ADVERTISEMENT

ಹದಗೆಟ್ಟ ನಗರಾಡಳಿತ, ಮೈಮರೆತ ಸಚಿವ: ಚಂದು ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:27 IST
Last Updated 18 ಫೆಬ್ರುವರಿ 2026, 5:27 IST
<div class="paragraphs"><p>ಚಂದು ಪಾಟೀಲ</p></div>

ಚಂದು ಪಾಟೀಲ

   

ಕಲಬುರಗಿ: ‘ನಗರದಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತವೂ ಸಂಪೂರ್ಣ ವಿಫಲವಾಗಿದ್ದು, ಹದಗೆಟ್ಟ ರಸ್ತೆಗಳನ್ನು ಸುಧಾರಣೆ ಮಾಡುತ್ತಿಲ್ಲ. ಕುಡಿಯಲು ಸಮರ್ಪಕ ನೀರು ಪೂರೈಸುತ್ತಿಲ್ಲ. ನಗರದ ಇಬ್ಬರೂ ಶಾಸಕರು ಮೈಮರೆತಿದ್ದು, ಇಡೀ ಜಗತ್ತಿನ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪರಿಹಾರ ನೀಡಿಲ್ಲವೆಂದು ಕಂಪ್ಯೂಟರ್, ಕುರ್ಚಿ ತೆಗೆದುಕೊಂಡು ಹೋಗುತ್ತಿದ್ದು, ಮತ್ತೊಂದೆಡೆ ಅಧಿಕಾರಿ, ಸಿಬ್ಬಂದಿ ಕೆಲಸವೇ ಇಲ್ಲದೆ ತಿರುಗಾಡುತ್ತಿದ್ದಾರೆ. ಪಾಲಿಕೆಯ ಎಲ್ಲ ಕೆಲಸ ಸಂಪೂರ್ಣ ಸ್ಥಗಿತವಾಗಿದ್ದು, ಜನರು ನಿತ್ಯ ಪರದಾಟ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹೇಳುವವರು ಕೇಳುವವರೂ ಇಲ್ಲದಂತಾಗಿದೆ. ಮಾದಕ ವ್ಯಸನಿಗಳು, ಹಗಲು, ರಾತ್ರಿ ದರೋಡೆ ಹೆಚ್ಚಾಗಿವೆ’ ಎಂದು ದೂರಿದ್ದಾರೆ.

ADVERTISEMENT

‘ನಗರದ ಭಾಗಶಃ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದ್ದು, ಹೊಸ ರಸ್ತೆಗಳ ನಿರ್ಮಾಣ ಬಿಡಿ ಕನಿಷ್ಠ ದುರಸ್ತಿಯನ್ನೂ ಮಾಡುತ್ತಿಲ್ಲ. ಅತ್ತ ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿಸುತ್ತಿದ್ದ ಮೆಗಾ ಜವಳಿ ಪಾರ್ಕ್ ಕೆಲಸ ಆರಂಭಿಸದೇ ನಿರಂತರವಾಗಿ ಮೋಸ ಮಾಡಲಾಗಿದೆ. ಕನಿಷ್ಠ ಮೂಲಸೌಕರ್ಯ ಕಲ್ಪಿಸದೆ ಕೇಂದ್ರದ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಆರೋಪಿಸಿದ್ದಾರೆ.

‘ಪಾಲಿಕೆ ಸದಸ್ಯರಿಗೆ ಕನಿಷ್ಠ ಸೌಲಭ್ಯಗಳು ನೀಡುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್‌ನ ಪಾಲಿಕೆ ಸದಸ್ಯರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ಟ್ರಂಪ್ ಹಿಡಿದು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದು, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ರಾಜಕಾರಣದ ಹೇಳಿಕೆ ನೀಡಿ, ವಾಸ್ತವ ವಿಷಯಗಳನ್ನು ಮರೆಮಾಚುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳಾದರೂ ಶೇ 10ರಷ್ಟು ಕೆಲಸ ಮಾಡಿ, ಹೌದೆನಿಸಿಕೊಳ್ಳಲಿ. ಬರೀ ಬಡಾಯಿ ಕೊಚ್ಚಿಕೊಳ್ಳುವುದು ಬಿಡಲಿ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.