ಕಲಬುರಗಿ: ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದ ಜನರಿಗೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಸೆ ಮೂಡಿಸಿದ್ದಾರೆ.
ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಬಹುತೇಕ ಯೋಜನೆಗಳು ಕೆಕೆಆರ್‌ಡಿಬಿ ಅನುದಾನದಲ್ಲೇ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ. ಆಯಾ ಇಲಾಖೆಗಳಿಂದ ಬರಬೇಕಾದ ನೆರವಿನ ಪ್ರಮಾಣವೂ ಕಡಿಮೆಯಾಗಿದೆ. ಜಿಲ್ಲೆಯ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು, ಕಾಲುವೆಗಳ ಆಧುನೀಕರಣ, ಮಲ್ಲಾಬಾದ ಏತ ನೀರಾವರಿ ಯೋಜನೆ ಅನುಷ್ಠಾನ, ತೊಗರಿ ಬೇಳೆ ಮೌಲ್ಯವರ್ಧನೆ, ಮಾರುಕಟ್ಟೆ ಅವಕಾಶ ಕಲ್ಪಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ರೈತರಿಗೆ ನಿರಾಸೆಯಾಗಿದೆ.
ಆಳಂದ ಮತ್ತು ಚಿತ್ತಾಪುರ ತಾಲ್ಲೂಕಿನಲ್ಲಿನ ಕೆರೆ ತುಂಬಿಸುವ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ಕಲಬುರಗಿ, ಚಿಂಚೋಳಿ, ಕಾಳಗಿ, ಜೇವರ್ಗಿ, ಅಫಜಲಪುರ ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆಗಳ ಪ್ರಸ್ತಾವವಿಲ್ಲ. ಜಿಲ್ಲೆಯ ಅಮರ್ಜಾ, ಬೆಣ್ಣೆತೊರಾ, ಸೊನ್ನ ಭೀಮಾ ನೀರಾವರಿ ಯೋಜನೆಗಳ ಕಾಲುವೆಗಳ ವಿಸ್ತರಣೆಗೆ ಹಣ ತೆಗೆದಿರಿಸಿಲ್ಲ.
ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಘೋಷಣೆಯೊಂದನ್ನು ಹೊರತುಪಡಿಸಿದರೆ ಕಲಬುರಗಿಯ ಬಹಮನಿ ಕೋಟೆ, ಮಳಖೇಡದ ರಾಷ್ಟ್ರಕೂಟರ ಕೋಟೆ, ನಾಗಾವಿಯ ಪ್ರಾಚೀನ ವಿಶ್ವವಿದ್ಯಾಲಯದ ಪುನರುಜ್ಜೀವನದ ಮೂಲಕ ಪ್ರವಾಸಿಗರನ್ನು ಸೆಳೆಯುವ ಕುರಿತು ಯಾವುದೇ ಘೋಷಣೆಗಳನ್ನು ಹೊರಡಿಸಿಲ್ಲ. ಅಲ್ಲದೇ, ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ದೇವಲಗಾಣಗಾಪುರ ದತ್ತ ಕ್ಷೇತ್ರ, ಘತ್ತರಗಿ ಭಾಗ್ಯವಂತಿ ದೇವಿ ದೇವಸ್ಥಾನ, ಸನ್ನತಿ ಚಂದ್ರಲಾಂಬಾ ದೇವಸ್ಥಾನಗಳ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ.
ಜಿಲ್ಲೆಯಲ್ಲಿ ಶಹಾಬಾದ್, ಕಮಲಾಪುರ, ಕಾಳಗಿ ಹಾಗೂ ಯಡ್ರಾಮಿ ತಾಲ್ಲೂಕುಗಳು ರಚನೆಯಾಗಿ ಐದಾರು ವರ್ಷಗಳಾಗುತ್ತಾ ಬಂದರೂ ಅಲ್ಲಿ ಇನ್ನೂ ತಾಲ್ಲೂಕು ಆಡಳಿತ ಸೌಧಗಳ ನಿರ್ಮಾಣವಾಗಿಲ್ಲ. ಬಹುತೇಕ ಇಲಾಖೆಗಳ ಕಚೇರಿಗಳು ಇನ್ನೂ ಹಳೆ ತಾಲ್ಲೂಕುಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ದಕ್ಷ ಆಡಳಿತ ನೀಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಯಾವುದೇ ಘೋಷಣೆಗಳು ಬಜೆಟ್‌ನಲ್ಲಿ ಕಂಡು ಬಂದಿಲ್ಲ.
ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಕಾರ್ಯ ಯೋಜನೆಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
ಹೊಸ ತಾಲ್ಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಅವುಗಳನ್ನು 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆಯೂ ಯಾವುದೇ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ಮಾಡಿಲ್ಲ.
ಬೋಧಕ ಹುದ್ದೆ ಭರ್ತಿ ಪ್ರಸ್ತಾವವಿಲ್ಲ
ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜಯದೇವ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಸಹ ಪ್ರಾಧ್ಯಾಪಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿದ್ದರು. ಗುಲಬರ್ಗಾ ವಿ.ವಿ.ಯ ಬಹುತೇಕ ವಿಭಾಗಗಳಲ್ಲಿ ಪೂರ್ಣಕಾಲಿಕ ಪ್ರಾಧ್ಯಾಪಕರಿಲ್ಲ. ಒಬ್ಬ ಪ್ರಾಧ್ಯಾಪಕರು ನಾಲ್ಕೈದು ವಿಭಾಗಗಳನ್ನು ನೋಡಿಕೊಳ್ಳಬೇಕಾದ ಹೊಣೆ ಇದೆ. ಕುಲಪತಿಯಾಗಿದ್ದ ಪ್ರೊ.ದಯಾನಂದ ಅಗಸರ ಪ್ರೊ.ವಿಜಯಕುಮಾರ್ ಪ್ರೊ.ಪರಿಮಳಾ ಅಂಬೇಕರ್ ಪ್ರೊ.ವಾಘಮೋರೆ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ. ವಿ.ವಿ.ಯಲ್ಲಿ ಸುಮಾರು 30 ಪೂರ್ಣ ಪ್ರಮಾಣದ ಪ್ರಾಧ್ಯಾಪಕರಷ್ಟೇ ಇದ್ದು ಸಂಶೋಧನಾ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ವಿ.ವಿ.ಯಲ್ಲಿರುವ ಹಲವು ಅಧ್ಯಯನ ಪೀಠಗಳಿಗೂ ಆರ್ಥಿಕ ನೆರವು ಘೋಷಣೆಯಾಗಿಲ್ಲ.
ಉನ್ನತ ದರ್ಜೆಯ ಸೇವೆಗಳನ್ನು ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹೆಚ್ಚು ಆದ್ಯತೆ ನೀಡಬೇಕು ಎನ್ನುವುದನ್ನು ಮನಗಂಡಿರುವ ಸಿದ್ದರಾಮಯ್ಯ ಅವರು ಭರಪೂರ ಯೋಜನೆಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಕಲಬುರಗಿಗೆ ಸಿಕ್ಕಿದ್ದೇನು?
₹100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಆರಂಭ
₹50 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಮೆಗಾ ಡೇರಿ ಆರಂಭ
₹ 10 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ
₹ 200 ಕೋಟಿ ವೆಚ್ಚದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ 50 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಣ
ವಿದ್ಯಾರ್ಥಿಗಳ ವಿಶೇಷ ಕೌಶಲ ಅಭಿವೃದ್ಧಿಗೆ ₹ 10 ಕೋಟಿ
ಪ್ರಾದೇಶಿಕ ಎಂಡೊಕ್ರೈನಾಲಜಿ ಕೇಂದ್ರ ಆರಂಭ
ಜೇವರ್ಗಿಯಲ್ಲಿ ನೂತನ ನರ್ಸಿಂಗ್ ಕಾಲೇಜು ಆರಂಭ
ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ
ಸೇಡಂನಲ್ಲಿ ಸರ್ಕಾರಿ ಐಟಿಐ ಕೇಂದ್ರ ಮೇಲ್ದರ್ಜೆಗೆ ₹ 25 ಕೋಟಿ
ಕಲಬುರಗಿ ಕೆಜಿಟಿಟಿಐ ಕೇಂದ್ರದಲ್ಲಿ ₹10 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ
ವಾಗ್ದರಿ–ರಿಬ್ಬನಪಲ್ಲಿ ರಸ್ತೆ ಅಭಿವೃದ್ಧಿಗೆ ಡಿಪಿಆರ್
ಕಮಲಾಪುರ, ಶಹಾಬಾದ್‌ನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆರಂಭ
ಹುದ್ದೆ ಭರ್ತಿಯ ಹಳೆಯ ಪ್ರಸ್ತಾವ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಹಿಂದೆಯೇ ಹೇಳಿದ್ದರು. ಅದನ್ನೇ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕೆಕೆಆರ್‌ಡಿಬಿಯ ₹ 200 ಕೋಟಿ ಅನುದಾನದಲ್ಲಿ 50 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಮಾಡಲಾಗಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳನ್ನು ಸುಧಾರಿಸುವ ಬಗ್ಗೆ ಮಂಡಳಿ ಅಧ್ಯಕ್ಷರು ಈಗಾಗಲೇ ಹೇಳಿಕೆ ನೀಡಿದ್ದರು.
ಮೈಸೂರು ವಿಶ್ವವಿದ್ಯಾಲಯದ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ₹ 2 ಕೋಟಿ ನೀಡಿರುವ ಮುಖ್ಯಮಂತ್ರಿಗಳು ಗುಲಬರ್ಗಾ ವಿ.ವಿ.ಯ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ₹ 50 ಸಾವಿರವನ್ನೂ ನೀಡಿಲ್ಲಪ್ರೊ.ಎಚ್.ಟಿ.ಪೋತೆ, ನಿರ್ದೇಶಕ ಕನ್ನಡ ಅಧ್ಯಯನ ಸಂಸ್ಥೆ
ಕಲಬುರಗಿ ರಂಗಾಯಣಕ್ಕೆ ಸುಣ್ಣ
ಸ್ವಕ್ಷೇತ್ರ ಮೈಸೂರಿನ ರಂಗಾಯಣದ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನ ಘೋಷಣೆ ಮಾಡಿರುವ ಮುಖ್ಯಮಂತ್ರಿ ಅವರು ಕಲಬುರಗಿ ರಂಗಾಯಣಕ್ಕೆ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ಇದುವರೆಗೆ ಕಲಾವಿದರ ನೇಮಕಾತಿಯೂ ನಡೆಯದ ಪರಿಣಾಮ ಚಟುವಟಿಕೆಗಳು ಕುಂಠಿತಗೊಂಡಿವೆ. ಸಾಲದೆಂಬಂತೆ ಕಲಬುರಗಿ ರಂಗಾಯಣದ ಬಳಿ ಇರುವ ₹ 41 ಲಕ್ಷ ಅನುದಾನವನ್ನು ಬೆಂಗಳೂರಿನಲ್ಲಿ ನಡೆಯಲಿರುವ ರಂಗ ಪರಿಷೆಗೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಚನೆ ನೀಡಿದೆ. ಆ ಮೂಲಕ ಈ ಭಾಗದಲ್ಲಿನ ರಂಗಚಟುವಟಿಕೆಗಳಿಗೆ ಎಳ್ಳು ನೀರು ಬಿಟ್ಟಂತಾಗಿದೆ ಎಂದು ರಂಗಕರ್ಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.