ADVERTISEMENT

ಕಲಬುರಗಿ: ಬಸ್‌ ಸಂಚಾರಕ್ಕೆ ಶಾಸಕ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:37 IST
Last Updated 12 ಜನವರಿ 2022, 5:37 IST
ಕಲಬುರಗಿ ಸಮೀಪದ ಕುಸನೂರ ತಾಂಡಾಗೆ ಬಸ್‌ ಸಂಚಾರಕ್ಕೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು
ಕಲಬುರಗಿ ಸಮೀಪದ ಕುಸನೂರ ತಾಂಡಾಗೆ ಬಸ್‌ ಸಂಚಾರಕ್ಕೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು   

ಕಲಬುರಗಿ: ‘ನಗರದಿಂದ ಕುಸನೂರು ತಾಂಡಾವರೆಗಿನ ರಸ್ತೆಯನ್ನು ₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈಗ ತಾಂಡಾಗೆ ಬಸ್‌ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು ಹಾಗೂ ತಾಂಡಾಗಳ ಸಂಚಾರ ಸಮಸ್ಯೆ ನೀಗಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ನಗರ ಹೊರವಲಯದ ಕುಸನೂರು ತಾಂಡಾದಲ್ಲಿ ಮಂಗಳವಾರ ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಕುಸನೂರು ತಾಂಡಾದಲ್ಲಿ ಸಮುದಾಯ ಭವನ, ಸಿ.ಸಿ ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಾಗುವುದು. ಅಲ್ಲಿಯವರೆಗೆ ಜನರು ಸಹಕರಿಸಬೇಕು’ ಎಂದರು.

‘ಕುಸನೂರು ತಾಂಡಾ ರಸ್ತೆ ಕೆಟ್ಟಿದೆ ಎಂಬ ಕಾರಣಕ್ಕೆ ಕೆಲವು ವರ್ಷಗಳಿಂದ ಇಲ್ಲಿಗೆ ಬಸ್‌ ಸಂಚಾರ ನಿಲ್ಲಿಸಲಾಗಿತ್ತು. ಜನರು ಆಟೊ, ಖಾಸಗಿ ವಾಹನಗಳಲ್ಲೇ ಓಡಾಡುತ್ತಿದ್ದರು. ಇದರಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಸಮಸ್ಯೆ ಮಗನಂಡು ರಸ್ತೆ ದುರಸ್ತಿ ಮಾಡಿಸಿ, ಬಸ್‌ ಬಿಡಲು ಅನುವು ಮಾಡಿಕೊಟ್ಟಿದ್ದೇನೆ’ ಎಂದರು.

ADVERTISEMENT

‘ನಂದೂರು ಗ್ರಾಮದ ರಸ್ತೆ ಕೂಡ ಹದಗೆಟ್ಟಿದ್ದು ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಈ ರಸ್ತೆಯನ್ನೂ ದುರಸ್ತಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಭಿಕ್ಕುಸಿಂಗ್ ರಾಠೋಡ, ಬಿಜೆಪಿ ಮುಖಂಡರಾದ ರಾಜು ಚವ್ಹಾಣ, ಕುಸನೂರ ಗ್ರಾ.ಪಂ ಸದಸ್ಯ ಕಿಶೋರ ರಾಠೋಡ, ಶರಣಕುಮಾರ ಹಾಗರಗುಂಡಗಿ, ಲಖನ್ ರಾಠೋಡ, ಸಂತೋಷ ರಾಠೋಡ, ಆಕಾಶ ರಾಠೋಡ ಕಾಳನೂರ, ಶ್ರೀಮಂತ ರಾಠೋಡ, ಭೋಜು ರಾಠೋಡ, ರೂಪಸಿಂಗ್ ಚವ್ಹಾಣ, ಪಾಂಡು ಆಡೆ, ರಮೇಶ ತೆಗ್ಗಿನಮನಿ, ಅಶೋಕ ಬಬಲಾದ್, ಶಿವ ಗುತ್ತೇದಾರ, ರೇವಣಸಿದ್ದಪ್ಪ ಮಠಪತಿ, ಮಲ್ಲು ಮುತ್ಯಾ, ನಾಗು ಕಲ್ಲಾ, ರಾಮಚಂದ್ರ ರಾಠೋಡ, ವಿಠ್ಠಲ ರಾಠೋಡ, ಲಕ್ಷ್ಮಣ ಖೇಮು
ರಾಠೋಡ ಇದ್ದರು.

ಬಹಳ ವರ್ಷಗಳ ನಂತರ ತಾಂಡಾಗೆ ಮೊದಲ ಬಸ್‌ ಬಂದಿದ್ದರಿಂದ ಜನರು ಬಸ್ಸಿಗೆ ಪೂಜೆ ಸಲ್ಲಿಸಿ
ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.