
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ಚಿಂಚೋಳಿ: ‘ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ 30 ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಶೇ 80 ರಷ್ಟು ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ತಾಲ್ಲೂಕಿನ ಸುಲೇಪೇಟ ಹೊಡೆಬೀರನಹಳ್ಳಿ, ಸುಲೇಪೇಟ ಪೆಂಚನಪಳ್ಳಿ ರಸ್ತೆ ನಿರ್ಮಾಣಕ್ಕೆ ₹16 ಕೋಟಿ ಮಂಜೂರು ಮಾಡಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಚಿಂಚೋಳಿ ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಗ್ರಾಮ ದೇವತೆಯ ದೇವಾಲಯ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೊಡೆಬೀರನಹಳ್ಳಿ ಚಿಂತಪಳ್ಳಿ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ರಸ್ತೆ ವಿಸ್ತರಿಸಿ ಪುನರ್ ನಿರ್ಮಿಸಲಾಗುವುದು ಎಂದರು.
ಬೆನಕನಳ್ಳಿಗೆ ₹1.7 ಕೋಟಿ ಮಂಜೂರು ಮಾಡಲಾಗಿದ್ದು, ₹70 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಮಂಜೂರಾದ ₹1 ಕೋಟಿಯ ಕಾಮಗಾರಿ ಪೂರ್ಣಗೊಳಿಸಿ ನಂತರ ಹೊಸ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಜವಾಹರ ಬಾಲ ಭವನ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ, ಶರಣಕುಮಾರ ದೇಸಾಯಿ, ರಾಮಲಿಂಗ ನಾಟಿಕಾರ ಮಾತನಾಡಿ, ಸಚಿವರ ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿಯ ಬದ್ಧತೆ ಮತ್ತು ಬಡವರ ಬಗೆಗಿನ ಕಾಳಜಿ ಶ್ಲಾಘನೀಯ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಸೇಡಂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ, ಸೇಡಂ ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರು, ವಾಸವದತ್ತ ಯುನಿಯನ್ ಅಧ್ಯಕ್ಷ ಸತೀಶರೆಡ್ಡಿ ರಂಜೋಳ, ಝಿ ಶಾನ ಪಟ್ಟೆದಾರ, ಶಾಂತಕುಮಾರ ಗುತ್ತೇದಾರ, ಅಶೋಕರೆಡ್ಡಿ ಕೆರಳ್ಳಿ, ರವಿಕುಮಾರ ಸಾಲಿ, ರವೀಂದ್ರ ವರ್ಮಾ ನಾಟಿಕಾರ, ಶೇಖ್ ಅಹಮದ್ ಪಟೇಲ, ಶುಭಾನರೆಡ್ಡಿ ಶೇರಿಕಾರ, ಶಿವಶರಣರೆಡ್ಡಿ ಭಕ್ತಂಪಳ್ಳಿ, ಶರಣು ಪಾಟೀಲ, ಗೋಪಾಲರೆಡ್ಡಿ, ಜಗದೇವಯ್ಯ ಮೊದಲಾದವರು ಇದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಅರುಣ ಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಅಭಾವವಿಲ್ಲ
ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ
ಬಡವರ ಪರ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್
ಮಳೆಗಾಲದಲ್ಲಿ ಬೆನಕನಳ್ಳಿ ಗ್ರಾಮದ ಜನರ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಗೆ ಕಡಿವಾಣ ಹಾಕಲು ₹25 ಲಕ್ಷ ಮಂಜೂರು ಮಾಡಿ, ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದುಡಾ.ಶರಣಪ್ರಕಾಶ ಪಾಟೀಲ,ಸಚಿವ
ಅದ್ದೂರಿ ಮೆರವಣಿಗೆ ಹೂವಿನ ಮಳೆ
ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಸಾಂಪ್ರದಾಯಿಕ ಡೊಳ್ಳು, ಹಲಗೆ ವಾದ್ಯಗಳೊಂದಿಗೆ ದಾರಿಯುದ್ದಕ್ಕೂ ಹೂಮಳೆ ಸುರಿದು ಸಚಿವರನ್ನು ಬರಮಾಡಿಕೊಳ್ಳಲಾಯಿತು. ನಂತರ ಸಚಿವರು ಕಾಳಗಿ ತಾಲ್ಲೂಕಿನ ರುದ್ನೂರು ಗ್ರಾಮಕ್ಕೆ ಹಾಗೂ ಚಿಂಚೋಳಿ ತಾಲ್ಲೂಕಿನ ಶಿರೋಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.