ADVERTISEMENT

ಕಾಳಗಿ ಡಿಪೊ ಬಸ್‌ ವ್ಯವಸ್ಥೆ ಅಸ್ತವ್ಯಸ್ತ: ಪ್ರಯಾಣಿಕರು ಹೈರಾಣ

ಗುಂಡಪ್ಪ ಕರೆಮನೋರ
Published 26 ಜೂನ್ 2025, 6:21 IST
Last Updated 26 ಜೂನ್ 2025, 6:21 IST
ಚಿಂಚೋಳಿ-ಕಾಳಗಿ-ಕಲಬುರಗಿ ಮಾರ್ಗದ ತಡೆರಹಿತ ಸರ್ಕಾರಿ ಬಸ್ಸಿನಲ್ಲಿ ಬುಧವಾರ ಬೆಳಿಗ್ಗೆ ಕಂಡುಬಂದ ಪ್ರಯಾಣಿಕರ ದೃಶ್ಯ 
ಚಿಂಚೋಳಿ-ಕಾಳಗಿ-ಕಲಬುರಗಿ ಮಾರ್ಗದ ತಡೆರಹಿತ ಸರ್ಕಾರಿ ಬಸ್ಸಿನಲ್ಲಿ ಬುಧವಾರ ಬೆಳಿಗ್ಗೆ ಕಂಡುಬಂದ ಪ್ರಯಾಣಿಕರ ದೃಶ್ಯ    

ಕಾಳಗಿ: ‘ಜಿಲ್ಲಾ ಕೇಂದ್ರ ಕಲಬುರಗಿಗೆ ಕಾಳಗಿಯಿಂದ ಸಂಚರಿಸಲು ಬಸ್ಸಿನ ವ್ಯವಸ್ಥೆ ಅಸ್ತವ್ಯಸ್ತದಿಂದ ಕೂಡಿದೆ’ ಎಂದು ಪ್ರಯಾಣಿಕರು ದೂರಿದ್ದಾರೆ.

‘ಕಾಳಗಿ ತಾಲ್ಲೂಕು ಘೋಷಣೆ ಮುಂಚೆಯೇ ಸ್ಥಾಪನೆಯಾದ ಇಲ್ಲಿಯ ಬಸ್ ಡಿಪೋ, ಜನರಿಗೆ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎನ್ನುತ್ತಾರೆ ಪ್ರಯಾಣಿಕರು.

ನಿತ್ಯ ಬೆಳಿಗ್ಗೆ 7 ಗಂಟೆಯಾದರೂ ಇಲ್ಲಿಂದ ಜಿಲ್ಲಾ ಕೇಂದ್ರಕ್ಕೆ ನೇರವಾಗಿ ಒಂದೂ ಬಸ್ಸು ಓಡಿಸುವುದಿಲ್ಲ. ಮಂಗಲಗಿಯಿಂದ ಬರುವ ಸೂಪರ್ ಮಾರ್ಕೆಟ್ ಬಸ್ಸು ಬೆಳಿಗ್ಗೆ 6.30ಕ್ಕೆ ಸೂಗೂರು, ಹೆಬ್ಬಾಳ ಮಾರ್ಗವಾಗಿ ಹೋಗುತ್ತದೆ. ರುದನೂರ್ ಬಸ್ಸು 7ಗಂಟೆಗೆ ಬಂದು ಮಾಡಬೂಳ ಮಾರ್ಗವಾಗಿ ಕಲಬುರಗಿಗೆ ಚಲಿಸುತ್ತದೆ. ಸೋಲಾಪುರ ಮತ್ತಿತರ ಕಡೆಗೆ ತುರ್ತು ಹೋಗಲಿಚ್ಚಿಸುವ ಮಾರ್ಗ ಮಧ್ಯದ ಜನರಿಗೆಲ್ಲ ಈ ಎರಡೇ ಬಸ್ಸು ಗತಿಯಾಗಿದ್ದು ಅವು 8 ಗಂಟೆಗೂ ಕಲಬುರಗಿ ತಲುಪುವುದು ಅಸಾಧ್ಯವಾಗಿದೆ. ಈ ಎರಡು ಬಸ್ಸಿನ ನಂತರದಲ್ಲೇ ಕಾಳಗಿ ಡಿಪೋದೊಳಗಿನ ಬಸ್‌ಗಳು ಒಂದೊಂದಾಗಿ ಹೊರಬರುವ ಪದ್ಧತಿ ಬೆಳೆದುಬಂದಿದೆ.

ADVERTISEMENT

‘ತಡವಾಗಿ ಬರುವ ಈ ಬಸ್‌ಗಳು ಸಮಯಕ್ಕೆ ಸರಿಯಾಗಿ ನಿಲ್ದಾಣದಿಂದ ಹೊರಡುವುದಿಲ್ಲ’ ಎಂದು ಪ್ರಯಾಣಿಕರು ಗೋಳಿಡುತ್ತಿದ್ದಾರೆ.

ಬೆಳಿಗ್ಗೆ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ನೌಕರರು, ಜನಸಾಮಾನ್ಯರು ಬಸ್ಸಿಗೆ ಕಾಯುವ ದುಸ್ಥಿತಿ ಮನೆಮಾಡಿದ್ದು ಸಮಯಕ್ಕೆ ತಲುಪಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಇದೇ ಮಾರ್ಗವಾಗಿ ಬರುವ ಚಿಂಚೋಳಿ, ಕಲಬುರಗಿ ಘಟಕದ ಬಸ್‌ಗಳಲ್ಲಿ ಕಾಲಿಡಲೂ ಸಾಧ್ಯವಾಗದಷ್ಟು ಪ್ರಯಾಣಿಕರು ತುಂಬಿ ತುಳುಕುತ್ತಾರೆ.

ಕೆಲ ವೇಗಧೂತ ಬಸ್‌ಗಳ ಟಿಕೆಟ್ ದರ ಹೆಚ್ಚಿದ್ದು, ಅವು ಬಸ್ ನಿಲ್ದಾಣಕ್ಕೆ ಬರದೇ ಅಂಬೇಡ್ಕರ್ ವೃತ್ತದಿಂದ ಹೊರಗಿನಿಂದಲೇ ಓಡಿಸುತ್ತಿದ್ದಾರೆ. ಅನಿವಾರ್ಯವಾಗಿ ಇಂತಹ ಬಸ್ಸಿನಲ್ಲಿ ಬರುವ ಸ್ಥಳೀಯ ಪ್ರಯಾಣಿಕರು ಅಲ್ಲೇ ಇಳಿದು ಊರೊಳಗೆ 1ಕಿ.ಮೀ ನಡೆದುಕೊಂಡು ಬರುವಲ್ಲಿ ಹೈರಾಣಾಗುತ್ತಿದ್ದಾರೆ. ಸಂಜೆ 4ಗಂಟೆ ನಂತರದಲ್ಲಿ ಕಲಬುರಗಿಯಿಂದ ಕಾಳಗಿ ಕಡೆಗೆ ಬರಬೇಕೆಂದರೂ ಬಕಪಕ್ಷಿಯಂತೆ ಕಾಯುವ ಪರಿಸ್ಥಿತಿ ಇದೆ. ರಾತ್ರಿ 7.30ಕ್ಕೆ ಚಿಂಚೋಳಿ ಮಾರ್ಗಕ್ಕೆ ಹೊರಡುವ ಬಸ್‌ ಕೊನೆಯದಾಗಿದೆ.

ಈ ಹಿಂದೆ ಬೆಳಿಗ್ಗೆ 6ಗಂಟೆಗೆ ಕಲಬುರಗಿಗೆ ಸಂಚರಿಸುತ್ತಿದ್ದ ತುಳಜಾಪುರ ಬಸ್‌, ಅದರ ಹಿಂದೆ ಹೋಗುತ್ತಿದ್ದ ಲಾತೂರ್, ಪುಣೆ ಮತ್ತಿತರ ಬಸ್ಸುಗಳ ಓಡಾಟ ಬಂದ್ ಮಾಡಲಾಗಿದೆ. ಇದ್ದವುಗಳಲ್ಲೇ ಬಹುತೇಕ ಬಸ್‌ಗಳನ್ನು ವಿಜಯಪುರ ಕಡೆಗೆ ಓಡಿಸುತ್ತಿದ್ದು, ಇಲ್ಲಿ ಡಿಪೋ ಇದ್ದೂ ಸುತ್ತಲಿನ ಚಿತ್ತಾಪುರ, ಸೇಡಂ, ಚಿಂಚೋಳಿ, ಚಿಟಗುಪ್ಪಾ, ಕಮಲಾಪುರ, ಹುಮನಾಬಾದ ಮತ್ತು ಸುತ್ತಲಿನ ಅದೆಷ್ಟೊ ಹಳ್ಳಿಗಳಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದಾಗಿದೆ.

‘ಏನೇ ಕೇಳಿದರೆ ಡಿಪೋ ವ್ಯವಸ್ಥಾಪಕರು ಕುಂಟುನೆಪ ಹೇಳಿ ಜಾರಿಕೊಳ್ಳುತ್ತಾರೆ. ಮೇಲಧಿಕಾರಿಗಳ ಆದೇಶ, ಜನಪ್ರತಿನಿಧಿಗಳ ಮಾತು ಸಹ ಪಾಲಿಸದೆ ಪ್ರಯಾಣಿಕರನ್ನು ಹೈರಾಣಕ್ಕೆ ದೂಡುತ್ತಿದ್ದಾರೆ’ ಎಂದು ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ರಾತ್ರಿ 8ಗಂಟೆಯ ನಂತರದಲ್ಲಿ ಕಲಬುರಗಿಯಿಂದ ಕಾಳಗಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

‘ಜುಲೈ 1ರಿಂದ ಹೈದರಾಬಾದ್ ಮಾರ್ಗದ ಬಸ್‌ ಬಂದ್ ಮಾಡಿ ಅದೇ ಬಸ್ಸು ಬೆಳಿಗ್ಗೆ 6.30ಕ್ಕೆ ಮಾಡಬೂಳ ಮಾರ್ಗವಾಗಿ ಕಲಬುರಗಿಗೆ ಆರಂಭಿಸಲಾಗುವುದು. ಸಂಜೆ 5.30ರ ಬಳಿಕ ಕಲಬುರಗಿಯಿಂದ ಕಾಳಗಿ ಕಡೆಗೆ ನಮ್ಮ ಬಸ್ಸುಗಳಿಲ್ಲ. ರಾತ್ರಿ 8ರ ಬಸ್ಸಿನ ಕುರಿತು ಜಿಲ್ಲಾ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಬಸ್ ಘಟಕದ ವ್ಯವಸ್ಥಾಪಕ ಯಶವಂತ ಯಾತನೂರ ಪ್ರತಿಕ್ರಿಯಿಸಿದ್ದಾರೆ.

ಕಾಳಗಿ ಬಸ್ ಘಟಕದಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಬಾರದು. ನಿತ್ಯ ಬೆಳಿಗ್ಗೆ 6ಗಂಟೆಗೆ ಕಲಬುರಗಿಗೆ ಬಸ್ ಓಡಿಸಬೇಕು ಎಂದು ಈ ಮೊದಲೇ ವ್ಯವಸ್ಥಾಪಕರಿಗೆ ಹೇಳಿದ್ದೇನೆ
ಜಗದೇವ ಗುತ್ತೇದಾರ ವಿಧಾನ ಪರಿಷತ್ ಸದಸ್ಯ
ಸಂಜೆ 5 ಗಂಟೆಯಾದರೆ ಕಾಳಗಿ ಬಸ್ ನಿಲ್ದಾಣದಿಂದ ಕಲಬುರಗಿಗೆ ಹೋಗಲು ಬಸ್ಸಿನ ಕೊರತೆಯಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಎಷ್ಟು ಹೇಳಿದರೂ ಘಟಕದ ವ್ಯವಸ್ಥಾಪಕರು ಸ್ಪಂದಿಸುತ್ತಿಲ್ಲ
ಅಬ್ದುಲ್ ಹಮಿದ್ ಮಸ್ತಾನಸಾಬ ಕಲಗುರ್ತಿ ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.