
ಮಲ್ಲಿಕಾರ್ಜುನ ಎಚ್. ಮುಡಬೂಳಕರ್
ಚಿತ್ತಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಅಭಿವೃದ್ಧಿ ಹೊಸ ಪರ್ವ ಶುರುವಾಗಿದೆ. ಅವರ ಜನಪರ ಕಾಳಜಿ, ದೂರದೃಷ್ಟಿ ಮತ್ತು ಚಿಂತನೆಯಿಂದ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇನ್ನೂ ಅನೇಕ ಅಭಿವೃದ್ಧಿ ಮತ್ತು ಸೌಕರ್ಯ ಒದಗಿಸುವ ಕೆಲಸ ಮಾಡಬೇಕಿದೆ ಎಂಬುದು ಜನರ ಆಶಯವಾಗಿದೆ.
ತಾಲ್ಲೂಕಿನ ಸನ್ನತಿ ಹತ್ತಿರ ಭೀಮಾ ನದಿ ಬಾಂದಾರಿನಿಂದ ನೀರು ಎತ್ತಿ ರೈತರ ಹೊಲಗಳಿಗೆ ಹರಿಸುವ ‘ಸನ್ನತಿ ಏತ ನೀರಾವರಿ’ ಯೋಜನೆ ಕುಂಟುತ್ತಾ ಸಾಗುತ್ತಿದೆ. ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಿಗೆ ಬೆಣ್ಣೆತೊರಾ ಯೋಜನೆಯ ಇಂದಿಗೂ ಮರೀಚಿಕೆಯಾಗಿದೆ. ಕಾಗಿಣಾ ನದಿಯಿಂದ ನೀರು ಎತ್ತುವ ‘ಮರಗೋಳ ಏತ ನೀರಾವರಿ’ ಯೋಜನೆ ಸಂಪೂರ್ಣ ವಿನಾಶ ಹೊಂದಿದೆ. ಅದರ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಬೇಕಿದೆ. ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಿ ಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ ಅನುದಾನ ಸಿಗುವುದೇ ಎಂದು ತಾಲ್ಲೂಕಿನ ಜನರಲ್ಲಿ ಕುತೂಹಲ ಕೆರಳಿಸಿದೆ.
ಪಿಯು ಕಾಲೇಜು ಬೇಡಿಕೆ: ಚಿತ್ತಾಪುರ ಮತ್ತು ಗ್ರಾಮಗಳಲ್ಲಿ ಪ್ರೌಢಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಅಧಿಕವಾಗಿದೆ. ವಿದ್ಯಾರ್ಥಿನಿಯರಿಗಾಗಿಯೇ ಪಟ್ಟಣದಲ್ಲಿ ಪದವಿಪೂರ್ವ ಶಿಕ್ಷಣಕ್ಕಾಗಿ ಹೊಸದಾಗಿ ಮಹಿಳಾ ಪಿಯು ಕಾಲೇಜು ಅಗತ್ಯವಿದೆ. ವಾಡಿ ಪಟ್ಟಣದಲ್ಲಿ ಪದವಿ ಪೂರ್ವ ಕಾಲೇಜಿಗಾಗಿ 25 ವರ್ಷಗಳಿಂದ ಹೋರಾಟ ನಡೆಯುತ್ತಿದೆ.
ಪ್ರೌಢಶಿಕ್ಷಣ ಮುಗಿಸಿ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಕ್ಕಾಗಿ ಯಾದಗಿರಿ, ಕಲಬುರಗಿಗೆ ಹೋಗುವ ಅನಿವಾರ್ಯತೆಯಿದೆ. ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಏರಲಾಗದೆ ಕಾಲೇಜು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ವಾಡಿ ಪಟ್ಟಣಕ್ಕೆ ಪಿಯು ಕಾಲೇಜು ಘೋಷಿಸಿ ಅನುದಾನ ನೀಡಬೇಕು ಎಂಬುದು ಪಾಲಕರು ಮತ್ತು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಜೀವಿತ ಕಾಲದಲ್ಲಿ ವಾಡಿ ಪಟ್ಟಣಕ್ಕೆ ಬಂದು ಹೋಗಿದ್ದರ ನೆನಪಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಅನುಮತಿಯೊಂದಿಗೆ ₹3 ಕೋಟಿ ಅನುದಾನ ಲಭಿಸಿದೆ. ವಸ್ತು ಸಂಗ್ರಹಾಲಯ ಸಂಶೋಧನಾ ಕೇಂದ್ರ ಗ್ರಂಥಾಲಯ ನಿರ್ಮಾಣ ಬೌದ್ಧ ಧಮ್ಮ ಅಧ್ಯಯನ ಕೇಂದ್ರ ನಿರ್ಮಾಣ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬಜೆಟ್ಟಿನಲ್ಲಿ ₹25 ಕೋಟಿ ಅನುದಾನ ನೀಡಬೇಕುವಿಕ್ರಂ ತೇಜಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ
ಸನ್ನತಿ ಏತ ನೀರಾವರಿ ಯೋಜನೆ ನಾಲವಾರ ಹೋಬಳಿ ವ್ಯಾಪ್ತಿಯ ಸನ್ನತಿ ಕನಗನಹಳ್ಳಿ ಕೊಲ್ಲೂರ ತರಕಸಪೇಠ ರಾಂಪುರಹಳ್ಳಿ ಬನ್ನಟ್ಟಿ ಹುಳಂಡಗೇರಾ ಕುಂಬಾರಹಳ್ಳಿ ಗ್ರಾಮಗಳಿಗೆ ವರದಾನವಾಗಿದೆ. ಹೊಲಗಳಿಗೆ ನೀರು ತಲುಪಿಸುವ ಮರಿಕಾಲುವೆ ನಿರ್ಮಾಣವಿಲ್ಲದೆ ಹೊಲಗಳಿಗೆ ಇಂದಿಗೂ ನೀರು ಹರಿದಿಲ್ಲ. ಯೋಜನೆಯಲ್ಲಿರುವ ಕಾಮಗಾರಿ ತ್ವರಿತ ಪೂರ್ಣಗೊಳಿಸಿ ರೈತರಿಗೆ ಸೌಲಭ್ಯ ಒದಗಿಸಬೇಕು. ಕಾಮಗಾರಿಗೆ ಬೇಕಾದ ಅನುದಾನವನ್ನು ಸರ್ಕಾರ ಬಜೆಟ್ಟಿನಲ್ಲಿ ಘೋಷಿಸಬೇಕುಸೋಮಶೇಖರ ಅಣಿಕೇರಾ ಸನ್ನತಿ ಗ್ರಾಮದ ರೈತ
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಮಲಕೂಡ ಇವಣಿ ಬೆಳಗುಂಪಾ ಕಾಟಮ್ಮದೇವರಹಳ್ಳಿ ದಂಡೋತಿ ಗ್ರಾಮಗಳ ರೈತರಿಗೆ ಬೆಣ್ಣೆತೊರಾ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ. ಮುಖ್ಯ ಕಾಲುವೆ ನಿರ್ಮಿಸಿದರೂ ರೈತರ ಹೊಲಗಳಿಗೆ ನೀರು ಹರಿಸುವ ಉಪ ಕಾಲುವೆ ಮರಿಕಾಲುವೆ ನಿರ್ಮಾಣ ಇಂದಿಗೂ ನನೆಗುದಿಗೆ ಬಿದ್ದಿದೆ. ಬಾಕಿ ಉಳಿದಿರುವ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡುವ ಭರವಸೆಯಿದೆಮಸ್ತಾನಸಾಬ್ ಇಬ್ರಾಹೀಂ ಸಾಬ್ ಕೊರವಿ ಬೆಣ್ಣೆತೊರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ
‘ನಾಗಾವಿ ಸನ್ನತಿ ಪ್ರವಾಸಿ ತಾಣ ಮಾಡಿ’
ಸಾವಿರ ವರ್ಷಗಳ ಹಿಂದೆ ಘಟಿಕಾಸ್ಥಾನ ಹೆಸರಿನ ಶಿಕ್ಷಣ ಕೇಂದ್ರವಾಗಿದ್ದ ನಾಗಾವಿಯಲ್ಲಿನ ದೇಗುಲಗಳು ಪುರಾತನ ಸ್ಮಾರಕಗಳ ಸಂರಕ್ಷಣೆ ಸಮಗ್ರ ಅಭಿವೃದ್ಧಿ ಅಗತ್ಯ ಉತ್ಖನನ ಮಾಡಿ ಪ್ರವಾಸಿ ತಾಣವಾಗಿಸಬೇಕು. ಸನ್ನತಿ ಸಮೀಪದ ಕನಗನಹಳ್ಳಿ ಹತ್ತಿರವಿರುವ ಬೌದ್ಧವಿಹಾರದ ಅಭಿವೃದ್ಧಿ ಬೌದ್ಧ ಅವಶೇಷಗಳ ಸಂರಕ್ಷಣೆ ಪ್ರವಾಸಿಗರಿಗೆ ಅಗತ್ಯಮೂಲಸೌಕರ್ಯ ಒದಗಿಸಬೇಕು. ನಾಗಾವಿ ಮತ್ತು ಕನಗನಹಳ್ಳಿ ಪ್ರವಾಸಿ ತಾಣವಾಗಿ ಸರ್ಕಾರ ಘೋಷಣೆ ಮಾಡಿ ಅನುದಾನ ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.
ಆಡಳಿತ ಕಚೇರಿಗಾಗಿ ಬೇಡಿಕೆ ಚಿತ್ತಾಪುರ ಶಹಾಬಾದ್ ಮತ್ತು ಕಾಳಗಿ ತಾಲ್ಲೂಕು ಜನರಿಗೆ ಅನುಕೂಲವಾಗುವಂತೆ ಚಿತ್ತಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಒ) ಕಂದಾಯ ಉಪ ವಿಭಾಗ ಕಚೇರಿ (ಎಸಿ) ಜೆಸ್ಕಾಂ ವಿಭಾಗ ಕಚೇರಿ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಬಯಕೆಯಾಗಿದೆ. ಬಜೆಟ್‌ನಲ್ಲಿ ಸರ್ಕಾರ ಮನ್ನಣೆ ನೀಡುವುದೇ ಎಂದು ಕಾದು ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.