ADVERTISEMENT

ಆರ್‌ಎಸ್‌ಎಸ್‌ ಪಥಸಂಚಲನ ಕಗ್ಗಂಟು | ಮುಗಿದ ಶಾಂತಿ ಸಭೆ: ಹೈಕೋರ್ಟ್‌ನತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:40 IST
Last Updated 29 ಅಕ್ಟೋಬರ್ 2025, 6:40 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಕೆಲ ಸಂಘಟನೆಗಳವರು ಪೊಲೀಸರಿಗೆ ಒತ್ತಾಯಿಸಿದರು          ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಕೆಲ ಸಂಘಟನೆಗಳವರು ಪೊಲೀಸರಿಗೆ ಒತ್ತಾಯಿಸಿದರು          ಪ್ರಜಾವಾಣಿ ಚಿತ್ರ   

ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ಚಿತ್ತಾಪುರದ ‘ಪಥ ಸಂಚಲನ’ಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶದಂತೆ ನ.2ರಂದು ಪಥಸಂಚಲನ–ಪ್ರತಿಭಟನೆ–ಜಾಥಾಗೆ ಅನುಮತಿ ಕೋರಿರುವ ಸಂಘಟನೆಗಳೊಂದಿಗೆ ಜಿಲ್ಲಾಡಳಿತ ಮಂಗಳವಾರ ಶಾಂತಿ ಸಭೆ ನಡೆಸಿತು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಮಂಗಳವಾರ ಒಂದೂವರೆ ಗಂಟೆಯಷ್ಟು ಹೊತ್ತು ಸಭೆ ನಡೆಯಿತು. ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ 10 ಸಂಘಟನೆಗಳ ತಲಾ ಮೂವರು ಪ್ರತಿನಿಧಿಗಳನ್ನು ಜಿಲ್ಲಾಡಳಿತ ನೋಟಿಸ್‌ ಕೊಟ್ಟು ಸಭೆಗೆ ಆಹ್ವಾನಿಸಿತ್ತು.

ಅದರಂತೆ ಮಂಗಳವಾರ ಬೆಳಿಗ್ಗೆ 11.30ರ ಹೊತ್ತಿಗೆ ಆರ್‌ಎಸ್‌ಎಸ್‌ ಸೇರಿದಂತೆ ಎಲ್ಲ ಒಂಬತ್ತು ಸಂಘಟನೆಗಳ ತಲಾ ಮೂವರು ಹಾಗೂ ಸೌಹಾರ್ದ ಕರ್ನಾಟಕ ಸಂಘಟನೆಯ ಇಬ್ಬರು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ADVERTISEMENT

ಪ್ರತಿ ಸಂಘಟನೆಯಿಂದ ತಲಾ ಒಬ್ಬರಿಗೆ ವಿಚಾರ ಮಂಡಿಸಲು ಅವಕಾಶ ನೀಡಲಾಯಿತು. ಸಂಘಟನೆಗಳ ಸದಸ್ಯರು ಲಿಖಿತ ಅಭಿಪ್ರಾಯಗಳನ್ನೂ ಸಲ್ಲಿಸಿದರು. ಎಲ್ಲರ ಅಭಿಪ್ರಾಯಗಳಿಗೆ ಕಿವಿಯಾದ ಜಿಲ್ಲಾಡಳಿತ, ಅವರೆಲ್ಲ ಅನಿಸಿಕೆಗಳನ್ನು ದಾಖಲಿಸಿಕೊಂಡಿತು.

ಶಾಂತಿ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ., ಜಿ.ಪಂ.ಸಿಇಒ ಭಂವರ್‌ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕನಿಕಾ ಸಿಕ್ರಿವಾಲ್‌, ಎಡಿಸಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ, ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ, ಚಿತ್ತಾಪುರ ತಹಶೀಲ್ದಾರ್‌ ನಾಗಯ್ಯ ಹಿರೇಮಠ, ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಶಹಾಬಾದ್‌ ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಸೇರಿದಂತೆ ಹಲವರು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಯಾರೆಲ್ಲ ಭಾಗಿ:

ಆರ್‌ಎಸ್‌ಎಸ್‌ ಪರವಾಗಿ ಕೃಷ್ಣಾಜಿ ಜೋಶಿ, ಅಂಬಾರಾಯ ಅಷ್ಟಗಿ, ಪ್ರಲ್ಹಾದ ವಿಶ್ವಕರ್ಮ, ಭಾರತೀಯ ದಲಿತ ಪ್ಯಾಂಥರ್ ಪರವಾಗಿ ರಮೇಶ ಚಿಮ್ಮಾಯಿದಲಾಯಿ, ಮಲ್ಲಪ್ಪ ಹೊಸಮನಿ, ಮಿಲಿಂದ ಸನಗುಂದಿ, ಭೀಮ್‌ ಆರ್ಮಿ ಪರವಾಗಿ ಎಸ್‌.ಎಸ್‌.ತಾವಡೆ, ಸಂತೋಷ ಹುಗ್ಗಿ, ಯಶಪಾಲ್‌ ಬೋರೆ, ಜಿಲ್ಲಾ ಗೊಂಡ ಕುರುಬ ಎಸ್ಟಿ ಹೋರಾಟ ಸಮಿತಿಯಿಂದ ಮಹಾಂತೇಶ ಕೌಲಗಿ, ಲಕ್ಷ್ಮಣ ಪೂಜಾರಿ, ಶರಣು ಕನಗೊಂಡ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದಿಂದ ರಾಜೇಂದ್ರ ಕಪನೂರ, ದಿನೇಶ ದೊಡ್ಡಮನಿ, ದೇವಿಂದ್ರ ಸಿನ್ನೂರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಹಾಂತೇಶ ಜಮಾದಾರ, ಜಗದೀಶ ರೆಡ್ಡಿ, ರಾಜು ಮಂಗಾಣಿ, ಕ್ರಿಶ್ಚಿಯನ್‌ ಹೌಸ್‌ ಸಂಘಟನೆಯಿಂದ ಸಂಜಯ ಜಹಗೀರದಾರ, ಸಂಧ್ಯಾರಾಜ ಸಾಮ್ಯುಯೆಲ್‌, ಪ್ರಮೋದ ಮಾಂಟಿ, ದಲಿತ ಸಂಘರ್ಷ ಸಮಿತಿ(ಭೀಮಮಾರ್ಗ)ಯಿಂದ ಮಾರುತಿ ತೇಗಲತಿಪ್ಪಿ, ಲಚ್ಚಪ್ಪ ಜಮಾದಾರ, ಅರ್ಜುನ ಭದ್ರೆ, ಭೀಮ ಆರ್ಮಿ ರಾಜ್ಯ ಯುವ ಘಟಕದಿಂದ ಸಂತೋಷ ಪಾಳಾ, ಉದಯ ಖಣಗೆ, ಸತೀಶ ಮಾಲೆ ಹಾಗೂ ಸೌಹಾರ್ದ ಕರ್ನಾಟಕದಿಂದ ಆರ್‌.ಕೆ.ಹುಡಗಿ ಹಾಗೂ ಕೆ.ನೀಲಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಭದ್ರತೆ:

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಗೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಎಸಿಪಿ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಮೂವರು ಇನ್‌ಸ್ಪೆಕ್ಟರ್‌ಗಳು, 18 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜಿಲ್ಲಾಡಳಿತ ಮೊದಲೇ ಸಿದ್ಧಪಡಿಸಿದ್ದ ಅರ್ಜಿದಾರ ಸಂಘಟನೆಗಳ ಪ್ರತಿನಿಧಿಗಳ ಪಟ್ಟಿಯಲ್ಲಿದ್ದ ಮುಖಂಡರನ್ನು ಮಾತ್ರವೇ ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಕಳೆದೆರಡು ದಿನಗಳ ಹಿಂದೆ ಅರ್ಜಿ ಸಲ್ಲಿಸಿದ ಕೆಲವರು ತಮಗೂ ಅವಕಾಶ ನೀಡುವಂತೆ ಒತ್ತಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ದೃಶ್ಯವೂ ಕಂಡು ಬಂತು.

ಸಭೆಯಲ್ಲಿ ನಾವು ಶಾಂತಿಯುತವಾಗಿ ನಿಲುವು ವ್ಯಕ್ತಪಡಿಸಿದೆವು. ಬೇರೆಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕ್ರಾಂತಿಯ ಮಾತನಾಡಿದ್ದಾರೆ. ಇವರೆಲ್ಲರೂ ಸಚಿವ ಪ್ರಿಯಾಂಕ್‌ ಕಡೆಯ ಜನ
ಅಂಬಾರಾಯ ಅಷ್ಟಗಿ ಬಿಜೆಪಿ ಮುಖಂಡ
‘ಹೈಕೋರ್ಟ್ ತೀರ್ಪಿಗೆ ಬದ್ಧ’
‘ಆರ್‌ಎಸ್‌ಎಸ್‌ ಶತಮಾನೋತ್ಸವ ಹಾಗೂ ವಿಜಯದಶಮಿಯ ಅಂಗವಾಗಿ ರಾಜ್ಯದಾದ್ಯಂತ ಈವರೆಗೂ 500 ಸ್ಥಳಗಳಲ್ಲಿ ಗಣವೇಷಧಾರಿಗಳ ಪಥಸಂಚಲನ ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಹಿಂದೆಯೂ ಚಿತ್ತಾಪುರದಲ್ಲಿ ಪಥಸಂಚಲನಗಳು ಶಾಂತವಾಗಿ ನಡೆದಿದ್ದು ಈಗಲೂ ಸಹ ಶಾಂತವಾಗಿಯೇ ನಡೆಯಲಿದೆ ಎಂಬ ಭರವಸೆ ನಮ್ಮದು. ಆದರೂ ಈ ಸಂಬಂಧ ಹೈಕೋರ್ಟ್‌ ನೀಡುವ ತೀರ್ಪಿಗೆ ಅನುಗುಣವಾಗಿ ನಾವು ನಡೆಯುತ್ತೇವೆ’ ಎಂದು ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಸಭೆಯ ಅಂತ್ಯಕ್ಕೆ ಗೊಂದಲ

ಶಾಂತಿ ಸಭೆಯ ಕೊನೆಯಲ್ಲಿ ‘ಆರ್‌ಎಸ್‌ಎಸ್‌ನವರು ಲಾಠಿ ಬಿಟ್ಟು ತ್ರಿವರ್ಣ ಧ್ವಜ ಹಾಗೂ ಸಂವಿಧಾನದೊಂದಿಗೆ ಪಥಸಂಚಲನ ನಡೆಸಲಿ’ ಎಂಬ ಹೇಳಿಕೆಗೆ ವ್ಯಕ್ತವಾದ ಪರ–ವಿರೋಧ ಆಕ್ರೋಶವಾಗಿ ಹೊರಹೊಮ್ಮಿತು. ಲಾಠಿ ಹಿಡಿದು ಪಥಸಂಚಲನ ನಡೆಸುವ ಹಕ್ಕಿನ ಕುರಿತು ಆರ್‌ಎಸ್‌ಎಸ್‌ ಪರವಾಗಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ ಹೇಳಿಕೆಗೆ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದರು. ಈ ವೇಳೆ ಮಾತಿನ ಚಕಮಕಿ ವಾಗ್ವಾದವೂ ನಡೆಯಿತು. ಸಭೆಯಿಂದ ಹೊರಬಂದ ಆರ್‌ಎಸ್‌ಎಸ್‌ ಮುಖಂಡರು ಅಷ್ಟಗಿ ಅವರನ್ನು ಹಿಂಬಾಲಿಸಿ ಬಂದ ವಿವಿಧ ಸಂಘಟನೆಗಳ ಮುಖಂಡರು ಅಷ್ಟಗಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಸುಸೂತ್ರವಾಗಿ ಸಾಗಿದ್ದ ಶಾಂತಿಸಭೆಯನ್ನು ಅಷ್ಟಗಿಯೇ ಹಾಳು ಮಾಡಿದರು’ ಎಂದು ದೂರಿದರು.

ಸಭೆಯಲ್ಲಿ ಪಾಲ್ಗೊಂಡವರು ಏನೆಂದರು?

ಆರ್‌ಎಸ್‌ಎಸ್‌ ಮೊದಲು ಅರ್ಜಿ ಸಲ್ಲಿಸಿದೆ. ಅದೇ ದಿನ ತಮಗೂ ಅವಕಾಶ ಕೊಡುವಂತೆ ಕೆಲವು ಸಂಘಟನೆಗಳು ಹಟ ಹಿಡಿದಿದ್ದು ತಪ್ಪು. ಅವರೆಲ್ಲ ಅಂಬೇಡ್ಕರ್‌ ಅನುಯಾಯಿಗಳೂ ಅಲ್ಲ, ಸಂವಿಧಾನವನ್ನೂ ಪಾಲಿಸುತ್ತಿಲ್ಲ. ರಾಷ್ಟ್ರೀಯ ಧ್ವಜ ಹಿಡಿದು ಪಥಸಂಚಲನ ನಡೆಸುವಂತೆ ಹೇಳಲು ಸಂಘಟನೆಗಳು ಯಾರು? ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಕೋಟಿ–ಕೋಟಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸಿದ್ದೇವೆ. ನಿಮ್ಮನ್ನು ಕೇಳಿ ತ್ರಿವರ್ಣ ಬಾವುಟ ಹಾರಿಸಬೇಕಾ?
ಅಂಬಾರಾಯ ಅಷ್ಠಗಿ, ಆರ್‌ಎಸ್‌ಎಸ್‌ ಪರವಾಗಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ
ಆರ್‌ಎಸ್‌ಎಸ್‌ ಈಗಲೂ ಫ್ಯಾಸಿಸ್ಟ್‌ ಸಿದ್ಧಾಂತದ ಮನೋಭಾವದಿಂದ ಹೊರಬಂದಿಲ್ಲ. ಸಭೆಯಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಬಗೆಗೆ ಎದುರಾದ ಪ್ರಶ್ನೆಗೂ ಅವರು ತುಟಿಬಿಚ್ಚಿಲ್ಲ. ಅವರು ಭಾರತದ ಸಂವಿಧಾನ, ತ್ರಿವರ್ಣ ಒಪ್ಪುವುದಾಗಿ ಹೇಳುವ ಅವಕಾಶ ಕೈಚೆಲ್ಲಿದ್ದಾರೆ. ಲಾಠಿ ಬಿಟ್ಟು ಭಾರತದ ಬಾವುಟ ಹಿಡಿಯುವುದಾಗಿ ಹೇಳಿದ್ದರೆ, ಶಾಂತಿಸಭೆ ದೇಶಕ್ಕೆ ಮಾದರಿಯಾಗುತ್ತಿತ್ತು
ಕೆ.ನೀಲಾ, ಸೌಹಾರ್ದ ಕರ್ನಾಟಕ ಸಂಘಟನೆ ಸದಸ್ಯೆ
ಆರ್‌ಎಸ್‌ಎಸ್‌ ಲಾಠಿ ಬಿಟ್ಟು ಭಾರತದ ಬಾವುಟ, ಸಂವಿಧಾನ ಪೀಠಿಕೆ ಹಿಡಿದು ಪಥಸಂಚಲನ ನಡೆಸಲಿ ಎಂಬುದಷ್ಟೇ ನಮ್ಮ ಬೇಡಿಕೆ. ಸಂವಿಧಾನದ ಪೀಠಿಕೆ, ತ್ರಿವರ್ಣ ಧ್ವಜ ಹಿಡಿಯಲ್ಲ ಎನ್ನುವುದಾದರೆ, ಆರ್‌ಎಸ್‌ಎಸ್‌ ಪಥಸಂಚಲನದ ದಿನವೇ ನಾವೂ ಪಥಸಂಚಲನ ನಡೆಸುತ್ತೇವೆ
ಎಸ್‌.ಎಸ್‌.ತಾವಡೆ, ಭೀಮ್‌ ಆರ್ಮಿ ರಾಜ್ಯಾಧ್ಯಕ್ಷ
ಆರ್‌ಎಸ್‌ಎಸ್‌ನವರು ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಸಿದರೆ, ನಾವೂ ಅದೇ ದಿನ ಪಥಸಂಚಲನ ನಡೆಸುವುದಾಗಿ ಶಾಂತಿ ಸಭೆಯಲ್ಲಿ ತಿಳಿಸಿದ್ದೇವೆ. ಸಭೆಯಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧವಿಲ್ಲದ ಅಂಬಾರಾಯ ಅಷ್ಟಗಿ ಆರ್‌ಎಸ್‌ಎಸ್‌ ಪರವಾಗಿ ಮಧ್ಯಪ್ರವೇಶಿಸಿ ಮಾತನಾಡಿ ಅಶಾಂತಿ ಸೃಷ್ಟಿಸಿದರು. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು
ಮಲ್ಲಪ್ಪ ಹೊಸಮನಿ, ಭಾರತೀಯ ದಲಿತ ಪ್ಯಾಂಥರ್‌ ರಾಜ್ಯಾಧ್ಯಕ್ಷ
ಚಿತ್ತಾಪುರದಲ್ಲಿ ಸದ್ಯ ಪರಿಸ್ಥಿತಿ ಸೂಕ್ಷ್ಮವಾಗಿದೆ. ಅಲ್ಲಿ ಆರ್‌ಎಸ್‌ಎಸ್‌ ಸೇರಿದಂತೆ ಯಾವುದೇ ಸಂಘಟನೆಗಳಿಗೂ ಮುಂದಿನ ತಿಂಗಳ ಅವಧಿಗೆ ಪಥಸಂಚಲನಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಸಭೆಯಲ್ಲಿ ಕೋರಿದ್ದೇವೆ
ಅರ್ಜುನ ಭದ್ರೆ, ಡಿಎಸ್‌ಎಸ್‌ (ಭೀಮಮಾರ್ಗ) ಸಂಘಟನೆ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.