ADVERTISEMENT

ಅಫಜಲಪುರ | ಸಾರಿಗೆ ನೌಕರರ ಮುಷ್ಕರ: ಖಾಸಗಿ ವಾಹನಗಳ ದರ್ಬಾರ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:03 IST
Last Updated 6 ಆಗಸ್ಟ್ 2025, 6:03 IST
<div class="paragraphs"><p>ಅಫಜಲಪುರ ಬಸ್ ಡಿಪೋದಲ್ಲಿ ಚಾಲಕ ನಿರ್ವಾಹಕರ ಮುಷ್ಕರದಿಂದಾಗಿ ಖಾಸಗಿ ವಾಹನಗಳು ತುಂಬಿಕೊಂಡಿದ್ದವು</p></div>

ಅಫಜಲಪುರ ಬಸ್ ಡಿಪೋದಲ್ಲಿ ಚಾಲಕ ನಿರ್ವಾಹಕರ ಮುಷ್ಕರದಿಂದಾಗಿ ಖಾಸಗಿ ವಾಹನಗಳು ತುಂಬಿಕೊಂಡಿದ್ದವು

   

ಅಫಜಲಪುರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಬಸ್ಸುಗL ಓಡಾಟ ಬಹುತೇಕ ಕಡಿಮೆಯಾಗಿತ್ತು. ಆದರೆ ಖಾಸಗಿ ವಾಹನಗಳ ದರ್ಬಾರು ಹೆಚ್ಚಾಗಿ ಕಂಡುಬಂತು. ಇನ್ನೊಂದೆಡೆ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯವರು ಕೆಲವು ಬಸ್ಸುಗಳನ್ನು ಮಾತ್ರ ಓಡಿಸಿದ್ದರಿಂದ ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ಕಡಿಮೆ ಆಯಿತು.

ಬಸ್ಸಿನ ತೊಂದರೆಯಿಂದ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಮತ್ತು ದೇವಲ ಗಾಣಗಾಪುರದ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದ ದರ್ಶನಕ್ಕೆ ಭಕ್ತಾದಿಗಳು ಸಂಚರಿಸಲು ತೊಂದರೆಯಾಯಿತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು. ಕೆಲವೆಡೆ ಶಾಲೆಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೊಂದರೆ ಅನುಭವಿಸಿದರು.

ADVERTISEMENT

ಬಸ್ ಡಿಪೊ ವ್ಯವಸ್ಥಾಪಕ ಎ.ಎ.ಬೋವಿ ಮಾಹಿತಿ ನೀಡಿ, ‘ನಮ್ಮ ಬಸ್ ಡಿಪೊದಲ್ಲಿ 87 ಬಸ್‌ಗಳಿದ್ದು, ನಿತ್ಯ 87 ರೂಟ್ ಸಂಚಾರ ಮಾಡುತ್ತವೆ. ಆದರೆ ಮುಷ್ಕರ ಹಿನ್ನೆಲೆಯಲ್ಲಿ 35 ಬಸ್ಸುಗಳನ್ನು ಓಡಿಸಿದ್ದೇವೆ. ಒಟ್ಟು ನಮ್ಮ ಡಿಪೊದಲ್ಲಿ 368 ಸಿಬ್ಬಂದಿ ಇದ್ದಾರೆ’ ಎಂದು ತಿಳಿಸಿದರು.

ದುಪ್ಪಟ್ಟು ದರ

ಜೇವರ್ಗಿ: ಸಾರಿಗೆ ನೌಕರರ ಮುಷ್ಕರಕ್ಕೆ ಜೇವರ್ಗಿಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಮುಷ್ಕರ ಅರಂಭಿಸಿದ ಪರಿಣಾಮ ಬಸ್‌ ನಿಲ್ದಾಣದ ಬಳಿ ಖಾಸಗಿ ವಾಹನಗಳ ಅಬ್ಬರ ಹೆಚ್ಚಾಗಿ ಕಂಡುಬಂತು.

ಮುಷ್ಕರದ ಮಾಹಿತಿ ಇಲ್ಲದ ಗ್ರಾಮೀಣ ಭಾಗದ ಜನರು ಬಸ್‌ ನಿಲ್ದಾಣದ ಬಳಿ ಹೆಚ್ಚಾಗಿ ಕಂಡುಬಂದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಬಸ್‌ಗಳಿಲ್ಲದೇ ಪರದಾಡಿದರು.

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಜನರು ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಬಸ್‌ ನಿಲ್ದಾಣಗಳಲ್ಲಿ ಕಾದು ಕುಳಿತಿದ್ದರು. ಸರ್ಕಾರಿ ನೌಕರರು ಸಹ ಪರದಾಡಿದರು. ಜೇವರ್ಗಿಯಿಂದ ಕಲಬುರಗಿ, ಶಹಾಪೂರ, ಸಿಂದಗಿ, ಶಹಾಬಾದ್ ಕಡೆ ತೆರಳುವ ಆಟೊ, ಟಂಟಂ, ಕ್ರೂಸರ್ ಸೇರಿದಂತೆ ಖಾಸಗಿ ವಾಹನಗಳು ನಿಲ್ದಾಣದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು, ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವುದು ಕಂಡುಬಂದಿತು. ಮಂಗಳವಾರಕ್ಕೊಮ್ಮೆ ನಡೆಯುವ ವಾರದ ಸಂತೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಪಟ್ಟಣದಲ್ಲಿ ಜನ ಸಂಚಾರ, ವ್ಯಾಪಾರ, ವಹಿವಾಟು ತಗ್ಗಿತ್ತು. ರಸ್ತೆಗಳಲ್ಲಿ ಕಾರು, ಬೈಕು, ಆಟೋ, ಟಂಟಂಗಳ ಸಂಚಾರ ಅಧಿಕವಾಗಿತ್ತು. ಸಿಪಿಐ ರಾಜೇಸಾಬ ನದಾಫ್, ಪಿಎಸ್‌ಐ ಗಜಾನಂದ ಬಿರಾದಾರ‌‌ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಸೇಡಂ; ಮಧ್ಯಾಹ್ನ ಬಸ್ ಸಂಚಾರ

ಸೇಡಂ: ಮುಷ್ಕರದಿಂದ ಪಟ್ಟಣದಲ್ಲಿ ಕೆಲಕಾಲ ಪ್ರಯಾಣಿಕರಿಗೆ ತೊಂದರೆಯಾಯಿತು.

ಸೇಡಂ ಘಟಕದಿಂದ ಬೇರೆಡೆಗೆ ರಾತ್ರಿ ವಸತಿಗಾಗಿ ತೆರಳಿದ್ದ ಬಸ್‌ಗಳು ಎಂದಿನಂತೆ ಸೇಡಂ ಬಸ್ ನಿಲ್ದಾಣಕ್ಕೆ ಮರಳಿದವು. ಜೊತೆಗೆ ಕೆಲವು ಬಸ್‌ಗಳು ಸೇಡಂ ಘಟಕದಿಂದ ದೂರದ ಪ್ರದೇಶಕ್ಕೂ ಮರಳಿದವು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೂ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಾರದ ಬಸ್‌ಗಾಗಿ ಕಾದು ಕುಳಿತು ಮನೆಗೆ ಮರಳಿದರು. ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋದರು. ಕೆಲವು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಸುತ್ತುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೇಡಂ ಘಟಕದ ವ್ಯವಸ್ಥಾಪಕ ಬಿ.ವೈ.ವಟಕರ್ ನೌಕರಸ್ಥರಿಗೆ ಬಸ್ ಓಡಿಸುವಂತೆ ಮನವಿ ಮಾಡಿದ ನಂತರ ಕೆಲವು ನೌಕರರು ಬಸ್ ತೆಗೆದು ಓಡಿಸಿದರು. ನಂತರ ಕೆಲವರು ಸರ್ಕಾರದ ನಿರ್ಧಾರಗಳನ್ನು ನೋಡುತ್ತಾ ಕಾದು, ನಂತರ ತಾವೇ ಸ್ವತಃ ಬಸ್ ಓಡಿಸಿದರು. ನಿತ್ಯ 43 ಬಸ್‌ಗಳು ವಿವಿಧೆಡೆ ಸಂಚಾರ ಮಾಡುತ್ತಿದ್ದವು. ಆದರೆ ಮಂಗಳವಾರ 25 ಬಸ್ ರಸ್ತೆಗಿಳಿದಿವೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಲಾಗಿದೆ’ ಎಂದು ಘಟಕ ವ್ಯವಸ್ಥಾಪಕ ಬಿ.ವೈ.ವಟಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿತ್ತಾಪುರ: ಪ್ರಯಾಣಿಕರ ಪರದಾಟ

ಚಿತ್ತಾಪುರ: ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸಿದ್ದರಿಂದ ಮಂಗಳವಾರ ಬಸ್ಸುಗಳು ರಸ್ತೆಗಿಳಿಯದೆ ಪಟ್ಟಣದ ಬಸ್ ನಿಲ್ದಾಣದಲ್ಲೇ ನಿಂತಿದ್ದವು. ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ಪರದಾಡಿದರು.

ಪಟ್ಟಣದಿಂದ ಬೇರೆ ನಗರ, ಪಟ್ಟಣ, ಗ್ರಾಮಗಳಿಗೆ ಹೋಗಿ ಬರಲು ಸಾರ್ವಜನಿಕ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸಿದರು. ಪಟ್ಟಣದಲ್ಲಿನ ಸರ್ಕಾರಿ ಕಚೇರಿಗೆ ಬಂದು ಹೋಗಲು ಸರ್ಕಾರಿ ನೌಕರರು ಪರದಾಡಿದರು.

ಕ್ರೂಸರ್‌ ವಾಹನ ಚಾಲಕರು ಮತ್ತು ಮಾಲಿಕರು ಬಸ್ ನಿಲ್ದಾಣ ಹತ್ತಿರ ತಮ್ಮ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ತುಂಬಿಕೊಂಡು ಕಲಬುರಗಿಗೆ ಸಂಚರಿಸಿದವು. ದುಬಾರಿ ಹಣ ಕೊಟ್ಟು ಜನರು ಸಂಚಾರ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.