ADVERTISEMENT

ಕಲಬುರಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಿತ್ತನೆ: ಮಳೆ ಕೊರತೆಯಿಂದ ರೈತರಲ್ಲಿ ಆತಂಕ

ಮುಂಗಾರು ಹಂಗಾಮು: ತಲೆಕೆಳಗಾದ ರೈತರ ನಿರೀಕ್ಷೆ 

ಜಗನ್ನಾಥ ಡಿ.ಶೇರಿಕಾರ
Published 14 ಜುಲೈ 2025, 4:58 IST
Last Updated 14 ಜುಲೈ 2025, 4:58 IST
ಚಿಂಚೋಳಿ ತಾಲ್ಲೂಕಿನ ಐನೋಳ್ಳಿಯ ಹೊಲದಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳ ಬೆರವಣಿಗೆ ಕುಂಠಿತಗೊಳ್ಳುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಐನೋಳ್ಳಿಯ ಹೊಲದಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳ ಬೆರವಣಿಗೆ ಕುಂಠಿತಗೊಳ್ಳುತ್ತಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 93 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದು ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದ ಬಿತ್ತನೆಯಾಗಿದೆ. ಆದರೆ ಸಧ್ಯ ಬೆಳೆಗಳು ತೀವ್ರ ಮಳೆಯ ಕೊರತೆ ಎದುರಿಸುತ್ತಿದ್ದು ರೈತರ ಮುಖಗಳು ಕಳಾಹೀನಗೊಳ್ಳುವಂತಾಗಿದೆ.

ತಾಲ್ಲೂಕಿನ ಮುಂಗಾರು ಪೂರ್ವ ಯಥೇಚ್ಚ ಮಳೆ ಸುರಿದಿದ್ದು, ಮುಂಗಾರು ಆರಂಭವಾದ ನಂತರ ಸಮರ್ಪಕ ಮಳೆಯಾಗಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಯಲ್ಲಿ ಏರುಪೇರಾಗಿದೆ.

ಸಧ್ಯ ತಾಲ್ಲೂಕಿನಲ್ಲಿ ರೈತರು ಕಳೆ ನಿಯಂತ್ರಣಕ್ಕಾಗಿ ಕಳೆ ಕೀಳುವ, ಎಡೆ ಹೊಡೆಯುವ ಮತ್ತು ಔಷಧ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಜತೆಗೆ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.

ADVERTISEMENT

ಜೂನ್ ತಿಂಗಳಲ್ಲಿ 134 ಮಿ.ಮೀ ವಾಡಿಕೆ ಮಳೆ ಪ್ರಮಾಣವಾಗಿದ್ದು ಕೇವಲ 55 ಮಿ.ಮೀ ಮಳೆ ಸುರಿಯುವ ಮೂಲಕ ಶೇ 59 ಕೊರತೆ ಉಂಟಾಗಿದೆ. ಜುಲೈ 11 ರವರೆಗೆ 56 ಮಿ.ಮೀ ವಾಡಿಕೆ ಮಳೆ ಪ್ರಮಾಣವಾಗಿದ್ದು 27 ಮಿ.ಮೀ ಮಳೆ ಸುರಿದಿದೆ. ಪ್ರಸ್ತುತ ಶೇ 50ರಷ್ಟು ಮಳೆಯ ಕೊರತೆ ಎದುರಾಗಿದೆ. ಜೂನ್ 1 ರಿಂದ ಈವರೆಗೆ 190 ಮಿ.ಮೀ ಮಳೆ ಸುರಿಯಬೇಕಿತ್ತು ಆದರೆ ಈವರೆಗೆ 83 ಮಿ.ಮೀ ಮಾತ್ರ ಮಳೆಯಾಗಿದೆ. ಇದರಿಂದ ಆಶಾದಾಯಕ ಮುಂಗಾರಿನ ನಿರೀಕ್ಷೆ ತಲೆಕೆಳಗಾಗುತ್ತಿದೆ.

ತಾಲ್ಲೂಕಿನಲ್ಲಿ ನೀರಾವರಿ ಸೇರಿ 82,240 ಹೆಕ್ಟೇರ್ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಇದರಲ್ಲಿ ಈವರೆಗೆ ನೀರಾವರಿ ಸೇರಿ 72,976 ಹೆಕ್ಟೇರ್ ಬಿತ್ತನೆಯಾಗಿದೆ.

ಪ್ರಸಕ್ತ ವರ್ಷ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು, ಅಲ್ಲಲ್ಲಿ ಬಸವನ ಹುಳು ಕಾಟ ಕಂಡು ಬಂದಿದ್ದು ರೈತರು ವಿಜ್ಞಾನಿಗಳ ಸಲಹೆಯಂತೆ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಸಧ್ಯ ಇವುಗಳ ಬಾಧೆ ನಿಯಂತ್ರಣದಲ್ಲಿದೆ.

ಪ್ರಸಕ್ತ ವರ್ಷ ಉದ್ದು ಬೇಸಾಯ ಕ್ಷೇತ್ರ ಹೆಚ್ಚಾಗಿರುವ ಸಾಧ್ಯತೆಯಿದೆ. ಸೋಯಾ ಮತ್ತು ಉದ್ದು ಸಮ ಪ್ರಮಾಣದಲ್ಲಿ ಬಿತ್ತನೆಯಾದರೆ, ಹೆಸರು ಸುಮಾರು 7 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ತೊಗರಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿಯೇ ಶೇ 73ರಷ್ಟು ಬಿತ್ತನೆಯಾದರೆ ತಾಲ್ಲೂಕಿನಲ್ಲಿ ಶೇ 93 ದಾಟುತ್ತಿದೆ. ಈಗ ಮುಂಗಾರು ಬಿತ್ತನೆ ಬಹುತೇಕ ಮುಕ್ತಾಯ ಹಂತದಲ್ಲಿದೆ.

ತಾಲ್ಲೂಕಿನಲ್ಲಿ 46 ಸಾವಿರ ರೈತರಿದ್ದು ಇದರಲ್ಲಿ 15300 ಜನ ಮಾತ್ರ ಬೆಳೆವಿಮೆ ನೋಂದಾಯಿಸಿದ್ದರು. ಇವರಿಗೆ 30 ಕೋಟಿ ವಿಮೆ ಪರಿಹಾರ ಮಂಜೂರಾಗಿದೆ. ಪ್ರಸಕ್ತ ವರ್ಷ ಹೆಚ್ಚು ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಬೇಕು
ವೀರಶೆಟ್ಟಿ ರಾಠೋಡ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ
ತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಉಚಿತವಾಗಿ ಬೆಳೆ ವಿಮೆ ನೋಂದಾಯಿಸಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಅಜೀತ ಪಾಟೀಲ ಡಿಸಿಸಿ ಬ್ಯಾಂಕ್ ನಿರ್ದೇಶಕರು ಚಿಂಚೋಳಿ
ರೈತರಿಗೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ಏಕ ಕಾಲಕ್ಕೆ ರೈತರ ಖಾತೆಗೆ ಜಮಾ ಮಾಡದಿರುವುದು ಬೇಸರದ ಸಂಗತಿ. ಕಳೆದ ವರ್ಷದ ವಿಮಾ ಪರಿಹಾರದ ಬಾಕಿ ಮೊತ್ತ ಶೀಘ್ರ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು
ಶರಣಬಸಪ್ಪ ಮಮಶೆಟ್ಟಿ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.