ADVERTISEMENT

ಹಳೆಯ ಬಸ್‌ ಈಗ ಹೊಸ ಶೌಚಾಲಯ

ಸಚಿವ ಲಕ್ಷ್ಮಣ ಸವದಿ ಸಲಹೆ ಕಾರ್ಯರೂಪಕ್ಕೆ ತಂದ ಎನ್‌ಇಕೆಆರ್‌ಟಿಸಿ, ಸೆಲ್ಕೊ ಸೋಲಾರ್‌ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 15:13 IST
Last Updated 16 ಏಪ್ರಿಲ್ 2021, 15:13 IST
ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಶೌಚಾಲಯವಾಗಿ ಸಿದ್ಧಗೊಳಿಸಿದ ಹಳೆ ಬಸ್‌
ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಶೌಚಾಲಯವಾಗಿ ಸಿದ್ಧಗೊಳಿಸಿದ ಹಳೆ ಬಸ್‌   

ಕಲಬುರ್ಗಿ: ಗುಜರಿಗೆ ಹಾಕಬಹುದಾದ ಬಸ್‌ಗಳನ್ನೇ ತುಸು ಮಾರ್ಪಾಟು ಮಾಡಿ, ಸಾರ್ವಜನಿಕ ಶೌಚಾಲಯಗಳಾಗಿ ಪರಿವರ್ತಿಸುವ ಪ್ರಯತ್ನವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಡುತ್ತಿದೆ. ಇದರ ಪ್ರಾಯೋಗಿಕ ಹಂತವಾಗಿ ತಿಂಗಳ ಹಿಂದೆಯೇ ಒಂದು ಬಸ್‌ ಅನ್ನು ಮಹಿಳಾ ಶೌಚಾಲಯವಾಗಿ ಸಿದ್ಧಗಿಳಿಸಿ, ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ಕಲಬುರ್ಗಿಗೆ ಈಚೆಗೆ ಭೇಟಿ ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ‘ಆಯಸ್ಸು ಮುಗಿದ, ಓಡಿಸಲು ಯೋಗ್ಯವಲ್ಲದ ಹಲವಾರು ಬಸ್‌ಗಳು ಸಾರಿಗೆ ಸಂಸ್ಥೆಯಲ್ಲಿವೆ. ಅವುಗಳನ್ನು ಮಾರ್ಪಾಟು ಮಾಡಿ, ಶೌಚಾಲಯ, ಮೂತ್ರಾಲಯ ಹಾಗೂ ಮಹಿಳೆಯರ ವಿಶ್ರಾಂತಿ ಕೊಠಡಿಗಳಾಗಿ ಬಳಸಿಕೊಳ್ಳಲಾಗುವುದು’ ಎಂದು ಹೇಳಿದ್ದರು.

ಅವರ ಸಲಹೆಯಂತೆ ಕ್ರಮಕ್ಕೆ ಮುಂದಾಗಿರುವ ಎನ್‌ಇಕೆಆರ್‌ಟಿಸಿ, ಸೆಲ್ಕೊ ಸೋಲಾರ್‌ ಲೈಟ್‌ ಸಂಸ್ಥೆಯ ನೆರವಿನೊಂದಿಗೆ ಇದನ್ನು ನನಸು ಮಾಡಲು ಮುಂದಾಗಿದೆ.

ADVERTISEMENT

ಕಲಬುರ್ಗಿ ಡಿಪೊದಲ್ಲಿ ಕೆಟ್ಟು ನಿಂತಿದ್ದ ಹಳೆಯ ಬಸ್‌ವೊಂದನ್ನು ಪಡೆದ ಸೆಲ್ಕೊ ಸಂಸ್ಥೆಯು, ಅದರಲ್ಲಿ ನಾಲ್ಕು ಮಹಿಳಾ ಶೌಚಾಲಯ ಹಾಗೂ ಒಂದು ಸ್ತನ್ಯಪಾನ ಕೊಠಡಿ ಸಿದ್ಧಪಡಿಸಿದೆ.‌

ವಿಶೇಷವೆಂದರೆ, ಈ ಬಸ್ಸಿಗೆ ಸೌರಶಕ್ತಿ ವಿದ್ಯುತ್‌ ಉತ್ಪಾದನೆ ವ್ಯವಸ್ಥೆ ಅಳವಡಿಸಲಾಗಿದೆ. ಒಳಗಡೆ ಶೌಚಾಲಯ, ಫ್ಯಾನ್‌, ವಿದ್ಯುತ್‌ ಬಲ್ಬ್‌ ಎಲ್ಲದಕ್ಕೂ ಸೌರಶಕ್ತಿಯನ್ನೇ ಬಳಸಲಾಗುತ್ತಿದೆ. ಬಸ್ಸಿನ ಸೀಟ್‌ಗಳನ್ನು ತೆಗೆದುಹಾಕಿ, ತಾತ್ಕಾಲಿಕ ಗೋಡೆಗಳನ್ನು ನಿರ್ಮಿಸಿ ಹೈಟೆಕ್‌ ಮಾಡಲಾಗಿದೆ. ನೀರಿನ ವ್ಯವಸ್ಥೆಯೂ ಇದೆ. ಹೊರಭಾಗದಲ್ಲಿ ಬಣ್ಣ ಬಳಿದಿದ್ದು, ಸಮಾಜದ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆಗಳ ಬಗ್ಗೆ ಅರಿವು ಮೂಡಿಸುವ ಚಿತ್ರ ಬಿಡಿಸಿದ್ದು, ಸುಂದರವಾಗಿ ಕಾಣುತ್ತಿದೆ.

‘ಸೆಲ್ಕೊ ಸಂಸ್ಥೆ ಮುಖ್ಯಸ್ಥರಾದ ಡಾ.ಹರೀಶ ಹಂದೆ ಅವರು ಮಹಿಳೆಯರ ಅನುಕೂಲಕ್ಕಾಗಿ ಇಂಥ ಶೌಚಾಲಯಗಳನ್ನು ನಿರ್ಮಿಸಲು ಆಸಕ್ತಿ ಹೊಂದಿದ್ದಾರೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್‌ ನೀಡಿದರೆ ಇನ್ನಷ್ಟು ಶೌಚಾಲಯ ನಿರ್ಮಿಸಲಾಗುವುದು. ಬಸ್ ನಿಲ್ದಾಣ, ಮಾರುಕಟ್ಟೆ, ಕಲ್ಯಾಣ ಮಂಟಪ, ಶಾಲೆ– ಕಾಲೇಜು ಮುಂತಾದ ಸ್ಥಳಗಳಲ್ಲಿ ಇವುಗಳ ಪ್ರಯೋಜನವಾಗಲಿದೆ’ ಎನ್ನುತ್ತಾರೆ ಸಂಸ್ಥೆಯ ಕಚೇರಿ ಆಡಳಿತಾಧಿಕಾರಿ ಜ್ಯೋತಿ ಚಕ್ರವರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.