ADVERTISEMENT

ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:18 IST
Last Updated 10 ಡಿಸೆಂಬರ್ 2025, 6:18 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

2025–26ನೇ ಸಾಲಿನಲ್ಲಿ ರಾಜ್ಯದಲ್ಲಿ 16.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತೊಗರಿ ಬೆಳೆದಿದ್ದು, 12.60 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರು ತೊಗರಿ ಬೆಳೆದಿದ್ದಾರೆ.

‘ರಾಜ್ಯದಲ್ಲಿ ಬೆಳೆದಿರುವ ತೊಗರಿ ಡಿಸೆಂಬರ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯ ಪ್ರತಿ ಕ್ವಿಂಟಲ್‌ ತೊಗರಿಗೆ ಮಾರುಕಟ್ಟೆಯಲ್ಲಿ ₹5,830ರಿಂದ ₹6,700 ದರವಿದೆ.
2025–26ನೇ ಸಾಲಿಗೆ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ₹8 ಸಾವಿರ ಬೆಂಬಲ ಬೆಲೆ ಘೋಷಣೆಯಾಗಿದೆ. ಹೀಗಾಗಿ ರೈತರು ಬೆಂಬಲ ಬೆಲೆಯತ್ತ ಚಿತ್ತ ನೆಟ್ಟಿದ್ದಾರೆ. ಆದರೆ,
ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ತೊಗರಿ ಖರೀದಿ ಕೇಂದ್ರಗಳನ್ನು ಫೆಬ್ರುವರಿ, ಮಾರ್ಚ್‌ನಲ್ಲಿ ತೆರೆಯುತ್ತದೆ. ಇದರಿಂದ ರೈತರಿಗೆ ನಷ್ಟವಾಗುವ ಅಪಾಯವಿದೆ’ ಎಂದು ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.

‘ನಾಫೆಡ್‌ ಹಾಗೂ ಎನ್‌ಸಿಸಿಎಫ್‌ ಮೂಲಕ ಕನಿಷ್ಠ ಬೆಂಬಲ ಬೆಲೆಯಡಿ ತೊಗರಿ ಖರೀದಿ ಕೇಂದ್ರ ಆರಂಭಕ್ಕೆ ಅನುಮತಿ ನೀಡುವಂತೆ ನವೆಂಬರ್‌ 6ರಂದು ಕೂಡ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ, ಈ ತನಕ ಯಾವುದೇ ಕ್ರಮವಹಿಸಿಲ್ಲ. ರಾಜ್ಯದಲ್ಲಿ ಕೂಡಲೇ ಎಂಎಸ್‌ಪಿಯಡಿ ತೊಗರಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು’ ಎಂದು ಡಿ.8ರಂದು ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.