
ಜೇವರ್ಗಿ: ಪ್ರತಿ ಬಾರಿಯಂತೆ ಈ ಸಲವೂ ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲ್ಲೂಕಿನ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಬಗ್ಗೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಕಳೆದ ವರ್ಷ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲ್ಲೂಕುಗಳಿಗೆ ವಿಶೇಷ ಕೊಡುಗೆಗಳು ಇರಲಿಲ್ಲ. ಆದರೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಅವರು ತಮ್ಮ ಕ್ಷೇತ್ರಕ್ಕೆ ಹೇರಳ ಅನುದಾನ ತಂದಿದ್ದಾರೆ. ಹೀಗಿದ್ದರೂ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಆಹಾರ ಸಂಸ್ಕರಣಾ ಘಟಕ, ಮಲ್ಲಾಬಾದ ಏತ ನೀರಾವರಿ ಯೋಜನೆ, ಅರ್ಧಕ್ಕೆ ನಿಂತ ನರಿಬೋಳ–ಚಾಮನೂರ, ಹೊನ್ನಾಳ–ತುನ್ನೂರ ಸೇತುವೆ, ಯಡ್ರಾಮಿ ಪಟ್ಟಣದಲ್ಲಿ ಬಸ್ ಘಟಕ, ಕೆರೆ ತುಂಬಿಸುವ ಯೋಜನೆ, ಗ್ರಾಮೀಣ ರಸ್ತೆಗಳ ಸುಧಾರಣೆ, ನೀರಾವರಿ ಸೇರಿದಂತೆ ಅಗತ್ಯ ಯೋಜನೆಗಳ ಮಂಜೂರಾತಿಗೆ ಜನರು ಎದುರು ನೋಡುತ್ತಿದ್ದಾರೆ.
ಪೂರ್ಣಗೊಳ್ಳದ ಮಲ್ಲಾಬಾದ ಏತ ನೀರಾವರಿ ಯೋಜನೆ: ಯಡ್ರಾಮಿ ತಾಲ್ಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳ ಹಾಗೂ ಶಹಾಪುರ, ಸುರಪುರ ತಾಲ್ಲೂಕಿನ ಹತ್ತಾರು ಹಳ್ಳಿಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಎರಡು ದಶಕ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಜೇವರ್ಗಿ ತಾಲ್ಲೂಕಿನ 35ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭೀಮಾ ನದಿ ಸಮೃದ್ದವಾಗಿ ಹರಿಯುತ್ತದೆ. ಆ ನೀರು ಬಳಸಿಕೊಂಡು ಜೇವರ್ಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಹಾಗೂ ಕೃಷಿ ಭೂಮಿ ನೀರಾವರಿಯನ್ನಾಗಿಸುವ ಪ್ರಯತ್ನಗಳು ಕಳೆದ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ.
ಶಾಸಕ ಡಾ.ಅಜಯಸಿಂಗ್ ಅವರು ಅಧಿಕಾರದಲ್ಲಿ ಇದ್ದೇ ಹನ್ನೆರೆಡೂವರೆ ವರ್ಷಗಳು ಪೂರ್ಣಗೊಂಡಿವೆ. ತಮ್ಮ ಭಾಷಣದಲ್ಲಿ ಸದಾ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಹೇಳುವ ಶಾಸಕರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ. ಎನ್.ಧರ್ಮಸಿಂಗ್ ಅವಧಿಯಲ್ಲಿ ಬಾಕಿ ಉಳಿಸಿಕೊಂಡೇ ಬಂದಿರುವ ಫುಡ್ ಪಾರ್ಕ್ ಹಾಗೂ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾದಷ್ಟು ಅನುದಾನ ತಂದಿಲ್ಲ ಎಂದು ಜನ ಬೇಸರದಿಂದಲೇ ಹೇಳುತ್ತಾರೆ.
ವಿಶೇಷ ಪ್ಯಾಕೇಜ್ ಅಗತ್ಯ: ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿಯನ್ನು ಕಳಚಿಕೊಳ್ಳಲು ಯತ್ನಿಸುತ್ತಿರುವ ಎರಡೂ ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ. ದೊಡ್ಡ ದೊಡ್ಡ ಯೋಜನೆಗಳು ಬರಬೇಕಾಗಿದೆ. ಹಾಗಾಗಿ, ಎರಡೂ ತಾಲ್ಲೂಕುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಕೂಗು ಹಲವು ವಲಯಗಳಿಂದ ಕೇಳಿ ಬರುತ್ತಿದೆ.
ಬಗೆಹರಿಯದ ಒಳಚರಂಡಿ ಸಮಸ್ಯೆ: ಜೇವರ್ಗಿ ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಕಳೆದ ಅನೇಕ ವರ್ಷಗಳಿಂದ ಸ್ಥಳೀಯರು ಒಳಚರಂಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಮರ್ಪಕ ಒಳಚರಂಡಿ ವ್ಯವಸ್ಥೆಗಳೂ ಆಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಎಲ್ಲಾ ಬಡಾವಣೆಗಳಲ್ಲಿ ಸಿಸಿ ರಸ್ತೆ, ಉದ್ಯಾನವನಗಳ ಅಭಿವೃದ್ಧಿ ಆಗಬೇಕಿದೆ.
ಪ್ರತ್ಯೇಕ ತಾಲ್ಲೂಕು ಆಗಿರುವ ಯಡ್ರಾಮಿ ಪಟ್ಟಣ ಅಭಿವೃದ್ಧಿಯ ಹಾದಿಗೆ ಇನ್ನೂ ಹೊರಳಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅಭಿವೃದ್ಧಿಗಾಗಿ ಕಾಯುತ್ತಿವೆ. ಬಿಇಒ, ಅಬಕಾರಿ, ಲೋಕೋಪಯೋಗಿ, ಪಂಚಾಯತ್ ರಾಜ್, ಅರಣ್ಯ, ಕೃಷಿ, ತೋಟಗಾರಿಕೆ, ಪಶು, ಆಹಾರ, ಎಪಿಎಂಸಿ ಸೇರಿದಂತೆ ಬಹುತೇಕ ಇಲಾಖೆಯ ಕಚೇರಿಗಳ ಸ್ಥಾಪನೆಯಾಗಬೇಕು. ಯಡ್ರಾಮಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕಾಗಿದೆ.
ಅಧ್ಯಯನ ಪೀಠ ಸ್ಥಾಪನೆಯಾಗಲಿ: ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶ್ರೇಷ್ಠ ತತ್ವಪದಕಾರರಾದ ಕಡಕೋಳ ಮಡಿವಾಳಪ್ಪ, ರಾಂಪೂರ ಬಕ್ಕಪ್ಪ, ಚನ್ನೂರ ಜಲಾಲ್ ಸಾಹೇಬರ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. 17ನೇ ಶತಮಾನದ ಶ್ರೇಷ್ಠ ವಚನಕಾರ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ತಪೋನುಷ್ಠಾನಗೈದ ಕೋಳಕೂರ ಗ್ರಾಮದ ಹತ್ತಿರದ ಜೋಗಿಕೊಳ್ಳ, ಶ್ರೀಮಠ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕು’ ಎಂದು ಸಾಹಿತಿ ಸದಾನಂದ ಪಾಟೀಲ ಹೇಳುತ್ತಾರೆ.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ: ತಾಲ್ಲೂಕಿನ ಆದಾಯವನ್ನು ಹೆಚ್ಚಿಸಬಲ್ಲಂತಹ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ, ಯಾವುದೂ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿಲ್ಲ. ಧಾರ್ಮಿಕ ಪ್ರವಾಸಿ ತಾಣಗಳಾದ ದೇವಾಲಯಗಳು, ಇತರೆ ಪ್ರಸಿದ್ಧ ತಾಣಗಳಲ್ಲಿ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಯಡ್ರಾಮಿ ಪಟ್ಟಣದ ರಾಮತೀರ್ಥವನ್ನು ಪ್ರಾಚ್ಯವಸ್ತು ಇಲಾಖೆಯಿಂದ ಪುನರುಜ್ಜೀವನಗೊಳಿಸಬೇಕು.
ಎರಡೂ ತಾಲ್ಲೂಕಿನಲ್ಲಿ ಮತ್ತೆ ರೈತರು ಕಬ್ಬು ಕೃಷಿಗೆ ಮನಸ್ಸು ಮಾಡಿದ್ದು, ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಿದೆ.
ಸುಧಾರಿಸಬೇಕಿದೆ ಆರೋಗ್ಯ ಸೇವೆ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸಬೇಕಿದೆ. ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಎಲ್ಲ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಬೇಕಿದೆ. ಪಟ್ಟಣದ ಮೂಲಕ ಎರಡೂ ಪ್ರಮುಖ ರಾಷ್ಟೀಯ ಹೆದ್ದಾರಿಗಳು ಸೇರಿದಂತೆ ಚೆನೈ–ಸೂರತ್ ಷಟ್‌ಪಥ ಹೆದ್ದಾರಿ ಜೇವರ್ಗಿ ಪಟ್ಟಣದ ಮೂಲಕ ಹಾದು ಹೋಗಿರುವುದರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 24×7 ಟ್ರಾಮಾ ಕೇರ್ ಸೆಂಟರ್ ಪ್ರಾರಂಭಿಸಬೇಕು. ಚಿಗರಳ್ಳಿ ಕ್ರಾಸ್ ಹತ್ತಿರವಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ನಿಧಾನವಾಗುತ್ತಿದ್ದು, ಹೆಚ್ಚು ಅನುದಾನ ನೀಡುವ ಮೂಲಕ ಯೋಜನೆಗೆ ವೇಗ ನೀಡಬೇಕಾಗಿದೆ. ಮಳೆಯಾಶ್ರಿತ ಪ್ರದೇಶಗಳಿಗೆ, ವಿಶೇಷವಾಗಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿಗೆ ನೀರಾವರಿ ಯೋಜನೆಯ ಅಗತ್ಯವಿದೆ.
ಕಳೆದ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನರಿಬೋಳ–ಚಾಮನೂರ ಹೊನ್ನಾಳ–ತುನ್ನೂರ ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಚಿಗರಹಳ್ಳಿ–ಯಡ್ರಾಮಿ–ನಾಗರಹಳ್ಳಿ ಕ್ರಾಸ್‌ವರೆಗೆ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕುಅರುಣರೆಡ್ಡಿ ಶಿವಪೂರ ಯುವ ಹೋರಾಟಗಾರ
‘ಮಲ್ಲಾಬಾದ ಯೋಜನೆ: ₹365 ಕೋಟಿ ಬಿಡುಗಡೆ’
‘ಮಲ್ಲಾಬಾದ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ₹365 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದು ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದ್ದಾರೆ. ‘ಕಳೆದ ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನರಿಬೋಳ–ಚಾಮನೂರ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹರವಾಳ ಹತ್ತಿರ ₹130 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಹೆಚ್ಚಾಗಲಿದ್ದು ತಾಲ್ಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸಹಕಾರಿಯಾಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.