ADVERTISEMENT

ಕಲಬುರ್ಗಿ: ಗೊಂದಲಗಳಿಲ್ಲದೇ ಮುಗಿದ ಸಿಇಟಿ

ನಾಲ್ಕೂ ಪರೀಕ್ಷೆ ಬರೆದ ಇಬ್ಬರು ಕೋವಿಡ್‌ ಸೋಂಕಿತರು, ವೈದ್ಯರೇ ಪರೀಕ್ಷಕರಾಗಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:48 IST
Last Updated 31 ಜುಲೈ 2020, 15:48 IST
ಭಾಗ್ಯಶ್ರೀ
ಭಾಗ್ಯಶ್ರೀ   

ಕಲಬುರ್ಗಿ: ಜಿಲ್ಲೆಯಲ್ಲಿ ಈ ಬಾರಿಯೂ ಯಾವುದೇ ಗೊಂದಲ ಇಲ್ಲದಂತೆ, ಎರಡು ದಿನಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಮುಗಿದವು. ಶುಕ್ರವಾರ ಕೂಡ ಒಟ್ಟು 8,231 ವಿದ್ಯಾರ್ಥಿಗಳು ಸಿಇಟಿ ಬರೆದರು.

ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಜಿಲ್ಲೆಯಲ್ಲಿ 8,851 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ನಡೆದ ಭೌತವಿಜ್ಞಾನ ಪರೀಕ್ಷೆಗೆ 620 ಹಾಗೂ ಮಧ್ಯಾಹ್ನ ನಡೆದ ರಸಾಯನ ವಿಜ್ಞಾನ ಪರೀಕ್ಷೆಗೆ 630 ವಿದ್ಯಾರ್ಥಿಗಳು ಗೈರಾದರು.

ಜಿಲ್ಲೆಯಲ್ಲಿ ತೆರೆದ ಎಲ್ಲ 27 ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಗೊಂದಲ ಇಲ್ಲದಂತೆ ಎಲ್ಲ ಪರೀಕ್ಷೆಗಳು ಸುಸೂತ್ರವಾಗಿ ಮುಗಿದಿವೆ ಎಂದು ಪದವುಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ತಿಳಿಸಿದ್ದಾರೆ.

ADVERTISEMENT

ನಿಯಮಾನುಸಾರ ಎಲ್ಲರಿಗೂ ಪ್ರತ್ಯೇಕ ಸ್ಯಾನಿಟೈಸರ್‌ ಬಾಟಲಿ ನೀಡಿ, ಥರ್ಮಲ್‌ ಗನ್‌ನಿಂದ ಸ್ಕ್ರೀನಿಂಗ್‌ ನಡೆಸಿ ಕೋಣೆಯ ಒಳಗೆ ಬಿಡಲಾಯಿತು. ಸಾಲಾಗಿ ನಿಂತ ವಿದ್ಯಾರ್ಥಿಗಳು ಕೋಣೆಯ ಹೊರಗಡೆ ಕೂಡ ಅಂತರ ಪಾಲನೆ ಮಾಡಿದ್ದು ಕಂಡುಬಂತು.

ನಾಲ್ಕೂ ಪರೀಕ್ಷೆ ಬರೆದ ಸೋಂಕಿತರು: ಕೋವಿಡ್‌ ಸೋಂಕು ದೃಢಪಟ್ಟ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ಸಹ ಪರೀಕ್ಷೆಗೆ ಹಾಜರಾಗುವ ಮೂಲಕ, ಎಲ್ಲ ನಾಲ್ಕೂ ವಿಷಯಗಳ ಸಿಇಟಿ ಬರೆದರು.

ನಗರದ ಏಷಿಯನ್ ಮಾಲ್ ಸಮೀಪ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ತೆರೆದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇವರಿಗಾಗಿ ವ್ಯವಸ್ಥೆ ಮಾಡಲಾಯಿತು. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಪರೀಕ್ಷಾ ಉಸ್ತುವಾರಿ ವಹಿಸಿಕೊಂಡಿದ್ದರು.

ಹಿಂದಿನಂತೆಯೇ, ಪರೀಕ್ಷೆಗಳನ್ನು ಸುಗಮ ನಡೆಸಲು ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯಸ್ಥ, ಇಬ್ಬರು ಸಿಟ್ಟಿಂಗ್‌ ಸ್ಕ್ಯಾಡ್, ಒಬ್ಬ ಪರಿವೀಕ್ಷಕ ಹಾಗೂ ನಾಲ್ಕು ಕೇಂದ್ರಗಳಿಗೆ ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು
ನಿಯೋಜಿಸಲಾಗಿತ್ತು.

ಪರೀಕ್ಷಾರ್ಥಿಗಳ ಮಾತು
‘ಬಿಎಸ್‌ಸಿ ಅಗ್ರಿ’ ಮಾಡಬೇಕು ಎಂಬುದು ನನ್ನ ಬಹಳ ದಿನಗಳ ಆಸೆ. ಅದಕ್ಕೆ ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದೇನೆ. ಈ ಬಾರಿ ಸಿಇಟಿನಲ್ಲಿಯೂ ಒಳ್ಳೆಯ ರ್‍ಯಾಂಕ್‌ ಬರುವ ನಿರೀಕ್ಷೆ ಇದೆ. ಅದನ್ನು ಆಧರಿಸಿ ಮುಂದಿನ ಕೋರ್ಸ್‌ ಬಗ್ಗೆ ಗಮನಿಸುತ್ತೇನೆ.
–ನಿವೇದಿತಾ ಆದನಕರ, ಮುಕ್ತಾಂಬಿಕಾ ಕಾಲೇಜು, ಕಲಬುರ್ಗಿ

*‌
ವೈದ್ಯಕೀಯ ಕ್ಷೇತ್ರ ನನಗೆ ಇಷ್ಟವಾಗಿದೆ. ಹಾಗಾಗಿ, ಸಿಇಟಿಗೆ ಹೆಚ್ಚು ತಯಾರಿ ಮಾಡಿಕೊಂಡಿದ್ದೇನೆ. ಆರಂಭದಲ್ಲಿ ಕೋವಿಡ್ ಕಾರಣ ತುಸು ಭಯ ಇತ್ತು. ಬರಬರುತ್ತ ಎಲ್ಲವೂ ಸಾಮಾನ್ಯ ಎಂಬ ಭಾವ ಮೂಡಿದ್ದರಿಂದ ಪರೀಕ್ಷೆ ನಿರಾಳವಾಗಿ ಬರೆದೆ.
–ಭಾಗ್ಯಶ್ರೀ ವಿ.ಬಿ., ಎಸ್‌ಬಿಆರ್‌, ಕಲಬುರ್ಗಿ

*
ಪರೀಕ್ಷಾ ಕೋಣೆಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಮಾಡಿದ್ದರಿಂದ ನಿರ್ಭಯವಾಗಿ ಸಿಇಟಿ ಬರೆಯಲು ಸಾಧ್ಯವಾಯಿತು. ಕೋವಿಡ್ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಂತೆಯೇ ಸಿಇಟಿಯನ್ನೂ ಮುಂದೆ ಹಾಕುತ್ತಾರೆ ಎಂಬ ಆತಂಕ ಇತ್ತು. ಸಕಾಲಕ್ಕೆ ಪರೀಕ್ಷೆ ನಡೆಸಿದ್ದು ಸಮಾಧಾನ ತಂದಿದೆ.
–ಯೋಗಿತಾ ವಿ.ಸಿ., ಮುಕ್ತಾಂಬಿಕಾ ಕಾಲೇಜು, ಕಲಬುರ್ಗಿ

*
ಸಿಇಟಿ ನೋಂದಣಿ ಮಾಡುವಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬದಲಾಗಿದೆ. ನಾನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪಿಯು ಓದಿದ್ದೇನೆ. ಅನಿವಾರ್ಯವಾಗಿ ಕಲಬುರ್ಗಿಯಲ್ಲಿ ಸಿಇಟಿ ಬರೆಯಬೇಕಾಯಿತು. ಇಲ್ಲಿ ಯಾವುದೇ ತೊಂದರೆ ಆಗದೇ ಪರೀಕ್ಷೆ ಎದುರಿಸಿದೆ.
–ನಿಂಗಣ್ಣ ನಾಗರಗೊಟ್ಟ, ಸಿಂದಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.