
ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ, ಬೆಂಗಳೂರಿನಿಂದ ಸ್ಥಳಾಂತರಿಸಿದ್ದ ಕೈದಿ ಮತ್ತು ಈ ಮೊದಲೇ ಇದ್ದ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಜೈಲು ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಟಿ.ವಿ ನೋಡುವ ವಿಚಾರಕ್ಕೆ ಮಂಗಳವಾರ ತಡರಾತ್ರಿ ಶುರುವಾದ ಅಸಮಾಧಾನ ಬುಧವಾರ ಬೆಳಿಗ್ಗೆ 9.45ರ ಹೊತ್ತಿಗೆ ಹೊಡೆದಾಟಕ್ಕೆ ತಿರುಗಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಅರಿತ ಜೈಲು ಸಿಬ್ಬಂದಿ, ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಎಲ್ಲರನ್ನು ಚದುರಿಸಿ ಕೈದಿಗಳನ್ನು ಲಾಕ್ ಮಾಡಿದ್ದಾರೆ.
ಮಾಹಿತಿ ತಿಳಿದ ಧಾವಿಸಿದ ಸಿಎಆರ್‌ನ ತುಕಡಿ ಸೇರಿದಂತೆ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
‘ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರಿಸಿದ್ದ ವಿಚಾರಣಾಧೀನ ಕೈದಿ ವೆಂಕಟರಮಣ ಸ್ವಾಮಿ ಹಾಗೂ ಸ್ಥಳೀಯ ಕೈದಿ ನಡುವೆ ಮಂಗಳವಾರ ತಡರಾತ್ರಿ ಗಲಾಟೆ ನಡೆದಿದೆ. ಬ್ಯಾರಕ್–1ರಲ್ಲಿ ಇದ್ದ ಟಿ.ವಿ ಧ್ವಂಸಗೊಳಿಸಲಾಗಿದೆ. ಬುಧವಾರ ಬೆಳಿಗ್ಗೆ ಮತ್ತೆ ಮಾರಾಮಾರಿ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ (ಅಪರಾಧ) ಪ್ರವೀಣ ನಾಯಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಹಾಗೂ ‘ಜೈಲಿನ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಲಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹಂಚಿಕೆ ಆಗಿ ಸದ್ದು ಮಾಡಿತ್ತು.
ಯಾರಿತ ವೆಂಕಟರಮಣ?:
‘ಬೆಂಗಳೂರು ಮೂಲದ ವೆಂಕಟರಮಣ ಸ್ವಾಮಿ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಒಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವೆಂಕಟರಮಣ ಸ್ವಾಮಿ, 2006ರಿಂದ 2019ರ ತನಕ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ಮತ್ತೊಂದು ಕೊಲೆ ಕೃತ್ಯದಲ್ಲಿ ಸಿಕ್ಕಿಬಿದ್ದು ಬೆಂಗಳೂರಿನ ಜೈಲು ಸೇರಿದ್ದ. ಆ ಜೈಲಿನಲ್ಲೂ ಒರಟಾಗಿ ನಡೆದುಕೊಂಡಿದ್ದ. ಎರಡು ಕೊಲೆ ಮಾಡಿದ್ದಾಗಿ ಸಹ ಕೈದಿಗಳ ಮೇಲೆ ಹಕ್ಕುಸಾಧಿಸಲು ಹವಣಿಸುತ್ತಿದ್ದ. ಪರಿಣಾಮ ಸ್ಥಳಾಂತರ ಶಿಕ್ಷೆಗೆ ಒಳಗಾದ ಆತನನ್ನು 2025ರ ಅಕ್ಟೋಬರ್ 17ರಂದು ಕಲಬುರಗಿ ಜೈಲಿಗೆ ಸ್ಥಳಾಂತರಿಸಲಾಗಿತ್ತು’ ಎಂದು ಜೈಲಿನ ಮೂಲಗಳು ಹೇಳಿವೆ.
ಟಿ.ವಿ ವಿಚಾರಕ್ಕೆ ಗಲಾಟೆ ನಡೆದಿದ್ದು ಜೈಲು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥ ಕೈದಿಗಳ ವಿರುದ್ಧ ದೂರು ದಾಖಲಿಸುತ್ತೇವೆ
–ಆರ್.ಅನಿತಾ ಮುಖ್ಯ ಜೈಲು ಅಧೀಕ್ಷಕಿ ಕಲಬುರಗಿ ಕೇಂದ್ರ ಕಾರಾಗೃಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.