ADVERTISEMENT

ಬೈಪಾಸ್ ರಸ್ತೆ ಕಾಮಗಾರಿ ಟೆಂಡರ್ ರದ್ದು

ಬಾಪೂರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಗೆ ಅರ್ಧಚಂದ್ರ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:10 IST
Last Updated 18 ಜನವರಿ 2026, 7:10 IST
ಚಿಂಚೋಳಿ–ಮಿರಿಯಾಣ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಅವರು ಭೂಸ್ವಾಧೀನಕ್ಕೆ ಅಗತ್ಯವಾದ ಜಮೀನಿನ ಮಾಹಿತಿ ಪಡೆದರು
ಚಿಂಚೋಳಿ–ಮಿರಿಯಾಣ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಅವರು ಭೂಸ್ವಾಧೀನಕ್ಕೆ ಅಗತ್ಯವಾದ ಜಮೀನಿನ ಮಾಹಿತಿ ಪಡೆದರು   

ಚಿಂಚೋಳಿ: ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167 (ಎನ್)ರಲ್ಲಿ ಬರುವ ಚಿಂಚೋಳಿಯಿಂದ ಮಿರಿಯಾಣ ಗಡಿವರೆಗೆ ರಸ್ತೆ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರ ಅರ್ಧಚಂದ್ರ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಭೂಸಾರಿಗೆ ಸಚಿವಾಲಯದ ಅಧಿಕಾರಿಗಳು ಯೋಜನೆಗೆ ಖಾಸಗಿ ಸಹಭಾಗಿತ್ವ (ಹ್ಯಾಮ್ ಮೋಡ್)ದಲ್ಲಿ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿ ಟೆಂಡರ್ ಕರೆದಿದ್ದರು. ಕೇಂದ್ರದ ಶೇ 40 ಮತ್ತು ಖಾಸಗಿ ಸಹಭಾಗಿತ್ವದ ಶೇ 60ರ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.

ಚಿಂಚೋಳಿಯಿಂದ ತೆಲಂಗಾಣ ಗಡಿವರೆಗೆ 15.8 ಕಿ.ಮೀ ರಸ್ತೆ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ಕಾಮಗಾರಿಯ ಭೂಸ್ವಾಧೀನ ವಿಳಂಬ ನೆಪಮಾಡಿ ಕೇಂದ್ರದ ಭೂಸಾರಿಗೆ ಸಚಿವಾಲಯ ಜ.6ರಂದು ಅಧಿಸೂಚನೆ ಹೊರಡಿಸಿ ಟೆಂಡರ್ ರದ್ದುಪಡಿಸಿದೆ. ಈ ಕುರಿತ ಅಧಿಸೂಚನೆಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೇಂದ್ರದ ಭೂಸಾರಿಗೆ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಎಂಜಿನೀಯರ್ ಬಿ.ಟಿ. ಶ್ರೀಧರ ಟೆಂಡರ್ ರದ್ದುಪಡಿಸಿದ ಅಧಿಸೂಚನೆಗೆ ಸಹಿ ಹಾಕಿದ್ದಾರೆ.

ADVERTISEMENT

ಆಡಳಿತಾತ್ಮಕ ಕಾರಣಗಳಿಗಾಗಿ ಟೆಂಡರ್ ರದ್ದುಪಡಿಸಿದ್ದಾಗಿ ತಿಳಿಸಲಾಗಿದ್ದು, ಬಾಪೂರ–ಮಹಿಬೂಬ ನಗರ ರಾಷ್ಟ್ರೀಯ ಹೆದ್ದಾರಿಯ ಚಿಂಚೋಳಿಯಿಂದ ರಾಜ್ಯ ಗಡಿವರೆಗಿನ ರಸ್ತೆ ನಿರ್ಮಾಣ, ವಿಸ್ತರಣೆ ಮತ್ತು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿ ಅಂದಾಜು ₹ 405 ಕೋಟಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಹಗ್ಗ ಜಗ್ಗಾಟದಿಂದ ಜಿಲ್ಲೆಯ ಪ್ರಮುಖ ಯೋಜನೆಯೊಂದು ಮತ್ತಷ್ಟು ನನೆಗುದಿಗೆ ಬೀಳುವಂತಾಗಿದೆ.

ಜಮೀನಿನ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೆ ಭೂಸ್ವಾಧೀನ ಪೂರ್ಣಗೊಂಡಿಲ್ಲ. ರೈತರಿಗೆ ಪರಿಹಾರವೂ ಲಭಿಸಿಲ್ಲ. ಇದರಿಂದ ನಿರ್ದಿಷ್ಟ ಜಮೀನು ಇಲ್ಲದ ಕಾರಣ ಬೈಪಾಸ್ ರಸ್ತೆ ನಿರ್ಮಾಣ ಸಾಧ್ಯವಾಗದು ಎಂಬ ಹಿನ್ನಲೆಯಲ್ಲಿ ಟೆಂಡರ್ ರದ್ದುಪಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಬಾಪೂರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ–ತೆಲಂಗಾಣ ರಾಜ್ಯಗಳು ಫಲಾನುಭವಿಗಳಾಗಿದ್ದು, ಕರ್ನಾಟಕದ ಚಿಟಗುಪ್ಪ ಮತ್ತು ಚಿಂಚೋಳಿ ತಾಲ್ಲೂಕುಗಳ ಕರ್ನಾಟಕದ 41 ಕಿ.ಮೀ. ವ್ಯಾಪ್ತಿ ಹೊಂದಿದೆ. ಉಳಿದ ಭಾಗ ತೆಲಂಗಾಣ ರಾಜ್ಯದಲ್ಲಿ ಬರುತ್ತದೆ. ಇದರಲ್ಲಿ ಚಿಂಚೋಳಿ ತಾಲ್ಲೂಕಿನ ಸುಮಾರು 30 ಕಿ.ಮೀ ರಸ್ತೆ ರಾ‌ಷ್ಟ್ರೀಯ ಹೆದ್ದಾರಿಯಾಗಿದ್ದು, ಚಿಂಚೋಳಿಯಿಂದ ಮಿರಿಯಾಣವರೆಗಿನ 15.8 ಕಿ.ಮೀ ರಸ್ತೆಯಲ್ಲಿ ಚಿಂಚೋಳಿ, ಪೋಲಕಪಳ್ಳಿ ಮತ್ತು ಮಿರಿಯಾಣ ಹೀಗೆ ಮೂರು ಕಡೆ 9 ಕಿ.ಮೀ. ಬೈಪಾಸ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಟೆಂಡರ್ ರದ್ದತಿಯಿಂದ ಈ ಭಾಗದ ಜನರು ನಿರಾಸೆಗೊಳಗಾಗಿದ್ದಾರೆ. ಇದರಿಂದ ಇಡೀ ಯೋಜನೆಯೇ ರದ್ದಾಗುತ್ತಾ ಎಂಬ ಭೀತಿ ಜನರನ್ನು ಕಾಡುತ್ತಿದೆ.

ಸರ್ಕಾರದ ಪರಿಹಾರದ ಧನದ ಮೇಲೆ ಕಣ್ಣಿಟ್ಟು ಕೆಲವು ವ್ಯಕ್ತಿಗಳು ಭೂಸ್ವಾಧೀನದ ನೀಲಿನಕ್ಷೆ ಪಡೆದುಕೊಂಡು ಅದರ ಅಕ್ಕಪಕ್ಕದ ಜಮೀನು ಖರೀದಿಸಿದ್ದರೆ, ಕೆಲವರು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ್ದಾರೆ. ಟೆಂಡರ್ ರದ್ದತಿಯಿಂದ ಇವರ ಎದೆ ನಡುಗುವಂತಾಗಿದೆ.
ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2021 ಏಪ್ರಿಲ್ 1ರಂದು ಎಕ್ಸ್ (ಟ್ವಿಟರ್) ಮೂಲಕ ಬಾಪೂರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ ಘೋಷಿಸಿದ್ದರು. ಆದರೆ ಈಗಲೂ ತೆವಳುತ್ತಲೇ ಸಾಗಿದೆ.

ಭಾರತ ಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 9 ಮತ್ತು 4 ಮಧ್ಯೆ ಸಂಪರ್ಕಿಸುವ ಎರಡು ರಾಜ್ಯಗಳ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಹೆದ್ದಾರಿ ಯೋಜನೆ ನನೆಗುದಿಗೆ ಬಿದ್ದಿರುವುದು ಈ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚಿಂಚೋಳಿ ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ಹೆದ್ದಾರಿ ವಿಸ್ತರಣೆಗೆ ಅಗತ್ಯವಾದ ಜಾಗದ ಅಳತೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.