
ಚಿಂಚೋಳಿ: ‘ದಕ್ಷಿಣ ಭಾರತದ ಏಕೈಕ ಶುಷ್ಕವಲಯದ ವನ್ಯಜೀವಿ ಧಾಮವಾಗಿರುವ ಚಿಂಚೋಳಿ ವನ್ಯಧಾಮದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಕೆಕೆಆರ್‌ಡಿಬಿಯಿಂದ ₹ 2.5 ಕೋಟಿ ಮಂಜೂರು ಮಾಡಿಸಲಾಗುವುದು’ ಎಂದು ಅರಣ್ಯ ಮತ್ತು ಜೀವಿಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ವನ್ಯಜೀವಿ ಧಾಮದ ಚಂದ್ರಂಪಳ್ಳಿ ಜಲಾಶಯ ಹಾಗೂ ಪ್ರಕೃತಿ ಧಾಮಕ್ಕೆ ಭಾನುವಾರ ಭೇಟಿ ನೀಡಿ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.
‘ಕಳೆದ ವರ್ಷ ₹ 2 ಕೋಟಿ ಕೆಕೆಆರ್‌ಡಿಬಿ ವತಿಯಿಂದ ಅನುದಾನ ಬಂದಿದ್ದು, ಇನ್ನೂ ₹2.5ಕೋಟಿ ಮಂಜೂರು ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ಜಲಾಶಯದ ಬಂಡ್ ಮೇಲಿನಿಂದ ಪ್ರಕೃತಿ ಧಾಮಕ್ಕೆ ಹೋಗಿ ಬರಲಾಗುತ್ತಿದೆ. ಹೀಗಾಗಿ ಪ್ರತ್ಯೇಕ ರಸ್ತೆ, ಗೊಟ್ಟಂಗೊಟ್ಟದಲ್ಲಿ ಕಾಟೇಜ್ ನಿರ್ಮಾಣ, ಮಾಣಿಕಪುರ ಜಲಪಾತ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಖಂಡಿತ ಅನುಮೋದನೆ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.
ಪ್ರಾದೇಶಿಕ ಅರಣ್ಯ ಇಲಾಖೆಯ ಜಿಲ್ಲಾ ಅರಣ್ಯಾಧಿಕಾರಿ ಸುಮೀತಕುಮಾರ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಡಾಂಗೆ, ಸಂಜೀವಕುಮಾರ ಚವ್ಹಾಣ, ಸಾಮಾಜಿಕ ಅರಣ್ಯದ ಜಿಲ್ಲಾ ಅರಣ್ಯಾಧಿಕಾರಿ ಸಾಗರ ತಾವಡೆ ಹಾಗೂ ಅಭಿನಂದನ ಕೈಲಾಸ ಪಾಟೀಲ, ಶರಣು ಪಾಟೀಲ, ಅಬ್ದುಲ್ ಬಾಷೀತ, ಆನಂದ ಟೈಗರ, ಜಗನ್ನಾಥ ಈದಲಾಯಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.