ADVERTISEMENT

ಶಾಲೆ ಬಂದ್: ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ- ಸಿ.ಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 7:42 IST
Last Updated 4 ಜನವರಿ 2022, 7:42 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಕಲಬುರಗಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಶಾಲೆ, ಕಾಲೇಜುಗಳನ್ನು ಮತ್ತೆ ಬಂದ್ ಮಾಡಬೇಕೆ ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತೆಲಂಗಾಣದಲ್ಲಿ ಈಗಾಗಲೇ ಶಾಲೆಗಳನ್ನು ಬಂದ್ ಮಾಡಲಾಗಿದೆ.ಸದ್ಯಕ್ಕೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಗಳವಾರ ಸಂಜೆ ತಜ್ಞರ ಸಭೆ ಕರೆದು ಚರ್ಚಿಸಲಾಗುವುದು. ಲಾಕ್‌ಡೌನ್, ಸೆಮಿಲಾಕ್‌ಡೌನ್‌; ಏನು ಮಾಡಿದರೆ ಉತ್ತಮ ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಕೊರೊನಾ ಮತ್ತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಅನೇಕ ಮಾರ್ಗದರ್ಶನ ನೀಡಿದೆ. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯೇ ರಾಜ್ಯದಲ್ಲಿಯೂ ಜಾರಿಯಲ್ಲಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿಯೂ ಹೆಚ್ಚಾಗುವುದು ಸಹಜ. ಇದರ ಬಗ್ಗೆ ಕಟ್ಟೆಚ್ಚರ‌ ವಹಿಸಿ,ಗಡಿಗಳನ್ನು ಬಿಗಿ ಮಾಡಲಾಗಿದೆ ಎಂದರು.

ADVERTISEMENT

ಇಷ್ಟು ಮಾಡಿದರೆ ಸಾಲದು; ಜನರೇ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕು ಎಂದೂ ಬೊಮ್ಮಾಯಿ ಕೋರಿದರು.

ಕಳೆದ ಒಂದು ವಾರದಿಂದ ಕೊರೊನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಿವೆ. ಮೂರನೇ ಅಲೆ ನಿಭಾಯಿಸಲು ಬೇಕಾದ ಔಷಧಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದೂ ಪ್ರತಿಕ್ರಿಯಿಸಿದರು.

ವೇದಿಕೆ ಮೇಲೆಯೇ ಸಂಸದ ಡಿ.ಕೆ. ಸುರೇಶ ಹಾಗೂ ಸಚಿವ ಅಶ್ವಥ್ ನಾರಾಯಣ ಅವರು ಗಲಾಟೆ ಮಾಡಿಕೊಂಡಿದ್ದು ಸರಿಯಲ್ಲ. ಇದು ಕರ್ನಾಟಕದ ಸಂಸ್ಕೃತಿಯೇ ಅಲ್ಲ. ಏನೇ ವಿವಾದವಿದ್ದರೂ ಮಾತಿನಿಂದ ಬಗೆಹರಿಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.