ADVERTISEMENT

ಕವಿರಾಜಮಾರ್ಗ ಕನ್ನಡದ ಶ್ರೇಷ್ಠ ಗ್ರಂಥ: ಜಗನ್ನಾಥ ತರನಳ್ಳಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 4:40 IST
Last Updated 8 ಏಪ್ರಿಲ್ 2024, 4:40 IST
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮವನ್ನು ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಉದ್ಘಾಟಿಸಿದರು. ಸ್ವಾಮಿರಾವ ಕುಲಕರ್ಣಿ, ಜಗನ್ನಾಥ ತರನಳ್ಳಿ, ಪ್ರೀತಿ ಪಾಟೀಲ ಭಾಗವಹಿಸಿದ್ದರು
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮವನ್ನು ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಉದ್ಘಾಟಿಸಿದರು. ಸ್ವಾಮಿರಾವ ಕುಲಕರ್ಣಿ, ಜಗನ್ನಾಥ ತರನಳ್ಳಿ, ಪ್ರೀತಿ ಪಾಟೀಲ ಭಾಗವಹಿಸಿದ್ದರು   

ಕಲಬುರಗಿ: ‘ಕವಿರಾಜಮಾರ್ಗ ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಮತ್ತು ಕನ್ನಡದ ಶ್ರೇಷ್ಠ ಗ್ರಂಥ. ಇದರ ಕರ್ತೃ ಶ್ರೀವಿಜಯ ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ’ ಎಂದು ಸಾಹಿತಿ ಜಗನ್ನಾಥ ತರನಳ್ಳಿ ಹೇಳಿದರು.

ನಗರದ ಮದರ್ ತೆರೆಸಾ ಬಿ.ಇಡಿ ಕಾಲೇಜಿನಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಲಿಂ. ಗುರುಬಾಯಿ ಲಿಂ.ಗುರುಪಾದಪ್ಪ ಪರುತೆ ಕಾಳಗಿ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂಘದಿಂದ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ನಮ್ಮ ಸುತ್ತಮುತ್ತಲಿನ ಹಿರಿಯ ಸಾಹಿತಿಗಳ ಪುಸ್ತಕ ಮತ್ತು ಹಿರಿಯ ಸಾಧಕರ ಇತಿಹಾಸ ಪರಿಚಯ ಮಾಡಿಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ’ ಎಂದರು.

ADVERTISEMENT

ಸಂಘದ ಉಪಾಧ್ಯಕ್ಷ ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಓದೋಣ ಪುಸ್ತಕ, ಬೆಳೆಸೋಣ ಮಸ್ತಕ, ದತ್ತಿ ಕಾರ್ಯಕ್ರಮದ ಮೂಲಕ ಒಂದಿಷ್ಟು ಸಾಹಿತ್ಯ ಅಭಿರುಚಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೀತಿ ಪಾಟೀಲ, ನಿರ್ದೇಶಕ ಶರಣಬಸಪ್ಪ ವಡ್ಡನಕೇರಿ, ಪ್ರೊ.ನೀಲಾಂಬಿಕಾ ಪೊಲೀಸ್‌ ಪಾಟೀಲ, ಸಂಧ್ಯಾ ಹೊನಗುಂಟಿಕರ್‌, ಕೆ.ಎಸ್.ನಾಯಕ, ಸೂರ್ಯಕಾಂತ ಸೊನ್ನದ, ಶಿವಾನಂದ ಮಠಪತಿ, ಶಾಂತ ಭೀಮಸೇನರಾವ್, ಬಸವರಾಜ ಗನಹಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.