
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವ ಫೆಬ್ರುವರಿ 24ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದು, ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಚನ್ನಮ್ಮ ಸದಾಶಿವ ಬಿರಾದಾರ 11 ಚಿನ್ನದ ಪದಕಗಳಿಗೆ ಕೊರಳೊಡ್ಡುವ ಮೂಲಕ ‘ಅಪರಂಜಿ’ ಸಾಧನೆ ತೋರಿದ್ದಾರೆ.
‘ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಘಟಿಕೋತ್ಸವ ನಡೆಯಲಿದ್ದು, ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆಯ (ಡೀಮ್ಡ್ ವಿವಿ) ವಿಶ್ರಾಂತ ಕುಲಪತಿ ಪ್ರೊ.ಎಲ್.ಎಂ.ಪಟ್ನಾಯಕ್ ಘಟಿಕೋತ್ಸವ ಭಾಷಣ ಮಾಡುವರು. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ಪಾಲ್ಗೊಳ್ಳುವರು’ ಎಂದು ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಇದು 2023–24ನೇ ಸಾಲಿನ ಘಟಿಕೋತ್ಸವ. ಈ ಘಟಿಕೋತ್ಸವದಲ್ಲಿ 15,504 ಪದವಿ, 3,462 ಸ್ನಾತಕೋತ್ತರ ಪದವಿ, 44 ಡಿಪ್ಲೊಮಾ ಪದವಿ ಹಾಗೂ 123 ಪಿಎಚ್.ಡಿ ಪದವೀಧರರು ಸೇರಿದಂತೆ ಒಟ್ಟು 19,133 ಮಂದಿ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಹತೆ ಪಡೆದಿದ್ದಾರೆ. ಈ ಪೈಕಿ, 2,251 ಪದವಿ ವಿದ್ಯಾರ್ಥಿಗಳು, 937 ಸ್ನಾತಕೋತ್ತರ ಪದವಿ, ಒಬ್ಬರಿಗೆ ಡಿಪ್ಲೊಮಾ ಪದವಿ ಹಾಗೂ 213 ಪಿಎಚ್.ಡಿ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘43ನೇ ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ 24 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 148 ಸೇರಿದಂತೆ ಒಟ್ಟು 172 ಚಿನ್ನ ಪದಕಗಳನ್ನು 77 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದರಲ್ಲಿ 58 ವಿದ್ಯಾರ್ಥಿನಿಯರು ಹಾಗೂ 19 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಉಳಿದ 9 ಚಿನ್ನದ ಪದಕಗಳನ್ನು ನಗದು ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿನಿಯರು ಹಾಗೂ 5 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 19 ಮಂದಿಗೆ ವಿತರಿಸಲಾಗುವುದು’ ಎಂದು ಕುಲಪತಿ ಉಡಿಕೇರಿ ಹೇಳಿದರು.
‘ಚಿನ್ನದ ಪದಕ ವಿಜೇತರಲ್ಲಿ ಗುಲಬರ್ಗಾ ವಿವಿ ಕ್ಯಾಂಪಸ್‌ನ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಚನ್ನಮ್ಮ ಬಿರಾದಾರ ಅತಿ ಹೆಚ್ಚು ಅಂದರೆ 11 ಚಿನ್ನದ ಪದಕ ಪಡೆದ್ದಾರೆ. ಪ್ರಾಣಿವಿಜ್ಞಾನ ವಿಭಾಗದ ರಾಹುಲ್, ಎಂಬಿಎ ಅಧ್ಯಯನ ವಿಭಾಗದ ಸುರೇಖಾ 8, ರಾಜ್ಯಶಾಸ್ತ್ರ ವಿಷಯದಲ್ಲಿ ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಮೀಮ್ ರಫತ್ 6, ಸಮಾಜ ಕಾರ್ಯ ಅಧ್ಯಯನ ವಿಭಾಗದ ದೀಪಾ 6, ಕಂಪ್ಯೂಟರ್ ಸೈನ್ಸ್ ವಿಭಾಗದ ಸುಬೀಯಾ ನೂರೈನ್ 5, ರಸಾಯನ ವಿಜ್ಞಾನ ವಿಭಾಗದ ಪ್ರಿಯಾಂಕಾ ರಾಠೋಡ 5, ಜೀವರಸಾಯನ ವಿಜ್ಞಾನ ವಿಭಾಗದ ಶಶಿಕುಮಾರ 5 ಹಾಗೂ ಕಲಬುರಗಿಯ ಗುರುಕುಲ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ಪ್ರೀತಿ ಖೇಮ್ಕರ್ 5 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ’ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರ ಹಾಗೂ ವಿತ್ತಾಧಿಕಾರಿ ಜಯಾಂಬಿಕಾ ಇದ್ದರು.
‘ಆರ್ಥಿಕ ಸಂಪನ್ಮೂಲದ ಕೊರತೆ’
‘ವಿಶ್ವವಿದ್ಯಾಲಯವು ಆರ್ಥಿಕ ಭಾರ ಎದುರಿಸುತ್ತಿದೆ. ಕಾಯಂ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಇನ್ನೊಂದೆಡೆ ವಿವಿ ವ್ಯಾಪ್ತಿಯ ಕಾಲೇಜುಗಳಿಂದ ಶುಲ್ಕ ಹಾಗೂ ಪರೀಕ್ಷಾ ವೆಚ್ಚದ ರೂಪದಲ್ಲಿ ತಲಾ ₹2 ಕೋಟಿಗಳಷ್ಟು ಬಾಕಿಯಿದೆ. ಮತ್ತೊಂದೆಡೆ ಅತಿಥಿ ಉಪನ್ಯಾಸಕರು ನಿವೃತ್ತರ ಪಿಂಚಣಿ ಗುತ್ತಿಗೆ ಆಧಾರಿತ ಸಿಬ್ಬಂದಿ ವೇತನ ಇತ್ಯಾದಿ ಸೇರಿದಂತೆ ತಿಂಗಳಿಗೆ ₹2 ಕೋಟಿಗಳಷ್ಟು ವಿಶ್ವವಿದ್ಯಾಲಯಕ್ಕೆ ಹೊರೆಯಾಗುತ್ತಿದೆ. ಈ ಸಂಪನ್ಮೂಲ ಕ್ರೋಡೀಕರಿಸಬೇಕಿದೆ. ಒಂದೊಮ್ಮೆ ಕಾಯಂ ಹುದ್ದೆಗಳ ಭರ್ತಿಯಾದರೆ ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ಧನ ಒಂದಿಷ್ಟು ಉಳಿಯವಾಗಲಿದೆ. ಹೀಗಾಗಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಹೇಳಿದರು. ‘ಹಣಕಾಸು ಅವ್ಯವಹಾರ; ಶೀಘ್ರ ವರದಿ ನಿರೀಕ್ಷೆ’ ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಸಮಗ್ರ ತನಿಖೆಗೆ ಸಿಂಡಿಕೇಟ್ ನೇಮಿಸಿರುವ ಸಿಂಡಿಕೇಟ್ ಸದಸ್ಯ ಫಹೀಮುದ್ದೀನ್ ಪೀರಜಾದ್ ನೇತೃತ್ವದ ಸಮಿತಿಯು ಕೆಲವು ಸಭೆಗಳನ್ನು ನಡೆಸಿದೆ. ಸಭೆಯಲ್ಲಿ ಮೇಲ್ನೋಟಕ್ಕೆ ಆರ್ಥಿಕ ಅವ್ಯವಹಾರ ಕಂಡು ಬಂದಿದೆ. ಸಮಿತಿಯು ಶೀಘ್ರವೇ ತನ್ನ ವರದಿ ಸಲ್ಲಿಸುವ ನಿರೀಕ್ಷೆಗಳಿವೆ’ ಎಂದು ಪ್ರಶ್ನೆಯೊಂದಕ್ಕೆ ಉಡಿಕೇರಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.