ADVERTISEMENT

ಮನೋಬಲದಿಂದ ಕೋವಿಡ್ ದೂರ

ಹಿರಿಯ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:14 IST
Last Updated 12 ಮಾರ್ಚ್ 2021, 2:14 IST
ಕಲಬುರ್ಗಿಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಡಾ. ಸಿ.ಆರ್. ಚಂದ್ರಶೇಖರ ಮಾತನಾಡಿದರು. ಡಾ.ರಾಜೇಶ್ವರಿ ರೆಡ್ಡಿ, ಭವಾನಿಸಿಂಗ್ ಠಾಕೂರ್, ಡಾ.ಎಸ್.ಎಸ್. ಹಿರೇಮಠ ಇದ್ದರು
ಕಲಬುರ್ಗಿಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಡಾ. ಸಿ.ಆರ್. ಚಂದ್ರಶೇಖರ ಮಾತನಾಡಿದರು. ಡಾ.ರಾಜೇಶ್ವರಿ ರೆಡ್ಡಿ, ಭವಾನಿಸಿಂಗ್ ಠಾಕೂರ್, ಡಾ.ಎಸ್.ಎಸ್. ಹಿರೇಮಠ ಇದ್ದರು   

ಕಲಬುರ್ಗಿ: ‘ನಮ್ಮಲ್ಲಿ ಗಟ್ಟಿ ಮನೋಬಲವಿದ್ದರೆ ಕೋವಿಡ್‌ ಗೆಲ್ಲಬಹುದು. ಇಲ್ಲದಿದ್ದರೆ ಎಂಥದ್ದೇ ಉತ್ತಮ ಕೊಟ್ಟ ಔಷಧಿ ಕೊಟ್ಟರೂ ಕೆಲಸ ಮಾಡುವುದಿಲ್ಲ’ ಎಂದು ಹಿರಿಯ ಮನೋವಿಜ್ಞಾನಿ ಡಾ.ಸಿ.ಆರ್‌. ಚಂದ್ರಶೇಖರ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ಸೋಂಕು ಬೇರೆ ಬೇರೆ ಸ್ವರೂಪದಲ್ಲಿ ಹಿಂದೆಯೂ ಇತ್ತು ಎಂದು ಸೋಂಕುಗಳ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರು ತಿಳಿಸಿದ್ದಾರೆ. ಆದರೆ, ಈ ಪರಿ ವ್ಯಾಪಕವಾಗಿ ಹರಡಿರಲಿಲ್ಲ. ಚೀನಾದಲ್ಲಿ ಪತ್ತೆಯಾದ ಕಾರಣಕ್ಕೆ ಅಮೆರಿಕ ಚೀನಾವನ್ನು ತರಾಟೆಗೆ ತೆಗೆದುಕೊಂಡಿತು’ ಎಂದರು.

‘ಸೋಂಕು ಮನುಷ್ಯರಿಂದ ಅಥವಾ ಪ್ರಾಣಿಯಿಂದ ಬಂತೋ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಆಗಿಲ್ಲ. ಕೊರೊನಾ ಕಾರಣಕ್ಕೆ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿರುವುದೂ ಕಂಡು ಬಂತು. ಕೊರೊನಾ ಬಗ್ಗೆ ಅನಗತ್ಯ ಭಯ ಬೇಡ’ ಎಂದರು.

ADVERTISEMENT

‘ಬೆಂಗಳೂರಿನ ಒಂದು ಕುಟುಂಬದ ಮಹಿಳೆ ಹಲವು ತಿಂಗಳವರೆಗೆ ತಮ್ಮ ಮಹಡಿ ಮನೆಯಿಂದ ಕೆಳಗಿಳಿದು ಬರಲಿಲ್ಲ. ಅಂಗಡಿಯಿಂದ ಖರೀದಿಸಿದ ತರಕಾರಿ ಅಥವಾ ದಿನಸಿಯನ್ನು 24 ಗಂಟೆಗಳವರೆಗೆ ಮನೆಯೊಳಗೆ ತರುತ್ತಿರಲಿಲ್ಲ. ತಮ್ಮದೇ ಮನೆ ಗೋಡೆ ಮುಟ್ಟುತ್ತಿರಲಿಲ್ಲ. ಕೊರೊನಾ ಕುರಿತ ಅತಿಯಾದ ಭಯ ಹಾಗೂ ಘೀಳಿನಿಂದಾಗಿ ಹೀಗೆ ಆಗುತ್ತಿತ್ತು. ಪರಸ್ಪರ ಅಂತರವನ್ನು ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡರೆ ಸಾಕು. ಅನಗತ್ಯವಾಗಿ ಈ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ’ ಎಂದರು.

ನೇತ್ರತಜ್ಞೆ ಡಾ. ರಾಜೇಶ್ವರಿ ರೆಡ್ಡಿ, ‘ಕಳೆದ ಅಕ್ಟೋಬರ್ ತಿಂಗಳಲ್ಲಿ ನನ್ನ ಪತಿಗೆ ಯಾವುದೇ ಲಕ್ಷಣ ಇಲ್ಲದಿದ್ದರೂ ಕೊರೊನಾ ಪತ್ತೆಯಾಗಿತ್ತು. ನನಗೂ ಬಂದಿತ್ತು. ನಾವು ಚಿಕಿತ್ಸೆ ನೀಡಿದ ರೋಗಿಗಳಿಗೆ ಬಂದಿರಬಹುದೇ ಎಂಬ ಆತಂಕ ಕಾಡುತ್ತಿತ್ತು. ಆದರೆ, ಅದೃಷ್ಟವಶಾತ್ ಯಾರಿಗೂ
ಸೋಂಕು ತಗುಲಿರಲಿಲ್ಲ. ನೆಗೆಟಿವ್ ವರದಿ ಬಂದ ಮರುದಿನವೇ ಮತ್ತೆ ಕರ್ತವ್ಯದಲ್ಲಿ ತೊಡಗಿಸಿಕೊಂಡೆ’ ಎಂದು ಹೇಳಿದರು.

ಪುಸ್ತಕ ಪ್ರಕಾಶಕ ಡಾ. ಎಸ್‌.ಎಸ್‌. ಹಿರೇಮಠ, ‘ಡಾ.ಸಿ.ಆರ್. ಚಂದ್ರಶೇಖರ ಅವರ ಆತ್ಮಕಥೆ ಪ್ರಕಟಿಸುವುದು ಎಂದರೆ ಮನೋವಿಜ್ಞಾನ ಕ್ಷೇತ್ರದ ಬೆಳವಣಿಗೆಯನ್ನು ದಾಖಲಿಸಿದಂತೆ. ಕನ್ನಡದಲ್ಲಿ ಬಂದಿರುವ ಆತ್ಮಕಥೆ ಕೆಲವೇ ದಿನಗಳಲ್ಲಿ ಇಂಗ್ಲಿಷ್‌ನಲ್ಲೂ ಪ್ರಕಟವಾಗಲಿದೆ’ ಎಂದರು.

ಅಖಿಲ ಭಾರತ ಫಾರ್ಮಾಸಿಸ್ಟ್ಸ್‌ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಿ.ಎಸ್. ದೇಸಾಯಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಪತ್ರಕರ್ತ ಶೇಷಮೂರ್ತಿ ಅವಧಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.