ಚಿತ್ತಾಪುರ: ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಹೋದ ವರ್ಷ ನ.18ರಂದು ನಡೆದ ಚುನಾವಣೆಯ ಫಲಿತಾಂಶ ರದ್ದು ಮಾಡಿ ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಫೆ.10ರಂದು ಆದೇಶ ಹೊರಡಿಸಿದ್ದಾರೆ.
‘ಚುನಾವಣೆಯು ಸಹಕಾರ ಸಂಘಗಳ ಕಾನೂನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆದಿದೆ. ಘೋಷಣೆಯಾಗಿರುವ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಫಲಿತಾಂಶ ರದ್ದು ಮಾಡಬೇಕು’ ಎಂದು ಸಂಘದ ಸದಸ್ಯ ಮಲ್ಲಿಕಾರ್ಜುನ ಅಂಬಣ್ಣಾ ಅವರು 12 ಜನ ಸದಸ್ಯರ ವಿರುದ್ಧ ಚುನಾವಣೆ ತಕರಾರು ಅರ್ಜಿ ಸಲ್ಲಿಸಿದ್ದರು.
ತಕರಾರು ಅರ್ಜಿಯ ವಿಚಾರಣೆ ನಡೆಸಿದ ಸಹಾಯಕ ನಿಬಂಧಕರು ಫಲಿತಾಂಶ ರದ್ದು ಮಾಡಿ ಆದೇಶಿಸಿದ್ದಾರೆ.
ತಕರಾರಿನ ವಿವರ: ‘ಸಂಘದ ಚುನಾವಣೆಗೆ ಸಿದ್ಧಪಡಿಸಿರುವ ಅಂತಿಮ ಮತದಾರ ಪಟ್ಟಿ ದೋಷಪೂರಿತವಾಗಿದೆ. ಸಾತನೂರು ಗ್ರಾಮದ ಪಿಕೆಪಿಎಸ್ ಮತ್ತು ಮೊಗಲಾ ಗ್ರಾಮದ ಪಿಕೆಪಿಎಸ್ ಕಾರ್ಯ ವ್ಯಾಪ್ತಿಯಲ್ಲಿ ವಾಸವಾಗಿರುವವರು ಕಾನೂನು ಬಾಹಿರವಾಗಿ ಚಿತ್ತಾಪುರ ಪಿಕೆಪಿಎಸ್ ಸಹಕಾರ ಸಂಘದಲ್ಲಿ ಮುಂದುವರಿದಿದ್ದಾರೆ. ನಿಯಮ ಉಲ್ಲಂಘಿಸಿ ಅಂತಿಮ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿವೆ’ ಎಂದು ಮಲ್ಲಿಕಾರ್ಜುನ ಆಪಾದಿಸಿದ್ದರು.
ಸಂಘದ ಮತದಾರ ಪಟ್ಟಿಯಲ್ಲಿರುವ ಮತದಾರರಿಗೆ ಗುರುತಿನ ಚೀಟಿ ಜಾರಿಗೊಳಿಸದೆ ಕರ್ನಾಟಕ ಸಹಕಾರ ಸಂಘಗಳ ನಿಯಮ ಉಲ್ಲಂಘನೆಯಾಗಿದೆ. ಐದು ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಎರಡು ವಾರ್ಷಿಕ ಮಹಾ ಸಭೆಗೆ ಹಾಜರಾಗದ ಸದಸ್ಯರನ್ನು ಕೂಡ ಅಂತಿಮ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಕಲಂ 27(ಎ) ಉಲ್ಲಂಘನೆಯಾಗಿದೆ. ದೋಷಪೂರಿತ ಮತದಾರ ಪಟ್ಟಿ ಆಧರಿಸಿ ನಡೆದ ಚುನಾವಣೆಯ ಫಲಿತಾಂಶ ರದ್ದು ಮಾಡುವಂತೆ ಅರ್ಜಿದಾರ ಸಹಾಯಕ ನಿಬಂಧಕರ ನ್ಯಾಯಾಲಯಕ್ಕೆ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.