ಕಲಬುರಗಿ: ‘ಕ್ಯಾನ್ಸರ್ ಸಾಂಕ್ರಾಮಿಕವೂ ಅಲ್ಲ, ಆನುವಂಶಿಕ ರೋಗವೂ ಅಲ್ಲ. ತಂಬಾಕು ಉತ್ಪನ್ನಗಳ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ಬರುವ ಕಾಯಿಲೆ. ಡಿಎನ್‌ಎ ಮಾರ್ಪಡಿಸಿಕೊಂಡು ಅನಿಯಂತ್ರಿತವಾಗಿ ಬೆಳೆಯುವ ಜೀವಾಣುವೇ ಕ್ಯಾನ್ಸರ್’ ಎಂದು ಕಲಬುರಗಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಡಾ.ಗುರುರಾಜ ದೇಶಪಾಂಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಕಿದ್ವಾಯಿ ಆಸ್ಪತ್ರೆ, ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘ, ಜಿಲ್ಲಾ ಸ್ತ್ರೀರೋಗ ತಜ್ಞರ ಸಂಘ, ನಾಲ್ಕುಚಕ್ರ ಚಾರಿಟಬಲ್ ಟ್ರಸ್ಟ್, ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ, ಭೋರೂಕಾ ಕಣ್ಣಿನ ಆಸ್ಪತ್ರೆಯಿಂದ ನಗರದ ಅಪ್ಪ ಪಬ್ಲಿಕ್ ಶಾಲೆಯ ಆವರಣದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಅರಿವು, ಉಪನ್ಯಾಸ ಹಾಗೂ ತಪಾಸಣಾ ಕಾರ್ಯಕ್ರಮದಲ್ಲಿ ಅವರು ‘ಕ್ಯಾನ್ಸರ್ ಕಾಯಿಲೆ’ ಕುರಿತು ವಿಷಯ ಮಂಡಿಸಿದರು.
‘2022ರಲ್ಲಿ ದೇಶದ ಪ್ರತಿ ಲಕ್ಷ ಜನರಲ್ಲಿ 100 ಮಂದಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಇದರಲ್ಲಿ ಪುರುಷರ ಪ್ರಮಾಣ ಪ್ರತಿ ಲಕ್ಷಕ್ಕೆ 95ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಪ್ರತಿಲಕ್ಷಕ್ಕೆ 105ರಷ್ಟಿತ್ತು. 2025ರ ಹೊತ್ತಿಗೆ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 15.7 ಲಕ್ಷಕ್ಕೆ ಹೆಚ್ಚುವ ಬಗೆಗೆ ಅಂದಾಜಿಸಲಾಗಿದೆ’ ಎಂದರು.
‘ದೇಶದಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅತಿಹೆಚ್ಚು ಕಾಡುತ್ತಿದ್ದರೆ, ಪುರುಷರಿಗೆ ಪ್ರಾಸ್ಟೇಟ್, ಶ್ವಾಸಕೋಶ ಹಾಗೂ ಬಾಯಿ ಕ್ಯಾನ್ಸರ್ ಅಧಿಕವಾಗಿ ಬಾಧಿಸುತ್ತಿದೆ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ, ಶೇ 80ರಷ್ಟು ಕ್ಯಾನ್ಸರ್‌ಗಳನ್ನು ತಡೆಯಬಹುದು ಇಲ್ಲವೇ ಗುಣಪಡಿಸಬಹುದು. ಆದರೆ, ದೇಶದಲ್ಲಿ ಕೇವಲ ಶೇ 12.5ರಷ್ಟು ಜನ ಮಾತ್ರವೇ ಕ್ಯಾನ್ಸರ್‌ಗೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಾರೆ’ ಎಂದು ಹೇಳಿದರು.
ಡಾ.ಕಾವೇರಿ ಅವರು ಸ್ತನ ಕ್ಯಾನ್ಸರ್ ಬಗೆಗೆ, ಡಾ.ಮಹಾನಂದಾ ಮೇಳಕುಂದಿ ಅವರು ಗರ್ಭಕಂಠ ಕ್ಯಾನ್ಸರ್ ಬಗೆಗೆ, ಡಾ.ಸುಮಯ್ಯ ಸನಾ ಅವರು ಗರ್ಭ ಕಂಠದ ಕ್ಯಾನ್ಸರ್ ಅರಿವು ನಿರ್ವಹಣಾ ಮತ್ತು ಚಿಕಿತ್ಸೆ ಬಗೆಗೆ ಪಿಪಿಟಿ ಮೂಲಕ ವಿಷಯ ಮಂಡಿಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಸಂಘಟಕಿ ಡಾ.ರವಿಕಾಂತಿ ಕ್ಯಾತನಾಳ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಸಂಧ್ಯಾ ಕಾನೇಕರ, ಬಸವರಾಜ ಬಳೂಂಡಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಸಹೋದರಿ ಇಂದುಮತಿ ದೇಶಮಾನೆ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು.
ಡಾ.ಆಸ್ನಾ ಫಾತಿಮಾ, ಡಾ.ದೀಪಕ ಸುಕೆ, ಡಾ. ಸಿದ್ರಾಮಪ್ಪ ಪಾಟೀಲ, ಡಾ.ರಾಕೇಶ ಕಾಂಬ್ಳೆ, ಡಾ.ಚಂದ್ರಕಾಂತ ನರಿಬೋಳ, ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುಳಾ, ನಾಲ್ಕುಚಕ್ರ ಟ್ರಸ್ಟ್‌ನ ಮಾಲಾ ಕಣ್ಣಿ, ಡಾ.ಅಲ್ಲಮಪ್ರಭು ದೇಶಮುಖ, ನಂದಿನಿ ಸನಬಾಲ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
‘ಲಸಿಕೆ ಪಡೆಯಲು ಹಿಂಜರಿಕೆ ಬೇಡ’
‘ವಿಶ್ವದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ನಡೆದಿದೆ. ಅದರೊಂದಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನವೂ ದೊರೆಯುತ್ತಿದೆ. ರೋಗ ತಡೆಗೆ ಲಸಿಕೆಗಳೂ ಬರುತ್ತಿವೆ. ಸದ್ಯ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಗೆ 9ರಿಂದ 14 ವರ್ಷಗಳ ಒಳಗಿನ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ಹಾಕಲಾಗುತ್ತಿದೆ. ಈ ಬಗೆಗೆ ಸರ್ಕಾರಿ ಇಲಾಖೆಗಳು ನಿಯಮಿತವಾಗಿ ಜಾಗೃತಿ ಮೂಡಿಸಬೇಕು. ಜನರು ಹಿಂಜರಿಕೆ ಇಲ್ಲದೇ ಲಸಿಕೆ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸಲಹೆ ನೀಡಿದರು.
ನೂರಾರು ಮಂದಿಗೆ ಪ್ರಯೋಜನ
ಕಾರ್ಯಕ್ರಮದಲ್ಲಿ ಉಚಿತವಾಗಿ ವಿವಿಧ ಬಗೆಯ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ಕಣ್ಣಿನ ತಪಾಸಣೆಗೂ ವ್ಯವಸ್ಥೆ ಮಾಡಲಾಗಿತ್ತು. ಯುವ ಬಿಸಿಜಿ ಲಸಿಕೆಯನ್ನೂ ಹಾಕಲಾಯಿತು. ವಿವಿಧ ಇಲಾಖೆಗಳ ಸಿಬ್ಬಂದಿಯೂ ಸೇರಿದಂತೆ ನೂರಾರು ಮಂದಿ ಇದರ ಪ್ರಯೋಜನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.