
ಕಲಬುರಗಿ: ‘ದ ಮಿಡ್‌ಹಬ್ ಕ್ಯಾನ್ಸರ್ ಸೆಂಟರ್ ಹಾಗೂ ನಾಲ್ಕು ಚಕ್ರ ಸಂಘಟನೆ ವತಿಯಿಂದ ನಗರದ ಶಾಲಾ ಕಾಲೇಜುಗಳಲ್ಲಿ ಕ್ಯಾನ್ಸರ್ ತಡೆಯುವ ಕುರಿತು ಫೆ.13ರಿಂದ 17ರವರೆಗೆ ಅಭಿಯಾನ ಹಾಗೂ ಕ್ಯಾನ್ಸರ್ ಲಸಿಕೆ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಕ್ಯಾನ್ಸರ್ ಸೆಂಟರ್‌ನ ಶ್ರುತಿ ವೆಂಕಟೇಶ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್‌ನಿಂದ ನಿಮಿಷಕ್ಕೆ 8 ಜನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಅದನ್ನು ತಡೆಯುವ ಉದ್ದೇಶದಿಂದ 9 ವರ್ಷದಿಂದ 14 ವರ್ಷ ಯುವತಿಯರಿಗೆ ಎರಡು ಡೋಸ್ ಹಾಗೂ 15ರಿಂದ 45 ವರ್ಷದವರಿಗೆ ಮೂರು ಡೋಸ್ ಲಸಿಕೆ ಲಭ್ಯವಿದೆ. ಕ್ಯಾನ್ಸರ್‌ಗೆ ತುತ್ತಾಗುವ ಮೊದಲು ಮಹಿಳೆಯರು ಲಸಿಕೆ ಹಾಕಿಸಿಕೊಂಡರೆ ಕ್ಯಾನ್ಸರ್‌ನಿಂದ ದೂರ ಇರಬಹುದು’ ಎಂದು ಹೇಳಿದರು.
‘ನಗರದ ಶಾಲಾ–ಕಾಲೇಜು, ಸ್ಲಂ ಪ್ರದೇಶಗಳಿಗೆ ತೆರಳಿ ಅರಿವು ಮೂಡಿಸುವ ಗುರಿ ಹೊಂದಲಾಗಿದೆ. ಹಂತ ಹಂತವಾಗಿ ಅಭಿಯಾನ ಮಾಡಲಾಗುವುದು. ಫೆ.13ರಿಂದ ಮೊದಲ ಹಂತವಾಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜ್, ಮಲಕರಡ್ಡಿ ಆಯುರ್ವೇದಿಕ್ ಕಾಲೇಜು ಹಾಗೂ ಶರಣ ಬಸವ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಮಹಿಳೆಯರಿಗಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಮಾಲಾ ಕಣ್ಣಿ, ಆನಂದತೀರ್ಥ ಜೋಶಿ, ಸುರೇಶ ಬಡಿಗೇರ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.