ADVERTISEMENT

ಕಲಬುರಗಿ: ದೆಹಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ– ವಿದ್ಯಾರ್ಥಿಗಳ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 16:33 IST
Last Updated 6 ಆಗಸ್ಟ್ 2022, 16:33 IST
   

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದ ಮೆಸ್‌ನಲ್ಲಿ ಈಚೆಗೆ ಕೆಲ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾಲಯದ ಶಿಸ್ತು ಸಮಿತಿಯು ತನಿಖೆ ನಡೆಸುತ್ತಿದೆ.

ಆಗಸ್ಟ್ 2ರಂದು ಊಟ ಮಾಡುವ ವೇಳೆ ಏಕಾಏಕಿ ವಿದ್ಯಾರ್ಥಿಗಳ ಗುಂಪು ಕೆಲವರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿದ ದೃಶ್ಯಾವಗಳಿಗಳು ಇದೀಗ ಸಿಯುಕೆ ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಕೇರಳ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ದೆಹಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಾಗಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

‘ವಿದ್ಯಾರ್ಥಿಯ ಗೆಳತಿಯೊಬ್ಬಳಿಗೆ ಮತ್ತೊಬ್ಬ ಚುಡಾಯಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿ ಹೊಡೆದಾಟಕ್ಕೆ ತಿರುಗಿತು’ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ವಿದ್ಯಾರ್ಥಿಯೊಬ್ಬನನ್ನು ನೆಲಕ್ಕೆ ಕೆಡವಿ ಕೆಲವರು ಒದೆಯುತ್ತಿರುವ, ಮತ್ತೊಬ್ಬ ವಿದ್ಯಾರ್ಥಿಯ ಕೂದಲು ಹಿಡಿದು ಹಲ್ಲೆ ಮಾಡಿರುವ ದೃಶ್ಯಗಳು 25 ಸೆಕೆಂಡ್‌ನ ವಿಡಿಯೊದಲ್ಲಿ ದಾಖಲಾಗಿವೆ.

ಮತ್ತೊಂದು ವಿಡಿಯೊದಲ್ಲಿ ಪುಂಡರಂತೆ ವರ್ತಿಸಿದ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡಿ ಭೀತಿ ಹುಟ್ಟಿಸಿದ ದೃಶ್ಯಗಳೂ ದಾಖಲಾಗಿವೆ.

ವಿದ್ಯಾರ್ಥಿನಿಗೆ ಕಿರುಕುಳ: ದೆಹಲಿ ಮೂಲದ ವಿದ್ಯಾರ್ಥಿನಿಗೆ ಸ್ಥಳೀಯ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೂ ಮೌಖಿಕ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಿಯುಕೆ ಕುಲಸಚಿವ ಪ್ರೊ. ಬಸವರಾಜ ಡೋಣೂರ, ‘ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಭಾಷೆ, ಧರ್ಮ, ಸಿದ್ಧಾಂತದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾದ ಬಗ್ಗೆ ಮಾಹಿತಿ ಇಲ್ಲ. ವೈಯಕ್ತಿಕ ಕಾರಣಗಳಿಗಾಗಿ ಜಗಳ ನಡೆದಿರಬಹುದು. ವರದಿ ಬಂದ ಬಳಿಕ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.