ಕಲಬುರಗಿ: ‘ಭಯೋತ್ಪಾದಕ ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಕದನ ವಿರಾಮದ ನಿರ್ಧಾರದಿಂದ ಸೇನೆಗೆ ಹಾಗೂ ಭಾರತೀಯ ಸಾಮಾನ್ಯ ನಾಗರಿಕರಿಗೆ ನಿರಾಸೆ ತಂದಿದೆ’ ಎಂದು ಗಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಾಕಿಸ್ತಾನ ನಂಬಿಕೆಗೆ ಅರ್ಹವಾದ ರಾಷ್ಟ್ರವಲ್ಲ. ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ನೆಲೆಗಳ ಮೇಲೆ ಸೈನಿಕರು ದಾಳಿ ಮಾಡಿ ನಾಶ ಮಾಡಿದ್ದಾರೆ. ಆದರೆ, ಕದನ ವಿರಾಮ ಘೋಷಿಸಲಾಗಿದೆ. ಅದನ್ನು ಯಾರು ಘೋಷಿಸಬೇಕು? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬೇಕು. ಅಧಿವೇಶನದ ಮೂಲಕ ದೇಶದ ಜನರಿಗೆ ವಾಸ್ತವ ತಿಳಿಸಲಿ’ ಎಂದರು.
‘ಕಾಶ್ಮೀರ ವಿಚಾರ ದ್ವಿಪಕ್ಷೀಯ ವಿಷಯವಾಗಿದೆ. ಪಾಕಿಸ್ತಾನ ಹಾಗೂ ಭಾರತ ನಡುವಿನ ವಿಚಾರವನ್ನು ಈಗ ಅಮೆರಿಕ ಮಧ್ಯೆ ಪ್ರವೇಶಿಸುವ ಮೂಲಕ ಅಂತರರಾಷ್ಟ್ರೀಯ ವಿಚಾರವನ್ನಾಗಿ ಮಾಡಲಾಗಿದೆ. ಕದನ ವಿರಾಮ ಘೋಷಣೆ ಮಾಡಲು ಟ್ರಂಪ್ ಯಾರು? ಅವರ ಟ್ವಿಟ್ಟರ್‌ನಲ್ಲಿರುವ ಅಂಶಗಳನ್ನು ಗಮನಿಸಿದ್ದೀರಾ? ಕಾಮನ್ ಸೆನ್ಸ್ ಎನ್ನುವ ಪದ ಬಳಸಿ, ಭಾರತಕ್ಕೆ ಬುದ್ಧಿ ಹೇಳಿರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವರು ಹಾಗೂ ರಾಷ್ಟ್ರೀಯ ಭದ್ರತೆ ಸಲಹೆಗಾರರು ಕದನ ವಿರಾಮದ ಬಗ್ಗೆ ಯಾಕೆ ಜನರಿಗೆ ವಾಸ್ತವ ತಿಳಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ವಿದೇಶಾಂಗ ನೀತಿಗಳು ಬಲಿಷ್ಠಗೊಳ್ಳಬೇಕಾದರೆ ಭಾರತದ ಪ್ರಧಾನಿಗಳು ಹೊರದೇಶದ ಪ್ರಧಾನಿಗಳನ್ನು ಅಪ್ಪಿಕೊಂಡರೆ ಸಾಲದು. ಅವರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಭಯೋತ್ಪಾದಕ ಕೃತ್ಯವನ್ನು ಅಮೆರಿಕ ಖಂಡಿಸಿಲ್ಲ. ಚೀನಾ ಹಾಗೂ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈ ನಡುವೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಪಾಕಿಸ್ತಾನಕ್ಕೆ ಸಾಲ ಘೋಷಿಸಿದೆ. ಭಾರತ ಸರ್ಕಾರ ಭಯೋತ್ಪಾದನೆಗೆ ಬೆಂಬಲವಾಗಿರುವ ಪಾಕಿಸ್ತಾನಕ್ಕೆ ಸಾಲ ನೀಡದಂತೆ ಮನವರಿಕೆ ಮಾಡಲು ವಿಫಲವಾಗಿದೆ. ಇದರಿಂದಾಗಿ ಭಾರತ ವಿದೇಶಾಂಗ ನೀತಿಗಳಲ್ಲಿ ಎಡವುತ್ತಿದೆ ಎನ್ನುವ ಅಭಿಪ್ರಾಯ ಮೂಡುತ್ತಿದೆ’ ಎಂದು ಹೇಳಿದರು.
‘ದೇಶದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಪಹಲ್ಗಾಮ್ ದಾಳಿಯ ಭಯೋತ್ಪದಾಕರು ಏನಾದರು? ಈಗ ಅವರೆಲ್ಲ ಎಲ್ಲಿದ್ದಾರೆ? ಭಯೋತ್ಪಾದಕ ದಾಳಿ, ಕದನ ವಿರಾಮದ ಬಗ್ಗೆ ಪ್ರಧಾನಿಗಳು ಸಂಸತ್ತಿನ ಅಧಿವೇಶನ ಕರೆದು ದೇಶದ ನಾಗರಿಕರಿಗೆ ತಿಳಿಸಲಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.