ADVERTISEMENT

ಕಲಬುರಗಿ: ಬುದ್ಧನ ಮೂರ್ತಿಗಳ ಉದ್ಘಾಟಿಸಿದ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:17 IST
Last Updated 12 ಮೇ 2025, 16:17 IST
ವೈಶಾಖ ಬುದ್ಧ ಪೂರ್ಣಿಮೆ ದಿನಾಚರಣೆ ದಿನವಾದ ಸೋಮವಾರ ಕಲಬುರಗಿಯ ಬಸವ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಥಳೀಯ ನಿವಾಸಿಗಳು ಬೃಹತ್‌ ಹಾರ ಹಾಕಿ ಗೌರವಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಇದ್ದಾರೆ  –ಪ್ರಜಾವಾಣಿ ಚಿತ್ರ
ವೈಶಾಖ ಬುದ್ಧ ಪೂರ್ಣಿಮೆ ದಿನಾಚರಣೆ ದಿನವಾದ ಸೋಮವಾರ ಕಲಬುರಗಿಯ ಬಸವ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಥಳೀಯ ನಿವಾಸಿಗಳು ಬೃಹತ್‌ ಹಾರ ಹಾಕಿ ಗೌರವಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಇದ್ದಾರೆ  –ಪ್ರಜಾವಾಣಿ ಚಿತ್ರ   

ಕಲಬುರಗಿ: ಇಲ್ಲಿನ ಬಸವ ನಗರದ ಕರುಣಾ ಬುದ್ಧ ವಿಹಾರದಲ್ಲಿ ಪಂಚಲೋಹದ ಭೂಮಿಸ್ಪರ್ಶ ಮುದ್ರೆಯ ಬುದ್ಧನ ಮೂರ್ತಿಯನ್ನು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಉದ್ಘಾಟಿಸಿದರು. ಬಳಿಕ ಬಸವನಗರದ ಸಮುದಾಯ ಭವನ ಆವರಣದಲ್ಲಿ ಬುದ್ಧನ ಶಿಲ್ಪಮೂರ್ತಿ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 1960ರ ದಶಕದ ದಿನಗಳಿಗೆ ಜಾರಿದರು. ಬಸವನಗರದ ಬಸವಣ್ಣನ ಕಟ್ಟೆಯಲ್ಲಿ ಬೋಧಿವೃಕ್ಷ ನೆಟ್ಟ ಪ್ರಸಂಗ ನೆನಪಿಸಿಕೊಂಡರು. ‘ಈ ಬೋಧಿ ವೃಕ್ಷಕ್ಕೀಗ 60ರಿಂದ 65 ವರ್ಷಗಳಿರಬಹುದು’ ಎಂದರು.

‘ಒಂದೊಮ್ಮೆ ಕಲಬುರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೆ. ನೀವೆಲ್ಲ ಸೇರಿ ಬೆಂಗಳೂರಿನ ವಿಧಾನಸೌಧಕ್ಕೆ ಕಳುಹಿಸಿದಿರಿ. ಅಲ್ಲಿಂದ ದೆಹಲಿಗೆ ಹೋದೆ. ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. 11 ಸಲ ಚುನಾಯಿತನಾದೆ. ಇದಕ್ಕೆ ಅಂಬೇಡ್ಕರ್ ಸಂವಿಧಾನದ ಬಲ, ಬುದ್ಧನ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಕಾರಣ’ ಎಂದರು.

ADVERTISEMENT

‘ಕೆಳವರ್ಗದವರ ಏಳಿಗೆ, ಸಂವಿಧಾನದ ರಕ್ಷಣೆಗಾಗಿ ನಾನು ದೆಹಲಿಯಲ್ಲಿ ಹೋರಾಡುತ್ತಿದ್ದೇನೆ. ನಾನು ಹೆದರುವವನಲ್ಲ. ಪ್ರಿಯಾಂಕ್‌ ಕೂಡ ಹೆದರಲ್ಲ. ನಾವು ವಿಚಾರಗಳಿಗೆ ಬದ್ಧ’ ಎಂದರು.

‘ನಾವೆಲ್ಲ ಅಂಬೇಡ್ಕರ್‌ ಹೇಳಿದ ಮಾರ್ಗದಲ್ಲಿ ಸಾಗಬೇಕಿದೆ. ಶಿಕ್ಷಣ ಪಡೆಯಬೇಕಿದೆ, ಸಂಘಟಿತರಾಗಬೇಕಿದೆ, ಸಂಘರ್ಷದ ಶಕ್ತಿ ಬೆಳೆಸಿಕೊಳ್ಳಬೇಕಿದೆ. ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಪಡೆದವರಿಗೆಲ್ಲ ನೌಕರಿ ಸಿಗದಿರಬಹುದು. ಆದರೆ, ಅವರು ಗುಲಾಮಗಿರಿ ಮಾಡಲ್ಲ. ಒಂದೇ ಹೊತ್ತು ಉಂಡರೂ ಸ್ವಾಭಿಮಾನದಿಂದ ಬದುಕುವ ಶಕ್ತಿ ಅವರಿಗೆ ಬರುತ್ತದೆ’ ಎಂದು ಪ್ರತಿಪಾದಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಪಾಲಿಕೆ ಸದಸ್ಯೆ ರೇಣುಕಾ ಹೋಳ್ಕರ್‌, ಹಣಮಂತರಾವ ಬೆಡಜಿರ್ಗಿ, ರಾಹುಲ್‌ ಯುವಕ ಸಂಘದ ಅಧ್ಯಕ್ಷ ಶಶಿಕಾಂತ ಮೂರ್ತಿ, ಸತ್ಯಶೀಲ ಬಿಕ್ಕುಣಿ, ಆರ್ಯಶೀಲ ಬಿಕ್ಕುಣಿ, ಸುಮನಾ ಬಿಕ್ಕುಣಿ, ಸಂಘಮಿತ್ರ ಬಿಕ್ಕುಣಿ, ಬೋಧಿಚಿತ್ರ ಬಿಕ್ಕುಣಿ, ಶೀಲರಕ್ಷಿತ ಬಿಕ್ಕುಣಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಸೂರ್ಯಕಾಂತ ನಿಂಬಾಳಕರ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.