ADVERTISEMENT

ಕಚೇರಿಯಲ್ಲೇ ಲೈಂಗಿಕ ಕಿರುಕುಳ: ಬಿಎಸ್ಸೆನ್ನೆಲ್‌ ಅಧಿಕಾರಿ ವಿರುದ್ಧ ಎಫ್‍ಐಆರ್

ಮಹಿಳಾ ಸಿಬ್ಬಂದಿ ದೂರು; ಇನ್ನೊಬ್ಬ ಮಹಿಳೆಯಿಂದ ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 5:57 IST
Last Updated 20 ಜುಲೈ 2020, 5:57 IST

ಕಲಬುರ್ಗಿ: ‘ಇಲ್ಲಿನ ಬಿಎಸ್ಸೆನ್ನೆಲ್‌ ಅಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಅದೇ ಕಚೇರಿಯ ಕೆಳ ಹಂತದ ಸಿಬ್ಬಂದಿಯೊಬ್ಬರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

ಇದಕ್ಕೆ ವಿರುದ್ಧವಾಗಿ ಮಹಿಳಾ ಸಿಬ್ಬಂದಿ ಹಾಗೂ ಒಬ್ಬ ನಿವೃತ್ತ ಸಿಬ್ಬಂದಿ ವಿರುದ್ಧವೇ ಕಚೇರಿಯ ಮತ್ತೊಬ್ಬ ಮಹಿಳಾ ಸಿಬ್ಬಂದಿ ಪ್ರತಿ ದೂರು ನೀಡಿದ್ದಾರೆ. ಇದರ ಎಫ್‌ಐಆರ್‌ ಕೂಡ ದಾಖಲಾಗಿದೆ.

‘ಬಿಎಸ್‍ಎನ್‍ಎಲ್ ಕಲಬುರ್ಗಿಯ ವಿಭಾಗೀಯ ಮಹಾಪ್ರಬಂಧಕ (ಡಿಜಿಎಂ) ಅನಂತರಾಮ ಎಂಬುವರು ಸಹಾಯಕ ಟೆಲಿಕಾಂ ಟೆಕ್ನಿಷಿಯನ್ ಆಗಿರುವ ನನಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಮೇಲಿಂದ ಮೇಲೆ ತಮ್ಮ ಚೇಂಬರ್‌ಗೆ ಕರೆಯುವುದು, ಅನುಚಿತವಾಗಿ ವರ್ತಿಸುವುದು, ತಮ್ಮ ಪಿ.ಎ ಆಗಿ ಕೆಲಸ ಮಾಡುವಂತೆ ಸೂಚಿಸುವುದು ಮಾಡಿದ್ದಾರೆ’ ಎಂದು ದೂರಿನಲ್ಲಿ ದಾಖಲಿದ್ದಾರೆ.

ADVERTISEMENT

ಕೆಲವೊಮ್ಮೆ ಚಹಾ ತಂದು ಕೊಟ್ಟಾಗ ಕೈಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾರೆ. ಆಗ ಹೊರಗೆ ಓಡಿ ಬಂದಿದ್ದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.

‘ಅಲ್ಲದೇ, ಈ ವಿಷಯವನ್ನು ಆಂತರಿಕ ಸಮಿತಿಯಲ್ಲಿರುವ ಮೇಲಧಿಕಾರಿಗಳಾದ ಅಶೋಕ, ಸುನೀಲ್, ವಿದ್ಯಾ ಎಂಬುವರಿಗೆ ಕಳೆದ ಫೆಬ್ರುವರಿಯಲ್ಲಿ ಮಾಹಿತಿ ನೀಡಿದ್ದೇನೆ. ಆದರೂ ಸ್ಪಂದಿಸಿಲ್ಲ’ ಎಂದೂ ಲಿಖಿತ ಹೇಳಿಕೆ ನೀಡಿದ್ದಾರೆ.

ಇದಕ್ಕೆ ವಿರುದ್ಧವಾಗಿ, ದೂರು ನೀಡಿದ ಮಹಿಳೆ ಹಾಗೂ ಇನ್ನೊಬ್ಬ ನಿವೃತ್ತ ಸಿಬ್ಬಂದಿ ಮೇಲೂ ಪ್ರತಿದೂರು ದಾಖಲಾಗಿದ್ದು, ಎರಡೂ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಹಿಳಾ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನಕ್ಕೆ ಒತ್ತಾಯ: ‘ಲೈಂಗಿಕ ದೌರ್ಜನ್ಯ ಎಸಗಿದ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು’ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಹಾಗರಗಿ ಆಗ್ರಹಿಸಿದ್ದಾರೆ.

‘ದೂರು ದಾಖಲಾದ ನಂತರ ಡಿಜಿಎಂ ಹಾಗೂ ಇನ್ನಿತರ ಅಧಿಕಾರಿಗಳು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಬಂಧಿಸಬೇಕು. ನೋಂದ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕು. ಅಧಿಕಾರಿಗಳು ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸರು ದೃಢ ನಿರ್ಧಾರ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.