ADVERTISEMENT

ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ

ಸೇಡಂ: ಚೇಳು ಕಚ್ಚಿ ಬಾಲಕಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 15:41 IST
Last Updated 2 ಮಾರ್ಚ್ 2020, 15:41 IST
ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಾಲಕರು ಸೇಡಂ ಆಸ್ಪತ್ರೆ ಎದುರು ಸೋಮವಾರ ಶವವಿಟ್ಟು ಪ್ರತಿಭಟನೆ ನಡೆಸಿದರು
ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಾಲಕರು ಸೇಡಂ ಆಸ್ಪತ್ರೆ ಎದುರು ಸೋಮವಾರ ಶವವಿಟ್ಟು ಪ್ರತಿಭಟನೆ ನಡೆಸಿದರು   

ಸೇಡಂ: ಚೇಳು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಾಲಕರು ಮತ್ತು ರಂಜೋಳ ಗ್ರಾಮಸ್ಥರು ಸೋಮವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡಸಿದರು.

ತಾಲ್ಲೂಕಿನ ರಂಜೋಳ ಗ್ರಾಮದ ಐಶ್ವರ್ಯ ಮಲ್ಲಪ್ಪ (11) ಎಂಬ ಬಾಲಕಿಯನ್ನು ಫೆ.29 ರಂದು ಚೇಳು ಕಚ್ಚಿದ್ದರಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಚಿಕಿತ್ಸೆ ನೀಡುವಂತೆ ಪಾಲಕರು ಆಸ್ಪತ್ರೆಯ ಸಿಬ್ಬಂದಿಗೆ ಕೋರಿದ್ದರು. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲಿಲ್ಲ ಎನ್ನಲಾಗಿದೆ.

ತಕ್ಷಣವೇ ಅಂಬುಲೆನ್ಸ್ ಒದಗಿಸುವಂತೆ ಹಲವು ಬಾರಿ ಕೋರಿದರೂ ಸಿಬ್ಬಂದಿ ಸ್ಪಂದಿಸಿಲ್ಲ. ಇದರಿಂದಾಗಿ ಜಿಲ್ಲಾಸ್ಪತ್ರೆಗೆ ಬಾಲಕಿಯನ್ನು ಕರೆದೊಯ್ಯಲು ವಿಳಂಬ ಆಗಿದೆ. ಬಾಲಕಿ ಭಾನುವಾರ ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸೇಡಂನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೆ ಬಾಲಕಿ ಬದುಕುತ್ತಿದ್ದಳು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿರುವುದೇ ಬಾಲಕಿಯ ಸಾವಿಗೆ ಕಾರಣ ಎಂದು ಪ್ರತಿಭಟನೆ ನಡೆಸಿದರು.

ADVERTISEMENT

ಸ್ಥಳಕ್ಕೆ ಪಿಎಸ್ಐ ಸುಶೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಒತ್ತಾಯಿಸಿದರೂ ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ನಂತರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗೀತಾ ಪಾಟೀಲ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.