ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬಿಗರ ಚೌಡಯ್ಯ ಗೆಳೆಯರ ಬಳಗದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಪ್ರಜಾವಾಣಿ ಚಿತ್ರ
ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದನ್ನು ಖಂಡಿಸಿ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಕೋಲಿ ಸಮುದಾಯದ ನೂರಾರು ಯುವಜನರು ಪ್ರತಿಭಟನೆ ನಡೆಸಿದರು.
ನಗರದ ಗಂಗಾ ನಗರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸೂಪರ್ ಮಾರ್ಕೆಟ್ ಮೂಲಕ ಜಗತ್‌ವೃತ್ತ ತಲುಪಿತು. ಜಗತ್‌ವೃತ್ತದಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಯುವ ಮುಖಂಡರು, ‘ನಿಜ ಶರಣ ಚೌಡಯ್ಯ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅದೇ ಸ್ಥಳದಲ್ಲಿ ತ್ವರಿತವಾಗಿ ಹೊಸ ಮೂರ್ತಿ ನಿರ್ಮಾಣಕ್ಕೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಬಳಗದ ಅಧ್ಯಕ್ಷ ರಮೇಶ ಜಮಾದಾರ ಮಾತನಾಡಿ, ‘ಮೂರ್ತಿ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಪೊಲೀಸರು ಈ ತನಕ ಬಂಧಿಸಿಲ್ಲ. ತನಿಖೆಯ ಪ್ರಗತಿಯನ್ನೂ ಪೊಲೀಸರು ತಿಳಿಸುತ್ತಿಲ್ಲ. ಆರೋಪಿಗಳನ್ನು ಬಂಧಿಸದಿದ್ದರೆ ಕಲಬುರಗಿ ಬಂದ್ ಮಾಡುವುದು ಅನಿವಾರ್ಯವಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಗದ ಕಾರ್ಯಾಧ್ಯಕ್ಷ ರಾಕೇಶ ಜಮಾದಾರ ಮಾತನಾಡಿ, ‘ದುಷ್ಕೃತ್ಯ ಎಸೆಗಿದವರನ್ನು ಕೂಡಲೇ ಬಂಧಿಸಬೇಕು, ಒಂದು ವಾರದಲ್ಲಿ ಹೊಸ ಮೂರ್ತಿ ಸ್ಥಾಪಿಸಲು ಕ್ರಮವಹಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.
ಮುಖಂಡ ಲಚ್ಚಪ್ಪ ಜಮಾದಾರ ಮಾತನಾಡಿ, ‘ಚೌಡಯ್ಯ ಮೂರ್ತಿ ಭಗ್ನಗೊಳಿಸಿದ್ದು ಹೇಡಿಗಳ, ಮೂರ್ಖರ ಕೆಲಸ. ಈ ಕೃತ್ಯ ಎಸೆಗಿದ ಆರೋಪಿಗಳನ್ನು ಪೊಲೀಸರು ಈತನಕ ಬಂಧಿಸಿಲ್ಲ. ಈ ಕೃತ್ಯ ಎಸೆಗಿದವರನ್ನು, ಇದರ ಹಿಂದೆ ಕೈವಾಡ ಇರುವವರನ್ನು ಬಂಧಿಸಿ ಅರೆಬೆತ್ತಲೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಬೇಕು’ ಎಂದು ಆಗ್ರಹಿಸಿದರು.
ಬಳಿಕ ಸಮಾಜದ ಮುಖಂಡರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಮೃತ ಡಿಗ್ಗಿ, ಅನಿಲ್ ಕೂಡಿ, ಪ್ರೇಮ ಕೋಲಿ, ಸುರೇಶ ಬೆನಕನಳ್ಳಿ, ಶ್ರೀಕಾಂತ ಆಲೂರ, ರಾಜು ಹೊಳಿಕಟ್ಟಿ, ಶಿವಕುಮಾರ ತಳವಾರ, ಸಂತೋಷ ಬೆನ್ನೂರ, ಶರಣು ಶಿವಾಜಿನಗರ, ಮಹಾತೇಂಶ ಹರವಾಳ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
‘ಉಪವಾಸ ಸತ್ಯಾಗ್ರಹದ ಎಚ್ಚರಿಕೆ’
ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ ‘ಈಗಾಗಲೇ ಮುತಗಾ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದೇನೆ. ಹೊಸ ಮೂರ್ತಿ ಸ್ಥಾಪನೆಗೆ ವೈಯಕ್ತಿಕವಾಗಿ ₹1ಲಕ್ಷ ಹಾಗೂ ನನ್ನ ಶಾಸಕತ್ವ ಅನುದಾನದಲ್ಲಿ ₹4 ಲಕ್ಷ ಬಿಡುಗಡೆಗೆ ಕ್ರಮವಹಿಸಿದ್ದೇನೆ' ಎಂದರು. ‘ನಮ್ಮದು ದೊಡ್ಡ ಸಮಾಜ. ಸಮಾಜಕ್ಕಿಂತಲೂ ದೊಡ್ಡವರು ಯಾರೂ ಇಲ್ಲ. ನಮ್ಮ ಸಮಾಜದ ಗುರುಗಳ ಮೂರ್ತಿ ಭಗ್ನಗೊಳಿಸಿದ್ದು ಅಕ್ಷಮ್ಯ. ಇದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಎರಡು ದಿನಗಳಲ್ಲಿ ಇಂಥ ಕೃತ್ಯ ಎಸೆಗಿದ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮವಹಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ನನ್ನ ಸಮಾಜಕ್ಕೆ ಅನ್ಯಾಯವಾದರೆ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಗುಡುಗಿದರು. ‘ಚೌಡಯ್ಯ ಮೂರ್ತಿ ವಿಧಾನಸೌಧ ಎದುರು ಸ್ಥಾಪಿಸಲು ಹಾಗೂ ಕೋಲಿಕಬ್ಬಲಿಗ ಸಮಾಜವನ್ನು ಎಸ್ಟಿ ಸೇರ್ಪಡೆಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.