ಚಿತ್ತಾಪುರ(ಕಲಬುರಗಿ): ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಏ.19ರಂದು ನಾಮಪತ್ರ ಸಲ್ಲಿಸುವಾಗ ನಡೆಸಿದ್ದ ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡು, ಮಕ್ಕಳಿಗೆ ಬಿಸಿಲಿನಲ್ಲಿ ದೈಹಿಕ ಹಿಂಸೆ ನೀಡಿದ ದೂರಿನಡಿ ಚಿತ್ತಾಪುರ ಮಂಡಲ ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ ಅವರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ನಾಮಪತ್ರ ಸಲ್ಲಿಸಲು ನಡೆಸಿದ್ದ ಮೆರವಣಿಗೆಯ ವಾಹನದಲ್ಲಿ ಮಕ್ಕಳನ್ನು ಕೂಡಿಸಿ, ಅವರ ಕೈಯಲ್ಲಿ ಬಿಜೆಪಿ ಬಾವುಟ ನೀಡಿದ್ದಾರೆ. ಬೇಸಿಗೆಯ ಕಡು ಬಿಸಿಲಿನಲ್ಲಿ ದೈಹಿಕ ಹಿಂಸೆ ನೀಡಿ ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ ಅವರು, ಚುನಾವಣೆ ಆಯೋಗದ ನಿರ್ದೇಶನ ಉಲ್ಲಂಘಸಿದ್ದಾರೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಶ್ರೀಶೈಲಪ್ಪ ಮಲಕಪ್ಪ ಬೋನಾಳ ಅವರು ಸೋಮಾವರ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಬಾವುಟ ಹಿಡಿದುಕೊಂಡಿದ್ದ ಮಕ್ಕಳು ಬಿಜೆಪಿ ಪರವಾಗಿ ಘೋಷಣೆ ಕೂಗುತ್ತಾ ಸಾಗಿದರು. ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಚುನಾವಣೆ ಆಯೋಗ ನಿರ್ದೇಶನ ನೀಡಿದ್ದರೂ ಸಹ ನೀಲಕಂಠ ಅವರು ಮಕ್ಕಳನ್ನು ಬಳಸಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದರಿಂದ ಪೊಲೀಸರು ಐಪಿಸಿ ಕಲಂ 188 ಹಾಗೂ ಜೆಜೆ ಕಾಯ್ದೆ ಕಲಂ 75 ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.