
ಕಲಬುರಗಿ: ‘ಮೊದಲೆಲ್ಲ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹಿಂದುಳಿದ ನಾಯಕರ ಜಯಂತಿಗಳನ್ನು ಆಚರಿಸುತ್ತಿರಲಿಲ್ಲ. ಹಿಂದುಳಿದವರ ಒಗ್ಗಟ್ಟು ನೋಡಿ ಇದೀಗ ಎರಡೂ ಪಕ್ಷಗಳು ಅನಿವಾರ್ಯವಾಗಿ ಜೈಭೀಮ ಘೋಷಣೆ ಮೊಳಗಿಸುತ್ತಿವೆ’ ಎಂದು ಬಿಎಸ್ಪಿ ರಾಜ್ಯ ಸಂಯೋಜಕ, ಕರ್ನಾಟಕ ಉಸ್ತುವಾರಿ ದಿನೇಶ ಗೌತಮ ಟೀಕಿಸಿದರು.
ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಗುರುವಾರ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರ 70ನೇ ಜನ್ಮದಿನದ ಅಂಗವಾಗಿ ಪಕ್ಷದಿಂದ ಆಯೋಜಿಸಿದ್ದ ಜನಕಲ್ಯಾಣ ಆರ್ಥಿಕ ಸಹಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆಲ್ಲ ಬುದ್ಧ ಜಯಂತಿ, ಬಸವ ಜಯಂತಿ, ನಾರಾಯಣ ಗುರುಗಳ ಜಯಂತಿ ಸೇರಿದಂತೆ ಸಮಾಜ ಸುಧಾರಣೆಗೆ ಅಹರ್ನಿಶಿ ದುಡಿದ ಸಂತರು, ಗುರುಮಹಾಂತರು, ಮಹಾಪುರುಷರ ಜಯಂತಿ ಆಚರಿಸುತ್ತಿರಲಿಲ್ಲ. ಮಾಯಾವತಿ ನೇತೃತ್ವದಲ್ಲಿ ಬಿಎಸ್ಪಿ ಪಕ್ಷದಡಿ ಹಿಂದುಳಿದ ವರ್ಗದವರು ಒಗ್ಗೂಡುವುದನ್ನು ಅರಿತು ಕಾಂಗ್ರೆಸ್, ಬಿಜೆಪಿ ಜೈಭೀಮ ಜಪ ಶುರು ಮಾಡಿವೆ’ ಎಂದು ಟೀಕಿಸಿದರು.
‘2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಉತ್ತಮ ಸಾಧನೆ ತೋರಲಿದೆ. 2029ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಎಸ್ಪಿ ನಿಶ್ಚಿತವಾಗಿಯೂ ಖಾತೆ ತೆರೆಯಲಿದ್ದು, ಮಾಯಾವತಿ ಅವರ ಕೈಬಲಪಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸಂಯೋಜಕ ಎಲ್.ಆರ್.ಬೋಸ್ಲೆ ಮಾತನಾಡಿದರು. ಪಕ್ಷದ ನಾಯಕ ಅನಿಲ ಟೇಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ತಿಪ್ಪಣ್ಣ ಕಿನ್ನೂರ, ಮೈಲಾರಿ ಶೆಳ್ಳಿಗಿ, ಶಿವಲೀಲಾ ಪಾಟೀಲ, ಮೊಬಶಿರಾ, ಮಾಯಾ ಸೂಗುರ, ಶಿವಯೋಗಿ ಹಡಗಿಲ, ಶರಣು ಹಂಗರಗಿ, ಶಂಕರ ಕಿಲ್ಲೇದಾರ ಇದ್ದರು.
ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಕಾನ್ಶಿರಾಂ ಅವರ ಚಿತ್ರಗಳಿಗೆ ಗೌರವ ಸಲ್ಲಿಸಲಾಯಿತು.
ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ತಾಲ್ಲೂಕುಗಳ ಮುಖಂಡರು, ಕಾರ್ಯಕರ್ತರು ಬಿಎಸ್ಪಿ ಸೇರ್ಪಡೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.