ADVERTISEMENT

ಕಲಬುರ್ಗಿ: ಇಎಸ್ಐ ಆಸ್ಪತ್ರೆ ಬಳಿ ಅಕ್ರಮ ಗೂಡಂಗಡಿಗಳ ತೆರವು, ಬಿಗಿ ಪೊಲೀಸ್ ಭದ್ರತೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:40 IST
Last Updated 16 ಸೆಪ್ಟೆಂಬರ್ 2021, 16:40 IST
‌‌ಕಲಬುರ್ಗಿ ನಗರದ ಇಎಸ್ಐಸಿ ಆಸ್ಪತ್ರೆ ಎದುರು ಅಕ್ರಮ ನಿರ್ಮಿಸಿದ್ದ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
‌‌ಕಲಬುರ್ಗಿ ನಗರದ ಇಎಸ್ಐಸಿ ಆಸ್ಪತ್ರೆ ಎದುರು ಅಕ್ರಮ ನಿರ್ಮಿಸಿದ್ದ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.   

‌‌ಕಲಬುರ್ಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 17ರಂದು ನಗರಕ್ಕೆ ಭೇಟಿ ನೀಡುತ್ತಿರುವ ಮಧ್ಯೆಯೇ ಅವರು ಹಾದುಹೋಗುವ ರಸ್ತೆ ಪಕ್ಕದ ಅಕ್ರಮ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.

ನಗರದ ಸೇಡಂ ರಸ್ತೆಯ ಇಎಸ್ಐಸಿ ಆಸ್ಪತ್ರೆ ಎದುರಿಗೆ ಸುಮಾರು 15 ವರ್ಷಗಳಿಂದ ಇದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.

ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ಈ ಕಾರ್ಯಾಚರಣೆ ನೇತೃತ್ವವನ್ನು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಹಿಸಿದ್ದರು.

ADVERTISEMENT

ಏಕಾಏಕಿ ಜೆಸಿಬಿಯಿಂದ ಅಂಗಡಿಗಳನ್ನು ತೆರವುಗೊಳಿಸಲು ಆರಂಭಿಸಲಾಯಿತು. ಆಗಷ್ಟೇ ಅಂಗಡಿ ತೆರೆಯಲು ‌ಬಂದಿದ್ದ ಅಂಗಡಿಕಾರರು ಆಘಾತಕ್ಕೆ ಒಳಗಾದರು. ಅಂಗಡಿಯಲ್ಲಿನ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ಕೋರಿದರಾದರೂ‌ ಪಾಲಿಕೆ ಅಧಿಕಾರಿಗಳು ‌ಇದಕ್ಕೆ ಅವಕಾಶ ‌ಕೊಡಲಿಲ್ಲ. ಕೀಲಿ ತೆರೆಯಲು ಯತ್ನಿಸಿದರಾದರೂ ಪೊಲೀಸರು ಬಲವಂತವಾಗಿ ಅವರನ್ನು ‌ಹಿಂದಕ್ಕೆ ಕಳುಹಿಸಿದರು.

ಈ ಕುರಿತು 'ಪ್ರಜಾವಾಣಿ' ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ನೇಹಲ್‌ ಲೋಖಂಡೆ, ಸರ್ಕಾರಿ ‌ಜಾಗದಲ್ಲಿ‌ ಅಕ್ರಮವಾಗಿ ಆರಂಭಿಸಲಾದ ‌ಅಂಗಡಿಗಳನ್ನು ತೆರವುಗೊಳಿಸಿದ್ದೇವೆ. ವರ್ಷದ ಹಿಂದೆಯೇ ಅಂಗಡಿ ಹಾಕಿದವರಿಗೆ ಮೌಖಿಕ ಸೂಚನೆ ನೀಡಿದ್ದೆವು. ಮುಂದಿನ ದಿನಗಳಲ್ಲಿ ನಗರದ ಖರ್ಗೆ ಪೆಟ್ರೋಲ್ ಪಂಪ್ ನಿಂದ ಜಿಮ್ಸ್ ಆಸ್ಪತ್ರೆವರೆಗಿನ ಗೂಡಂಗಡಿಗಳನ್ನು ತೆರವುಗೊಳಿಸಲಿದ್ದೇವೆ ಎಂದರು.

ಅಂಗಡಿ‌ ಕಳೆದುಕೊಂಡ‌ ರವೀಂದ್ರ ಹಾಗೂ ‌ಶಾಂತಾಬಾಯಿ ‌ಮಾತನಾಡಿ, ಇಎಸ್ಐಸಿ ಆಸ್ಪತ್ರೆ ಆರಂಭದ ಹಂತದಿಂದಲೂ ನಾವು ಇಲ್ಲಿ ಅಂಗಡಿ ಇಟ್ಟುಕೊಂಡಿದ್ದೆವು. ರೋಗಿಗಳ‌ ಸಂಬಂಧಿಕರು ಹಾಗೂ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ‌ಊಟ, ಉಪಾಹಾರ, ಚಹಾ ಕೊಡುತ್ತಿದ್ದೆವು. ಅಂಗಡಿ ತೆರವುಗೊಳಿಸುವಂತೆ ಯಾರೂ ಹೇಳಿಲ್ಲ. ಅಲ್ಲದೇ ನಮ್ಮ ಬಳಿ ‌ಬೀದಿ ಬದಿ ವ್ಯಾಪಾರಿಗಳ ‌ಕಾರ್ಡ್ ಇದೆ. ಬ್ಯಾಂಕ್ ನಲ್ಲಿ ವ್ಯಾಪಾರಕ್ಕಾಗಿ ಸಾಲವನ್ನೂ ಮಾಡಿದ್ದೇವೆ. ಕೋವಿಡ್ ‌ಲಾಕ್ ಡೌನ್ ನಿಂದ ಎಲ್ಲವನ್ನೂ ‌ಕಳೆದುಕೊಂಡಿದ್ದೆವು. ಈಗ ಪಾಲಿಕೆ ಅಧಿಕಾರಿಗಳು, ಪೊಲೀಸರು ಬಲವಂತವಾಗಿ ‌ಅಂಗಡಿ ಕಿತ್ತು ಹಾಕಿದ್ದಾರೆ ಎಂದರು.

ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣದಿಂದ ಇದೇ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಅವರಿಗೆ ‌ನಮ್ಮ ಅಂಗಡಿಗಳು ಏನು ಅಡ್ಡಿ ಮಾಡಿದ್ದವು ‌ಎಂದು ಪ್ರಶ್ನಿಸಿದರು.

ವಿಶ್ವವಿದ್ಯಾಲಯ ಠಾಣೆ ಪೊಲೀಸ್ ‌ಇನ್ ಸ್ಪೆಕ್ಟರ್ ಶಿವಾನಂದ ಗಾಣಿಗೇರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ‌ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.