
ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರವನ್ನು ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಉದ್ಘಾಟಿಸಿದರು.
ಜೇವರ್ಗಿ: ‘ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡವರು ಆರೋಗ್ಯ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ತಾಲ್ಲೂಕಿನ ಮಂದೇವಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸ್ತನ, ಗರ್ಭಕೋಶ ಕ್ಯಾನ್ಸರ್ ಹಾಗೂ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಆರೋಗ್ಯ ಸೇವೆ ಒಂದು ಅತ್ಯುತ್ತಮವಾದ ಸೇವೆಯಾಗಿದೆ. ಉಳ್ಳವರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ತುಂಬಾ ಪರಿಣಾಮಕಾರಿಯಾಗಿ ಉಪಯೋಗ ಆಗುತ್ತದೆ. ಇತ್ತೀಚೆಗೆ ಸಾಕಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು.
ತಿಂಗಳಿಗೊಮ್ಮೆ ಸ್ವಯಂ ಪರೀಕ್ಷಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬಹುದು. ಬೇಗ ಬದಲಾವಣೆ ಗಮನಿಸಿ, ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಕಂಡುಬಂದರೆ, ಚಿಕಿತ್ಸೆಯು ಯಶಸ್ವಿಯಾಗುವ ಸಾಧ್ಯತೆಯಿದೆ. ವೈದ್ಯರಿಂದ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಮ್ಯಾಮೊಗ್ರಾಮ್ ಮಾಡುವುದರಿಂದ ಕ್ಯಾನ್ಸರ್ ಕಂಡುಹಿಡಿಯಲು ಸಾಧ್ಯ. ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಕ್ಯಾನ್ಸರ್ ಮುಕ್ತ ಸಮಾಜಕ್ಕೆ ಫೌಂಡೇಶನ್ ಭದ್ರಬುನಾದಿ ಹಾಕಲಿದೆ’ ಎಂದು ಹೇಳಿದರು.
ಧರ್ಮಸಿಂಗ್ ಫೌಂಡೇಶನ್, ಕ್ಯಾನ್ಸರ್ ಕೇರ್ ಇಂಡಿಯಾ, ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆಗಳ ಸಹಯೋಗದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ವೈದ್ಯೆ ಡಾ.ಕಾಮೇಶ್ವರಿ ದೇವಿ ನೇತೃತ್ವದ ತಂಡವು ನೂರಾರು ಮಹಿಳೆಯರನ್ನು ಪರೀಕ್ಷಿಸಿ, ಕಾಯಿಲೆಯ ಲಕ್ಷಣ ಮತ್ತು ಮುಂಜಾಗ್ರತೆ ಹಾಗೂ ಜೀವನಶೈಲಿಯ ಬಗ್ಗೆ ಮಾರ್ಗದರ್ಶನ ನೀಡಿತು.
ಶಾಸಕ ಡಾ.ಅಜಯ್ ಸಿಂಗ್ ಅವರು ವೈದ್ಯರಾಗಿ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ, ಪ್ರಮುಖರಾದ ರಾಜಶೇಖರ ಸೀರಿ, ಬಸವಂತರಾಯ ಸಾಹು ಗಾಣಿಗೇರ, ಶಿವಪುತ್ರಪ್ಪ ಸಾಹು ಕೋರಿ, ಶರಣಬಸಪ್ಪ ಜೋಗೂರ, ಪ್ರತಾಪ ಕಟ್ಟಿ, ರವಿ ಉಮ್ನರ್ಗಿ, ಬಹಾದ್ದೂರ ರಾಠೋಡ, ವಿಜಯಕುಮಾರ ಹಿರೇಮಠ, ಮಹಿಬೂಬ ಶಿರಸಗಿ, ಶ್ರೀಶೈಲ ಬುಟ್ನಾಳ, ಗುರುನಾಥ ಪಾಟೀಲ ಕುರನಳ್ಳಿ, ಗಫೂರ ಬಾಗವಾನ್ ಸೇರಿ ಹಲವಾರು ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.