ADVERTISEMENT

ಅಭಿವೃದ್ಧಿಗೆ ಗರ; ನಿರೀಕ್ಷೆಗೆ ಸ್ಪಂದಿಸುವುದೇ ಸರ್ಕಾರ?

ಅವಿನಾಶ ಜಾಧವ ಗೆದ್ದರೂ ಮುಂದುವರಿದ ಅಗ್ನಿಪರೀಕ್ಷೆ!

ಜಗನ್ನಾಥ ಡಿ.ಶೇರಿಕಾರ
Published 23 ಫೆಬ್ರುವರಿ 2026, 7:25 IST
Last Updated 23 ಫೆಬ್ರುವರಿ 2026, 7:25 IST
ಅವಿನಾಶ ಜಾಧವ
ಅವಿನಾಶ ಜಾಧವ   

ಚಿಂಚೋಳಿ: ಚಿಂಚೋಳಿಯಲ್ಲಿ ತುರುಸಿನ ಸ್ಪರ್ಧೆಯ ನಂತರವೂ 2023ರಲ್ಲಿ ಶಾಸಕರಾಗಿ ಡಾ.ಅವಿನಾಶ ಜಾಧವ ಮರು ಆಯ್ಕೆಯಾದ ಮೇಲೆ ಚಿಂಚೋಳಿ ಅಭಿವೃದ್ಧಿಗೆ ಗರ ಬಡಿದಿದ್ದು, ಕಳೆದ 3 ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಮಾತುಗಳು ಜನ ಸಾಮಾನ್ಯರಿಂದ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಶಾಸಕರೇ ಚಿಂಚೋಳಿಯಲ್ಲಿರುವುದು ವಾಡಿಕೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಈ ಸಂಪ್ರದಾಯ ಮುರಿದಿದ್ದು, ಚಿಂಚೋಳಿಯಲ್ಲಿ ಬಿಜೆಪಿ ಶಾಸಕರಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಇದರಿಂದ ಬಿಜೆಪಿ ಪಕ್ಷದ ಶಾಸಕರಿಗೆ ಸರ್ಕಾರದಲ್ಲಿ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಇದರ ಜತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳ ಅನುಷ್ಠಾನ, ಕಾಮಗಾರಿ ಪ್ರಾರಂಭಕ್ಕೆ ಮೀನ ಮೇಷ ಎನಿಸುತ್ತಿರುವ ಬಗ್ಗೆ ಕ್ಷೇತ್ರ ಜನರಲ್ಲಿ ಬೇಸರ ಮೂಡಿದೆ.

ದುರಸ್ತಿ ಚಟುವಟಿಕೆ ಆದಿಯಾಗಿ ಹೊಸ ಕಾಮಗಾರಿಗಳಿಗೆ ಕೇವಲ ಕೆಕೆಆರ್‌ಡಿಬಿ ಅನುದಾನಕ್ಕೆ ಚಿಂಚೋಳಿ ಕ್ಷೇತ್ರ ಸೀಮಿತವಾಗಿದೆ. ಬೇರೆ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನ ನೀಡಿದಾಗ ಮೂಗಿಗೆ ತುಪ್ಪ ಸವರಿದಂತೆ ತಾಲ್ಲೂಕಿಗೆ ಅಲ್ಪ ಅನುದಾನ ನೀಡಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ ಎಂಬುದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಕೆಕೆಆರ್‌ಡಿಬಿಯಿಂದ ಎಲ್ಲಾ ಕ್ಷೇತ್ರಗಳಿಗೆ ಹೊಸ ಬಸ್ ನೀಡಿದ್ದಾರೆ. ಆದರೆ ಚಿಂಚೋಳಿ ಮತ್ತು ಕಾಳಗಿ ಘಟಕಗಳಿಗೆ ಹೊಸ ಬಸ್ ನೀಡಿಲ್ಲ. ಇದು ತಾರತಮ್ಯದ ನಿದರ್ಶನ ಎನ್ನುತ್ತಾರೆ ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ.

ADVERTISEMENT

17 ಗ್ರಾಮ ಮತ್ತು ತಾಂಡಾಗಳ ರೈತರ ಜಮೀನಿಗೆ ನೀರುಣಿಸುವ ₹ 204 ಕೋಟಿ ಅಂದಾಜು ಮೊತ್ತದ ಐನಾಪುರ ಏತ ನೀರಾವರಿ ಯೋಜನೆ ಆರಂಭವಾಗಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಯೋಜನೆ ಮಂಜೂರಾದರೂ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಪ್ರಗತಿ ಪಥ ರಸ್ತೆ ಅಭಿವೃದ್ಧಿ, ಕಾಳಗಿಯಲ್ಲಿ ನೂತನ ಮಿನಿ ವಿಧಾನಸೌಧ ಘೋಷಣೆಗಷ್ಟೇ ಸೀಮಿತವಾಗಿದೆ.

ಚಿಂಚೋಳಿಗೆ ಅರಣ್ಯ ಮಹಾವಿದ್ಯಾಲಯ ಮಂಜೂರು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಮಂಜೂರು, ಆಯುಷ್ ಆಸ್ಪತ್ರೆ ಪ್ರಾರಂಭ, ರೇವಗ್ಗಿ ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ, ಚಂದ್ರಂಪಳ್ಳಿ ತೋಟಗಾರಿಕಾ ಕ್ಷೇತ್ರಕ್ಕೆ ಕಾಯಕಲ್ಪ ಹಾಗೂ ತಾಲ್ಲೂಕಿನಲ್ಲಿ ತೋಟಗಾರಿಕೆ ಬೇಸಾಯ ಕ್ಷೇತ್ರ ಹೆಚ್ಚಾಗಿರುವುದರಿಂದ ಅರಿಸಿನ ಮತ್ತು ಹಣ್ಣು ಬೇಸಾಯಗಾರಿಗೆ ವಿಶೇಷ ಪ್ಯಾಕೇಜ್‌ಗೆ ನೀಡಬೇಕೆಂಬ ಬೇಡಿಕೆಗಳಿವೆ.

ಚಿಂಚೋಳಿಯಲ್ಲಿ 90 ವರ್ಷ ಹಳೆಯ ಕಟ್ಟಡದಲ್ಲಿ‌ ನ್ಯಾಯಾಲಯದ ಕಲಾಪಗಳು ನಡೆಯುತ್ತಿವೆ. ಹೊಸ ಕಟ್ಟಡಕ್ಕಾಗಿ‌ ಅನುದಾನ ಮಂಜೂರಾತಿ ಆಗಬೇಕಿದೆ.

ಬಯಲು ಸೀಮೆಯ ಪ್ರಸಿದ್ಧ ಪರಿಸರ ಪ್ರವಾಸಿ ತಾಣವಾದ ಚಂದ್ರಂಪಳ್ಳಿಯಲ್ಲಿ ಪ್ರವಾಸಿಗರ ಮೂಲಸೌಲಭ್ಯ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಮತ್ತು ಜಂಗಲ್ ಲಾಡ್ಜ್ ನಿರ್ಮಾಣಕ್ಕೆ ₹ 7 ಕೋಟಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ತಾಲ್ಲೂಕಿನ ಜನರು ಉದ್ಯೋಗ ಅರಸಿ ಸಹಸ್ರಾರು ಸಂಖ್ಯೆಯಲ್ಲಿ ಮುಂಬೈ, ಪುಣೆ, ಸಂಗಾರಡ್ಡಿ, ಹೈದರಾಬಾದ್, ಬೆಂಗಳೂರು ಮಹಾನಗರಗಳಿಗೆ ಗುಳೆ ಹೋಗುವ ದಶಕಗಳ ಸಮಸ್ಯೆಗೆ ಕಡಿವಾಣ ಬಿದ್ದಿಲ್ಲ. ತಾಂಡಾಗಳು ಕಂದಾಯ ಗ್ರಾಮ ಘೋಷಣೆ ನನೆಗುದಿಗೆ ಬಿದ್ದಿದ್ದು ಕೇಳುವವರೇ ಇಲ್ಲದಂತಾಗಿದೆ. ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ನೀರು ಬಿಟ್ಟರೆ ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಳ್ಳುವ ಸಮಸ್ಯೆಗೆ ಮುಕ್ತಿ ನೀಡಲು ಎತ್ತರದ ಸೇತುವೆಗಳ ನಿರ್ಮಾಣಕ್ಕೆ ಬೇಡಿಕೆಗಳಿವೆ.

ವನ್ಯಜೀವಿ ಧಾಮದ ಹೃದಯಭಾಗದಲ್ಲಿರುವ ಶೇರಿಭಿಕನಳ್ಳಿ ಸ್ಥಳಾಂತರ ಮತ್ತು ಪುನರ್ ವಸತಿ ಸೌಲಭ್ಯ ಕಲ್ಪಿಸುವುದು, ಚಂದ್ರಂಪಳ್ಳಿ ನೀರಾವರಿ ಯೋಜನೆಗೆ ಕಾಯಕಲ್ಪ, ಸಣ್ಣ ನೀರಾವರಿ ಕೆರೆಗಳಿಗೆ ಕಾಲುವೆಗಳ ನಿರ್ಮಾಣ, ತಾಲ್ಲೂಕಿನ ವಿವಿಧ ಪರಿಸರ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಜಿಲ್ಲಾ ಕೇಂದ್ರದಿಂದ ಪ್ರವಾಸಿ ವಾಹನಗಳ ವ್ಯವಸ್ಥೆ ಕಲ್ಪಿಸುವುದು, ತೆಲಂಗಾಣದ ತಾಂಡೂರು ಜಹೀರಾಬಾದ ವಾಯಾ ಕುಂಚಾವರಂ (ಕರ್ನಾಟಕ) ಮಾರ್ಗದ ನೂತನ ರೈಲು ಮಾರ್ಗ ತಾಂಡೂರು ಚಿಂಚೋಳಿ ಜಹೀರಾಬಾದ ಅಥವಾ ಬೀದರ್ ಸಂಪರ್ಕಿಸುವಂತೆ ನೂತನ ಮಾರ್ಗಕ್ಕೆ ಹೋರಾಟಗಳು ನಡೆಯುತ್ತಿವೆ.

ರೇವಗ್ಗಿ ರೇವಣಸಿದ್ದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಲವು ದಶಕಗಳ ಹಿಂದಿನ ಸೇತುವೆಗಳು ನೆಲಸಮಗೊಳಿಸಿ ಎತ್ತರದ ಸೇತುವೆ ನಿರ್ಮಾಣದ ಬೇಡಿಕೆಯಿದೆ. ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.
– ಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ
ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ವಿಶೇಷ ಪ್ಯಾಕೇಜ್ ನಾಗಾ ಈದಲಾಯಿ ಕೆರೆ ಮರು ನಿರ್ಮಾಣ ಚಂದ್ರಂಪಳ್ಳಿ ನೀರಾವರಿ ಯೋಜನೆಗೆ ಕಾಯಕಲ್ಪ ನೀಡಲು ಸರ್ಕಾರಕ್ಕೆ ಮನವಿ‌ ಮಾಡಿದ್ದು ಬಜೆಟ್‌ನಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸವಿದೆ.
– ಸುಭಾಶ ರಾಠೋಡ, ಕೆಪಿಸಿಸಿ ಉಪಾಧ್ಯಕ್ಷ
ಚಿಂಚೋಳಿ ಮತಕ್ಷೇತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಅರಣ್ಯ ಕಾಲೇಜು ಮಂಜೂರು ಮಾಡಬೇಕೆಂಬುದು ಜನರ ಒತ್ತಾಸೆಯಾಗಿದೆ. ಶಿಕ್ಷಣದಿಂದಲೇ ಬದಲಾವಣೆ ಸಾಧ್ಯವಿದೆ ಹೀಗಾಗಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿ ಚಿಂಚೋಳಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷ ಕೊಡುಗೆ ನೀಡಬೇಕು.
– ಮಾರುತಿ‌ ಗಂಜಗಿರಿ, ಭಾರತ ಮುಕ್ತಿ‌ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ

ಸುಲೇಪೇಟ ವ್ಯಾಪಾರ ವಹಿವಾಟು ಕುಸಿತ

ತಾಲ್ಲೂಕು ಕೇಂದ್ರ ಚಿಂಚೋಳಿಗಿಂತಲೂ ಅಧಿಕ ಪ್ರಮಾಣದ ವ್ಯಾಪಾರ ವಹಿವಾಟಿನಿಂದ ತಾಲ್ಲೂಕಿನ ವ್ಯಾವಹಾರಿಕ ಪಟ್ಟಣ ಎಂಬ ಖ್ಯಾತಿ ಹೊಂದಿದ್ದ (ಸೇಡಂ ವಿಧಾನಸಭಾ ಕ್ಷೇತ್ರ) ಚಿಂಚೋಳಿ ತಾಲ್ಲೂಕಿನ ಸುಲೇಪೇಟದಲ್ಲಿ ಈಗ ವ್ಯವಹಾರ ಕುಸಿದಿದ್ದು ಸರ್ಕಾರ ಮತ್ತು ಜನ ಪ್ರತಿನಿಧಿಗಳು ಚಿಂತನೆ ಮಾಡಬೇಕಿದೆ. ಕಾಳಗಿ ಹೊಸ ತಾಲ್ಲೂಕು ರಚನೆಯಾದ ನಂತರ ಸುಲೇಪೇಟ ವಹಿವಾಟಿನ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಹುಲಸೂರು ಮಾದರಿಯಲ್ಲಿ ಸುಲೇಪೇಟ ಹೊಸ ತಾಲ್ಲೂಕು ಮಾಡಬೇಕು. ಇದರಿಂದ ವ್ಯಾಪಾರ ವಹಿವಾಟು ಪುನಃ ಸ್ಥಾಪನೆ ಸಾಧ್ಯ ಎಂಬುದು ಅಲ್ಲಿನ ವ್ಯಾಪಾರಿಗಳದ್ದಾಗಿದೆ. ಸೇಡಂ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಚಿಂಚೋಳಿ ತಾಲ್ಲೂಕಿನ ಜಟ್ಟೂರು ಏತ ನೀರಾವರಿ ಯೋಜನೆಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಅನುದಾನ ದೊರೆಯುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.