
ಕಲಬುರಗಿ: ಹೋಳಿ ಹುಣ್ಣಿಮೆ ಅಂಗವಾಗಿ ಸೂರ್ಯ ನಗರಿ ಕಲಬುರಗಿ ಜನರು ಬುಧವಾರ ಬಣ್ಣದಲ್ಲಿ ಮಿಂದೆದ್ದರು.
ನಗರದ ಹತ್ತಾರುಕಡೆ ಮಂಗಳವಾರ ರಾತ್ರಿ ಕಾಮನ ದಹನ ನಡೆದಿತ್ತು. ಬುಧವಾರ ಸೂರ್ಯೋದಯದೊಂದಿಗೆ ಚಿಣ್ಣರು ಪಿಚಕಾರಿಗಳಲ್ಲಿ ಬಣ್ಣ ತುಂಬಿಸಿ ಎರಚುವ ಮೂಲಕ ಬಣ್ಣದೋಕುಳಿಗೆ ಮುನ್ನುಡಿ ಬರೆದರು. ಬಳಿಕ ಯುವಜನರು, ಮಹಿಳೆಯರು ಬಣ್ಣದಾಟಕ್ಕೆ ಧುಮುಕಿದರು. ಹೊತ್ತು ಏರಿದಂತೆಲ್ಲ ಓಣಿಗಳ ರಸ್ತೆಗಳೆಲ್ಲವೂ ತರಹೇವಾರಿ ಬಣ್ಣಗಳಲ್ಲಿ ಮಿಂದೆದ್ದವು.
ಅಪಾರ್ಟ್‌ಮೆಂಟ್ ಗಳ ನಿವಾಸಿಗಳು ಮೊದಲಿಗೆ ಒಣ ಬಣ್ಣ ಪರಸ್ಪರ ಮುಖಗಳಿಗೆ ಬಳಿದು ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಬಳಿಕ ಡ್ರಮ್‌ಗಳಲ್ಲಿ ತುಂಬಿಸಿದ್ದ ಬಣ್ಣದ ನೀರು ಎರಚಾಡಿ, ಧ್ವನಿವರ್ಧಕಗಳಲ್ಲಿ ಸಂಗೀತ ಮೊಳಗಿಸಿ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಓಣಿಗಳಲ್ಲಿ ಬಣ್ಣದಾಟ ಮುಗಿದ ಬಳಿಕ ಟಂಟಂ ವಾಹನಗಳಲ್ಲಿ ಬಣ್ಣದ ನೀರು ತುಂಬಿದ ಡ್ರಮ್ ಗಳನ್ನು ಇಟ್ಟುಕೊಂಡು ತಮಟೆ, ಡೋಲು, ತಾಷಾ ಬಾರಿಸುತ್ತ ನಗರದ ಮುಖ್ಯ ರಸ್ತೆಗಳಲ್ಲಿ ಬಣ್ಣದೋಕುಳಿ ಸೃಷ್ಟಿಸಿದರು.
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರುಕಟ್ಟೆಗಳಲ್ಲಿ ರಂಗೀನಾಟದ ಸಡಗರಮನೆ ಮಾಡಿತ್ತು.
ಹಲವೆಡೆ ಯುವತಿಯರು, ಯುವಕರು ಪ್ರತ್ಯೇಕ ಗುಂಪುಗಳಲ್ಲಿ ಬಣ್ಣವಾಡಿದರೆ, ಮತ್ತೆ ಕೆಲವೆಡೆ ಯುವಜನರು, ಚಿಣ್ಣರು, ವೃದ್ಧರಾದಿಯಾಗಿ ಬಣ್ಣವಾಡಿ ಖುಷಿಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.