ADVERTISEMENT

ದಾರಿ ಮಧ್ಯೆ ಬಸ್‌ ಬಿಟ್ಟು ಓಡಿಹೋದ ಪಾನಮತ್ತ ಚಾಲಕ!

ಬಸ್‌ನಲ್ಲಿ ನೂತನ ಕೆಎಎಸ್‌ ಅಧಿಕಾರಿ ಸಹಿತ 40 ಪ್ರಯಾಣಿಕರಿದ್ದರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 15:33 IST
Last Updated 27 ಜನವರಿ 2020, 15:33 IST
ಚಿಂಚೋಳಿಯ ಸಕ್ಕರೆ ಕಾರ್ಖಾನೆಯ ಸಮೀಪ ನಿಂತ ಸಾರಿಗೆ ಸಂಸ್ಥೆಯ ಬಸ್‌
ಚಿಂಚೋಳಿಯ ಸಕ್ಕರೆ ಕಾರ್ಖಾನೆಯ ಸಮೀಪ ನಿಂತ ಸಾರಿಗೆ ಸಂಸ್ಥೆಯ ಬಸ್‌   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಪಾನಮತ್ತನಾಗಿ ಬಸ್‌ ಓಡಿಸುತ್ತಿದ್ದ ಚಾಲಕನೊಬ್ಬ ಪ್ರಯಾಣಿಕರು ಪ್ರಶ್ನಿಸಿದಾಗ ಮಾರ್ಗ ಮಧ್ಯೆ ಬಸ್‌ ನಿಲ್ಲಿಸಿ ಇಳಿದು ಓಡಿ ಹೋದ ಘಟನೆ ಸೋಮವಾರ ಸಂಜೆ 6.40ರ ಸುಮಾರಿಗೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ಚಾಲಕ ಸಂಜೀವ ಚಿಂಚೋಳಿ ಸಕ್ಕರೆ ಕಾರ್ಖಾನೆ– ಚಿಮ್ಮಾ ಈದಲಾಯಿ ಕ್ರಾಸ್‌ ಮಧ್ಯೆ ಬಸ್‌ ನಿಲ್ಲಿಸಿ ಅಡವಿಯಲ್ಲಿ ಓಡಿಹೋದ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚಿಂಚೋಳಿಯಿಂದ ಚಿಟಗುಪ್ಪಕ್ಕೆ (ನಂ. ಕೆಎ 32, ಎಫ್‌ 1169) ಸಂಜೆ 6.30ಕ್ಕೆ ಇಲ್ಲಿನ ಬಸ್‌ ನಿಲ್ದಾಣದಿಂದ ಹೊರಟಿತ್ತು. ಕಂಠಪೂರ್ತಿ ಮದ್ಯ ಸೇವಿಸಿದ್ದ ಚಾಲಕ ಸಂಜೀವ ಯದ್ವಾ ತದ್ವಾ ಬಸ್‌ ಓಡಿಸುತ್ತಿದ್ದ. ಸ್ಪೀಡ್‌ ಬ್ರೇಕರ್‌ಗಳಲ್ಲಿಯೂ ಬೇಕ್‌ ಹಾಕದೇ ಸುಮಾರು 3 ಕಿ.ಮೀ ಓಲಾಡಿಸಿಕೊಂಡೇ ಬಸ್‌ ಓಡಿಸುತ್ತಿದ್ದುದರಿಂದ ಪ್ರಯಾಣಿಕರು ಉಸಿರು ಬಿಗಿ ಹಿಡಿದುಕೊಂಡು ಕುಳಿತಿದ್ದರು.

ADVERTISEMENT

ಕೆಲವರು ಹೀಗೇಕೆ ಬಸ್‌ ಓಡಿಸುತ್ತಿದ್ದಿ ಎಂದು ಪ್ರಶ್ನಿಸಿದಾಗ ಚಾಲಕನು ಬಸ್ಸನ್ನು ರಾಜ್ಯ ಹೆದ್ದಾರಿ 15ರಲ್ಲಿ ನಿಲ್ಲಿಸಿ ಇಳಿದು ಓಡಿಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಬಸ್‌ನಲ್ಲಿ ನೂತನ ಕೆಎಎಸ್‌ ಅಧಿಕಾರಿ, ಚಿಟಗುಪ್ಪಾ ನಿವಾಸಿ ಡಾ.ದತ್ತಾತ್ರೆಯ ಜಗನ್ನಾಥ ಗಾದಾ ಅವರು ಕುಟುಂಬ ಸಮೇತ ಪ್ರಯಾಣಿಸುತ್ತಿದ್ದರು. ಒಟ್ಟು 40 ಪ್ರಯಾಣಿಕರು ಇದ್ದರು.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಯೋಗೇಶ ಎಂಬ ಬೇರೊಬ್ಬ ಚಾಲಕನನ್ನು ಈ ಮಾರ್ಗಕ್ಕೆ ನಿಯೋಜಿಸಿ ಬಸ್‌ ಚಿಟ್ಟಗುಪ್ಪಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇವೆ. ಅನಾರೋಗ್ಯದಿಂದಾಗಿ ಬಸ್‌ ಚಾಲಕ ಈ ರೀತಿ ಮಾಡಿದ್ದಾನೆ ಎಂದು ಘಟಕ ವ್ಯವಸ್ಥಾಪಕ ಎಂ.ಎಸ್‌ ಕಲ್ಲೂರಕರ್‌ ತಿಳಿಸಿದರು.

ಅವನೂ ಇಳಿದು ಹೋದ...
ಸಕ್ಕರೆ ಕಾರ್ಖಾನೆ ಸಮೀಪದಿಂದ ಸುಲೇಪೇಟವರೆಗೆ ಬಸ್‌ ಓಡಿಸಿಕೊಂಡು ಬಂದ ನೂತನ ಚಾಲಕ ಯೋಗೇಶ ಎಂಬುವವರು ಸುಲೇಪೇಟದಿಂದ ವಾಪಸ್ ಹೋಗಿದ್ದಾರೆ. ಚಾಲಕ ಕಂ ನಿರ್ವಾಹಕ ನಾಗಪ್ಪ ಈ ಬಸ್ಸಿನಲ್ಲಿ ನಿರ್ವಾಹಕರಾಗಿದ್ದರು. ಸುಲೇಪೇಟದಿಂದ ಇವರೇ ಬಸ್‌ ಚಲಾಯಿಸಿಕೊಂಡು ಹೋದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.