ADVERTISEMENT

‘ಬುದ್ಧ, ಬಸವ, ಅಂಬೇಡ್ಕರ್ ರತ್ನತ್ರಯರು’: ಕುಲಸಚಿವ ಪ್ರೊ.ರಮೇಶ ಲಂಡನಕರ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:32 IST
Last Updated 1 ಜೂನ್ 2025, 15:32 IST
ಕಲಬುರಗಿಯ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಬುದ್ಧ, ಬಸವ, ಅಂಬೇಡ್ಕರ್ ಚಿತ್ರಕ್ಕೆ ಗೌರವ ಸಲ್ಲಿಸಿದರು. ಬಸವರಾಜ ಕೊನೇಕ, ‍ಪ್ರೊ.ರಮೇಶ ಲಂಡನಕರ್, ಗವಿಸಿದ್ದಪ್ಪ ಪಾಟೀಲ, ಜಯದೇವಿ ಗಾಯಕವಾಡ ಸೇರಿದಂತೆ ಇತರರು ಭಾಗವಹಿಸಿದ್ದರು
ಕಲಬುರಗಿಯ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಬುದ್ಧ, ಬಸವ, ಅಂಬೇಡ್ಕರ್ ಚಿತ್ರಕ್ಕೆ ಗೌರವ ಸಲ್ಲಿಸಿದರು. ಬಸವರಾಜ ಕೊನೇಕ, ‍ಪ್ರೊ.ರಮೇಶ ಲಂಡನಕರ್, ಗವಿಸಿದ್ದಪ್ಪ ಪಾಟೀಲ, ಜಯದೇವಿ ಗಾಯಕವಾಡ ಸೇರಿದಂತೆ ಇತರರು ಭಾಗವಹಿಸಿದ್ದರು   

ಕಲಬುರಗಿ: ‘ಬುದ್ಧ-ಬಸವ-ಅಂಬೇಡ್ಕರ್‌ ಅವರು ಜಾಗತಿಕ ದಾರ್ಶನಿಕರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಹೀಗಾಗಿ ಅವರು ರತ್ನತ್ರಯರಾಗಿದ್ದಾರೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಭಿಪ್ರಾಯಪಟ್ಟರು.

ನಗರದ ಕುಸನೂರ ರಸ್ತೆಯಲ್ಲಿರುವ ರಂಗಾಯಣದಲ್ಲಿ ಸಿರಿಗನ್ನಡ ವೇದಿಕೆಯು ಬುದ್ಧ–ಬಸವ–ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಹಾಗೂ ತ್ರಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ರತ್ನತ್ರಯರ ತತ್ವ, ಸಿದ್ಧಾಂತಗಳ ಮೇಲೆ ನಡೆಯುತ್ತ ಸಾಗಿದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಜಯದೇವಿ ಗಾಯಕವಾಡ, ‘ಬುದ್ಧ, ಬಸವ, ಅಂಬೇಡ್ಕರ್ ಅವರು ಭಾರತ ದೇಶದ ಮೂರು ವಸಂತ ಕಾಲಗಳು. ಅವರ ಚಿಂತನೆಗಳು ಸಮಸಮಾಜ ನಿರ್ಮಾಣ, ಜಾತಿ–ಮತ–ಧರ್ಮ ಮೀರಿದ ಮನುಕುಲದ ಉದ್ಧಾರಕ್ಕೆ ಎಲ್ಲಾ ಕಾಲಕ್ಕೂ ಪ್ರಸ್ತುತ’ ಎಂದರು.

ಆರೋಗ್ಯ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ರವಿಕಾಂತಿ ಎಸ್.ಕ್ಯಾತನಳ್ಳಿ, ‘ಬುದ್ಧ ಆಸೆಯೇ ದುಃಖಕ್ಕೆ ಮೂಲವೆಂದರೆ, ಬಸವಣ್ಣನವರು ಕಾಯಕವೇ ಕೈಲಾಸವೆಂದರು. ಡಾ.ಅಂಬೇಡ್ಕರ್ ಸಂವಿಧಾನ ನೀಡಿ ಸಮಾನತೆ ತಂದರು’ ಎಂದರು.

ಸಿದ್ದಲಿಂಗೇಶ್ವರ ಬುಕ್ ಡಿಪೊ ಮುಖ್ಯಸ್ಥ ಬಸವರಾಜ ಕೊನೇಕ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು. ಸಿದ್ದಪ್ಪ ಹೊಸಮನಿ ಸ್ವಾಗತಿಸಿದರು. ರಾಜಕುಮಾರ ಮಾಳಗೆ ನಿರೂಪಿಸಿದರು. ಶೀಲಾದೇವಿ ಎಸ್.ಬಿರಾದಾರ ವಂದಿಸಿದರು.

ಶಂಕರ ಟಿ.ಬತ್ತಾಸಿ, ಸೈಯದ್‌ ಆರಿಫ್ ಮುರ್ಷಿದ್, ವಿಜಯಕುಮಾರ ಬಿ. ಬೀಳಗಿ, ಕಾಳಪ್ಪ ಭೀಮಪ್ಪ ಮಾದರ, ಸುಖದೇವಿ ಗಂಟೆ, ಸಚ್ಚಿದಾನಂದ ಆರ್. ತೊಬರೆ, ಸವಿತಾ ಕಾಂಬಳೆ, ಪೂರ್ಣಿಮಾ ನಾಗನಾಥರಾವ, ಜಗದೇವ ಭೀಮರಾಯ ಸೇರಿದಂತೆ ಹಲವರು ಸಾಧಕರಿಗೆ ‘ತ್ರಿರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.