ADVERTISEMENT

ಚಿಂಚೋಳಿ: ಕಬ್ಬು ಖರೀದಿಗೆ ದಲ್ಲಾಳಿಗಳ ಲಗ್ಗೆ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 6:01 IST
Last Updated 1 ಫೆಬ್ರುವರಿ 2024, 6:01 IST
ಚಿಂಚೋಳಿಯಿಂದ ಬೀದರ್‌ ಕಡೆ ಕಬ್ಬು ತುಂಬಿಕೊಂಡು ಹೋಗುತ್ತಿರುವ ಹಲಚೇರಾ ಗ್ರಾಮದ ರೈತರ ಕಬ್ಬು ತುಂಬಿದ್ದ ಟ್ರಾಲಿ ಚಾಂಗ್ಲೇರಾ ಬಳಿ ಉರುಳಿರುವುದು
ಚಿಂಚೋಳಿಯಿಂದ ಬೀದರ್‌ ಕಡೆ ಕಬ್ಬು ತುಂಬಿಕೊಂಡು ಹೋಗುತ್ತಿರುವ ಹಲಚೇರಾ ಗ್ರಾಮದ ರೈತರ ಕಬ್ಬು ತುಂಬಿದ್ದ ಟ್ರಾಲಿ ಚಾಂಗ್ಲೇರಾ ಬಳಿ ಉರುಳಿರುವುದು   

ಚಿಂಚೋಳಿ: ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕ ಬೀಗ ತೆರೆದರೂ ಕಾರ್ಯಾರಂಭ ಮಾಡದಿರುವ ಕಾರಣ ತಾಲ್ಲೂಕಿಗೆ ದಲ್ಲಾಳಿಗಳು ಲಗ್ಗೆಯಿಟ್ಟಿದ್ದಾರೆ.

ಟನ್‌ ಕಬ್ಬಿಗೆ ₹2,200 –₹2,500 ನೀಡುತ್ತೇವೆ ಎಂದು ಕಬ್ಬು ಬೆಳೆಗಾರರ ಬಳಿಗೆ ದೌಡಾಯಿಸಿದ್ದಾರೆ ಎಂದು ಕಬ್ಬು ಬೆಳೆಗಾರರು ಪ್ರಜಾವಾಣಿಗೆ ತಿಳಿಸಿದ್ದಾರೆ.

ದಲ್ಲಾಳಿಗಳು ಮಶೀನ್‌ನಿಂದ ಕತ್ತರಿಸುತ್ತೇವೆ ಎಂದರೆ ಇನ್ನೂ ಕೆಲವರು ಕೂಲಿ ಕಾರ್ಮಿಕರಿಂದ ಕತ್ತರಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬೆಳೆಗಾರರು ದೂರಿದ್ದಾರೆ.

ADVERTISEMENT

ಸಿದ್ಧಸಿರಿ ಕಂಪನಿ ನಂಬಿ ಕಬ್ಬು ಬೆಳೆದ ರೈತರು ಈಗ ಯಾವ ಕಂಪನಿಗೆ ಮಾರಾಟ ಮಾಡಬೇಕು ಎನ್ನುವುದು ತಿಳಿಯದ ಸ್ಥಿತಿಯಲ್ಲಿದ್ದಾರೆ. 

ತಾಲ್ಲೂಕಿನಲ್ಲಿ ವಿವಿಧೆಡೆ ಕಟಾವು ಮಾಡಿದ ಕಬ್ಬು ರೈತರಿಗೆ ಹಾನಿಯಾಗಬಾರದು ಎಂದು ಬೇರೆ ಗಾಂಧಿ, ಕಿಸಾನ್ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ ಎನ್ನುತ್ತಾರೆ ಹಲವು ರೈತರು.

ನಮ್ಮ ತಾಲ್ಲೂಕಿನ ಕಂಪನಿಗೆ ಬೀಗ ಹಾಕಿಸಿ ನೆರೆ ಜಿಲ್ಲೆಯ ಕಂಪನಿಗಳು ಕಬ್ಬು ಪಡೆಯುತ್ತಿರುವುದು ರೈತರಲ್ಲಿ ಅನುಮಾನ ಹುಟ್ಟುಹಾಕಿದ್ದು, ಸಿದ್ಧಸಿರಿ ಪುನರ್ ಆರಂಭಿಸಿ ತಾಲ್ಲೂಕಿನ ರೈತರ ಕಬ್ಬು ನುರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಮಧ್ಯೆ ಕಬ್ಬು ಬೆಳೆಗಳು ಮಂಗಳವಾರ ಪ್ರತಿಭಟನೆ ನಡೆಸಿ ಸ್ಥಳೀಯ ರೈತರ ಕಬ್ಬು ಖರೀದಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರು.

ಆರಂಭ ಇಂದು: ಚಿಂಚೋಳಿಯ ಸಿದ್ಧಸಿರಿ ಎಥನಾಲ್ ಮತ್ತು ವಿದ್ಯುತ್ ಘಟಕ ಗುರುವಾರದಿಂದ ಮತ್ತೆ ಕಾರ್ಯಾರಂಭ ಮಾಡಲು ತಿಳಿಸಲಾಗಿದೆ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಶಿವಕುಮಾರ ಪಾಟೀಲ ತಿಳಿಸಿದರು.

ಪಟಪಳ್ಳಿ ಗ್ರಾಮದ ನನ್ನ ಜಮೀನಿನಲ್ಲಿರುವ ಅರ್ಧ ಕಬ್ಬನ್ನು ಕಂಪನಿ ಕಟಾವು ಮಾಡಿಕೊಂಡು ಹೋಗಿದೆ. ಇನ್ನೂ ಅರ್ಧ ಕಬ್ಬು ಉಳಿದಿದ್ದು ಒಣಗುವ ಸ್ಥಿತಿಯಲ್ಲಿದೆ. ಕಂಪನಿಯವರು ಸ್ಪಂದಿಸುತ್ತಿಲ್ಲ
ರವೀಂದ್ರ ಶಾಬಾದಿ ಕಬ್ಬು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.