ADVERTISEMENT

ಚಿಂಚೋಳಿ: ಎರಡು ಜಿಲ್ಲೆಗಳಲ್ಲಿ ಹಂಚಿ ಹೋದ ನೀರಾವರಿ ಉಪವಿಭಾಗ

ಜಗನ್ನಾಥ ಡಿ.ಶೇರಿಕಾರ
Published 28 ಅಕ್ಟೋಬರ್ 2025, 7:30 IST
Last Updated 28 ಅಕ್ಟೋಬರ್ 2025, 7:30 IST
<div class="paragraphs"><p>ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಜಲಾಶಯದ ಸ್ಲುಯೀಸ್ ಗೇಟ್‌ಗೆ ಜಾಕವೆಲ್‌ನಿಂದ ನೀರು ಹರಿಸಲು ಶೆಡ್‌ಗೆ ಮುರಿದು ಬಾಗಿಲು ಅಳವಡಿಸಿರುವುದು</p></div>

ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಜಲಾಶಯದ ಸ್ಲುಯೀಸ್ ಗೇಟ್‌ಗೆ ಜಾಕವೆಲ್‌ನಿಂದ ನೀರು ಹರಿಸಲು ಶೆಡ್‌ಗೆ ಮುರಿದು ಬಾಗಿಲು ಅಳವಡಿಸಿರುವುದು

   

ಚಿಂಚೋಳಿ: ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆಯ ಖ್ಯಾತಿಯ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಉಪ ವಿಭಾಗ ಎರಡು ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದ್ದು ಮೂರು ಜಲಾಶಯಗಳ ವ್ಯಾಪ್ತಿ ಹೊಂದಿದೆ. ಹೀಗಾಗಿ ಆಡಳಿತ್ಮಾಕ ಸಮಸ್ಯೆ ಎದುರಾಗಿದೆ.

ವಿಶೇಷ ಎಂದರೆ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿಯಲ್ಲಿ ಒಂದು ಜಲಾಶಯವಿದ್ದರೆ, ಇಲ್ಲಿನ 110 ಕಿ.ಮೀ ದೂರದಲ್ಲಿರುವ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಮತ್ತು ಸೌದಾಗರ ಜಲಾಶಯ ಮತ್ತು ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆ ವಿತರಣಾ ನಾಲೆಗಳ ನಿರ್ವಹಣೆಯೇ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ADVERTISEMENT

ಕರ್ನಾಟಕ ನೀರಾವರಿ ನಿಗಮ ನಿಯಮಿತ ಆಧೀನದ ಯೋಜನೆಯಲ್ಲಿ ಒಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನಾಲ್ಕು ಸಹಾಯಕ ಎಂಜಿನಿಯರ್, ಮೂವರು ಕಿರಿಯ ಎಂಜಿನಿಯರ್, ಒಬ್ಬರು ಪ್ರಥಮ ದರ್ಜೆ ಸಹಾಯಕರು, ಇಬ್ಬರು ಕಿರಿಯ ಸಹಾಯಕರು ಮತ್ತು ಇಬ್ಬರು ಜವಾನರು, ಒಬ್ಬರು ಕಾವಲುಗಾರ ಹೀಗೆ ಮಂಜೂರಾದ ಹುದ್ದೆಗಳಿದ್ದು, ನಾಲ್ಕು ಸಹಾಯಕ ಎಂಜಿನಿಯರ್ ಹುದ್ದೆಗಳು ಖಾಲಿಯಿದ್ದರೆ ಉಳಿದ ಹುದ್ದೆಗಳು ಭರ್ತಿಯಿವೆ.

ಚಿಂಚೋಳಿಯ ಚಂದಾಪುರದಲ್ಲಿ ಯೋಜನೆಯ ಕಚೇರಿಯಿದ್ದು 15 ಕಿ.ಮೀ ದೂರದಲ್ಲಿ ಚಂದ್ರಂಪಳ್ಳಿ ಜಲಾಶಯ ಮತ್ತು 95 ಕಿ.ಮೀ ಅಂತರದಲ್ಲಿ ಹತ್ತಿಕುಣ, ಸೌದಾಗರ ಜಲಾಶಯಗಳು ನಿರ್ವಹಿಸಬೇಕಿದೆ. ಕಾರ್ಯಪಾಲಕ ಎಂಜಿನಿಯರ್ ಕಚೇರಿ ಕಾಳಗಿ ತಾಲ್ಲೂಕಿನ ಹೆಬ್ಬಾಳದಲ್ಲಿದೆ.

ಚಂದ್ರಂಪಳ್ಳಿ ನೀರಾವರಿ ಯೋಜನೆಯ ಚಂದ್ರಂಪಳ್ಳಿ ಜಲಾಶಯದಿಂದ ನೀರಾವರಿಗೊಳಪಡುವ ಅಚ್ಚುಕಟ್ಟು ಪ್ರದೇಶ 5223 ಹೆಕ್ಟೇರ್ ಆಗಿದ್ದು, ಹತ್ತಿಕುಣಿ 2145 ಹೆಕ್ಟೇರ್, ಸೌದಾಗರ 1417 ಹೆಕ್ಟೇರ್ ಹೊಂದಿದೆ.ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆ ವ್ಯಾಪ್ತಿಗೆ ಸೇರಬೇಕಾದರೆ ಕನಿಷ್ಠ 2 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಇರಬೇಕು. ಆದರೆ ಸೌದಾಗರ ಕೆರೆ 1417 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ.

ಸಧ್ಯ ಹತ್ತಿಕುಣಿ, ಸೌದಾಗರ ಜಲಾಶಯಕ್ಕೆ ಒಬ್ಬ ಕಿರಿಯ ಎಂಜಿನಿಯರಗೆ ನಿಯೋಜಿಸಿದರೆ, ಚಂದ್ರಂಪಳ್ಳಿ ಜಲಾಶಯ ಮತ್ತು ಕಾಲುವೆ ನಿರ್ವಹಣೆಗೆ ಇಬ್ಬರು ಕಿರಿಯ ಎಂಜಿನಿಯರಗಳನ್ನು ನಿಯೋಜಿಸಲಾಗಿದೆ. ಯೋಜನೆಗಳ ನಿರ್ವಹಣೆಗೆ ಸಮರ್ಪಕ ಅನುದಾನ ಬಾರದೇ ಇರುತ್ತಿರುವುದರಿಂದ ಸಹಾಯಕ ಎಂಜಿನಿಯರ್‌ಗಳು ಇಲ್ಲಿಗೆ ಬರುತ್ತಿಲ್ಲ.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸಭೆಗಳಿದ್ದರೆ ಒಬ್ಬ ಎಇಇ ಎರಡು ಜಿಲ್ಲೆಗಳಿಗೆ ಹೋಗಲೇಬೇಕು. ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ 1950 ಹೆಕ್ಟರ್ ಹೊಂದಿದ್ದು ಸಣ್ಣ ನೀರಾವರಿ ವ್ಯಾಪ್ತಿಗೆ ಇದೆ. ಇದಕ್ಕೆ ಒಂದು ವಿತರಣೆ ನಾಲೆ ಹೆಚ್ಚಿಸಿದರೆ ಇದು ಕೂಡ ಭಾರಿ ನೀರಾವರಿ ಯೋಜನೆ ವ್ಯಾಪ್ತಿಗೆ ಸೇರಿಸಲು ಅವಕಾಶವಿದೆ. ಚಂದ್ರಂಪಳ್ಳಿ ಮತ್ತು ಸಾಲೇಬೀರನಹಳ್ಳಿ ಜಲಾಶಯ ಸೇರಿಸಿ ಒಂದು ಉಪ ವಿಭಾಗ ಸೃಷ್ಟಿಸಿ ಹತ್ತಿಕುಣಿ ಸೌದಾಗರ ಸಮೀಪದ ಉಪ ವಿಭಾಗಕ್ಕೆ ಸೇರಿಸುವುದರಿಂದ ಅಧಿಕಾರಿಗಳ ಓಡಾಟ ಮತ್ತು ವ್ಯರ್ಥ ಸಮಯ ಪೋಲಾಗುವುದು ತಪ್ಪಲಿದೆ. ಇಲ್ಲದೇ ಹೋದರೆ ಅಧಿಕಾರಿಗಳಿಗೆ ಸಭೆಗಳಿಗೆ ಹಾಜರಾಗುವುದೇ ಕೆಲಸವಾಗಲಿದೆ. ತುಂಬಾ ದೂರದಲ್ಲಿರುವುದರಿಂದ ಅಧಿಕಾರಿಗಳಿಂದ ರೈತರಿಗೆ ನ್ಯಾಯವೊದಗಿಸಲು ಸಾಧ್ಯವಾಗುತ್ತಿಲ್ಲ.

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲೆ ನಿರ್ವಹಣೆಯ ಕೊರತೆ ಅನುದಾನದ ಅಲಭ್ಯತೆಯಿಂದ ಗಿಡ ಗಂಟಿ ಬೆಳೆದಿರುವುದು
ಚಂದ್ರಂಪಳ್ಳಿ ನೀರಾವರಿ ಯೋಜನೆ ಉಪ ವಿಭಾಗ ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಹತ್ತಿಕುಣಿ ಸೌದಾಗರ ಕೆರೆಗಳಿವೆ. ಸಿಬ್ಬಂದಿ ಕೊರತೆಯ ನಡುವೆಯೂ ಯೋಜನೆಗಳ ನಿರ್ವಹಣೆ ಮಾಡುತ್ತಿದ್ದೇವೆ
ಚೇತನ ಕಳಸ್ಕರ್‌ ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ ಉಪ ವಿಭಾಗ
ನೀರಾವರಿ ಯೋಜನೆ ಉಪ ವಿಭಾಗದಿಂದ ಹತ್ತಿಕುಣಿ ಸೌದಾಗರ ಜಲಾಶಯಗಳು ಕೈಬಿಡಬೇಕು. ಅಧಿಕಾರಿಗಳ ಸೇವೆ ಪೂರ್ಣಪ್ರಮಾಣದಲ್ಲಿ ಚಂದ್ರಂಪಳ್ಳಿ ನೀರಾವರಿ ಯೋಜನೆಗೆ ಸಿಗುವಂತಾಗಲಿ
ವಿಜಯಕುಮಾರ ರೊಟ್ಟಿ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.