಾಗಿ ಬಿದ್ದು ಹೋಗಿದೆ. ಖಾಸಗಿ ವ್ಯಾಪಾರಸ್ಥರೆಲ್ಲರೂ ನಾಫೆಡ್‌ನಿಂದ ಕಡಿಮೆ ಬೆಲೆಗೆ
ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಾರೆ. ಹೀಗಾದರೆ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ₹ 5 ಸಾವಿರಕ್ಕಿಂತ ಹೆಚ್ಚಿನ ಬೆಲೆ ಸಿಗುವುದಿಲ್ಲ, ಒಟ್ಟಾರೆ ಪೆಟ್ಟು ಬಿಳುವುದು ಮಾತ್ರ ರೈತರಿಗೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ವ್ಯಾಪಾರಿಗಳು ಮತ್ತು ಬಂಡವಾಳಶಾಹಿಗಳ ಪರವಾದ ನಿಲುವುಗಳನ್ನು ಅನುಸರಿಸುವ ಮೂಲಕ ನಮ್ಮ ಭಾಗದ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ, ಇದಕ್ಕಿಂತ ಮಿಗಿಲಾಗಿ ಹೊರ ದೇಶಗಳಿಂದ ತೊಗರಿ ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದು ಖಂಡನೀಯ’ ಎಂದು ಅವರು ತಿಳಿಸಿದ್ದಾರೆ.

‘ಇಡೀ ಏಷ್ಯಾ ಖಂಡದಲ್ಲಿ ಭಾರಿ ಪ್ರಮಾಣದಲ್ಲಿ ತೊಡರಿ ಬೆಳೆಯುವ ಪ್ರದೇಶವೆಂದರೆ ಅದು ನಮ್ಮ ಕಲಬುರ್ಗಿ ಜಿಲ್ಲೆ, ನಮ್ಮ ಜಿಲ್ಲೆಯ ರೈತರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ‌ಜಿಲ್ಲೆಯ ಬಿಜೆಪಿ ಶಾಸಕರಿಗೆ ರೈತರ ಪರ ಬದ್ಧತೆ ಇಲ್ಲವೇ? ಜಿಲ್ಲಾ ಉಸ್ತುವಾರಿ ಸಚಿವರಿಗೆ ಅದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲವೇ’ ಎಂದು ಅವರು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.