
ಕಲಬುರಗಿ: ‘ರಾಜ್ಯದಲ್ಲಿ ಉತ್ತಮ ಸರ್ಕಾರವೇ ಇಲ್ಲ. ರಾಜ್ಯದಲ್ಲಿ ಸಜ್ಜನರ ಸರ್ಕಾರ ತರಲು ನಾವು ಜನವರಿ 24ರಂದು ಕಲಬುರಗಿಯಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷದ ವಿಭಾಗೀಯ ಸಮಾವೇಶ ನಡೆಸಿ, ಪಕ್ಷದ ಹೆಸರು ಹಾಗೂ ಚಿಹ್ನೆ ಘೋಷಿಸಲಾಗುವುದು’ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನ ವೇದಿಕೆಯಡಿ ಭಾನುವಾರ ನಡೆದ ರೈತ, ದಲಿತ, ಮುಸ್ಲಿಮರ, ಕನ್ನಡಪರ, ಕಾರ್ಮಿಕರ ಪರ, ಮಹಿಳಾ ಪರ ಮತ್ತು ಯುವಜನ ಹೋರಾಟಗಾರರ ಹೊಸ ಪ್ರಾದೇಶಿಕ ಪಕ್ಷದ ವಿಭಾಗೀಯ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
‘ಕಮಲಕ್ಕೆ ಸೂರ್ಯೋದಯದ ಚಿಂತೆ, ಚಕೋರಂಗೆ ಚಂದ್ರೋದಯದ ಚಿಂತೆ. ನಮಗೆ ಕನ್ನಡ ನಾಡಿನ ಚಿಂತೆ. ಆದರೆ, ಈಗಿನ ಸರ್ಕಾರದಲ್ಲಿ ಬೆಳಿಗ್ಗೆ ಡೆಲ್ಲಿ, ಸಂಜೆ ಬೆಂಗಳೂರು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಓಡಾಡುತ್ತಿದ್ದಾರೆ. ಒಂದೊಂದು ದಿನ ಒಬ್ಬರೊಬ್ಬರು ಔತಣಕೂಟ ಏರ್ಪಡಿಸುತ್ತಿದ್ದಾರೆ. ಶಾಸಕರ ಸ್ಥಿತಿ ಬೆಳಿಗ್ಗೆ ಶಿವಕುಮಾರಣ್ಣ ಉಧೋಉಧೋ... ಸಂಜೆ ಸಿದ್ದರಾಮಣ್ಣ ಉಧೋ ಉಧೋ... ಎನ್ನುವಂತಾಗಿದೆ. ಹೀಗಾದರೆ ಸರ್ಕಾರ ನಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
‘ಕಲಬುರಗಿ ಬಸವಣ್ಣನವರ ಕರ್ಮಭೂಮಿ. ಬಂದೇನವಾಜರ ಪುಣ್ಯಭೂಮಿ. ಶರಣಬಸವೇಶ್ವರರು, ಬಾಬಾಸಾಹೇಬ ಅಂಬೇಡ್ಕರ್ ಓಡಾಡಿದ ನಾಡು. ಈ ನಾಡಿನಲ್ಲೇ ಜನವರಿ 24ರಂದು ದೊಡ್ಡ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದರು.
‘ಅವರನ್ನು (ಬಿಜೆಪಿ, ಕಾಂಗ್ರೆಸ್) ಪದೇಪದೆ ನೋಡಿದ್ದೀರಿ., ನಮ್ಮನ್ನೂ ಒಮ್ಮೆ ನೋಡಿ. ಅಧಿಕಾರ ಸಿಕ್ಕರೆ ಈ ನೆಲದ ರೂಪುರೇಷೆಯನ್ನೇ ಬದಲಿಸುತ್ತೇವೆ. ಟಿಪ್ಪು ಸುಲ್ತಾನ್ ಹೆಸರು ಹೇಳಲು ಇವರಿಗೆ (ಬಿಜೆಪಿ, ಜೆಡಿಎಸ್) ಧೈರ್ಯವಿಲ್ಲ. ಟಿಪ್ಪುವಿಗೆ ಬ್ರಿಟಿಷರೇ ಹೆದರುತ್ತಿದ್ದರು. ನಾವು ಇಂದು ನಮ್ಮ ಬ್ಯಾನರ್, ಪ್ರಣಾಳಿಕೆಯಲ್ಲಿ ಟಿಪ್ಪು ಚಿತ್ರ ಹಾಕಿದ್ದೇವೆ. ಗಂಡಸರ ಮಕ್ಕಳಷ್ಟೇ ಗಂಡಸರ ಹೆಸರು ಹೇಳುತ್ತಾರೆ’ ಎಂದು ಗುಡುಗಿದರು.
ಮುಖಂಡ ಎಂ.ಗೋಪಿನಾಥ ಮಾತನಾಡಿ, ‘ಯಾರೇ ಅಧಿಕಾರಕ್ಕೆ ಬಂದರೂ ನಾವು ಗುಲಾಮರಾಗಿಯೇ ಇದ್ದೇವೆ. ಸೆರೆವಾಸ, ಗುಂಡೇಟು, ನಿರುದ್ಯೋಗ, ಬಡತನ ತಪ್ಪಿಲ್ಲ. ದೇಶದ ಪ್ರಜಾಪ್ರಭುತ್ವ ಹೆಸರಿಗಷ್ಟೇ ಎಂಬಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರ ಆಳ್ವಿಕೆ ಇರಬೇಕು. ಬಹುಸಂಖ್ಯಾತರು ಅಲ್ಪಸಂಖ್ಯಾತರ ಹಕ್ಕುಗಳನ್ನು ಕೊಡಬೇಕು. ಆದರೆ, ದೇಶದಲ್ಲಿ ಅಲ್ಪಸಂಖ್ಯಾತರೇ ಕೊಡುವ ಸ್ಥಾನದಲ್ಲಿ ಕುಳಿತಿದ್ದು, ಬಹುಸಂಖ್ಯಾಂತರು ಬೇಡುವ ಸ್ಥಿತಿಯಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ‘ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ರಾಜ್ಯದ ಜನರ ತೆರಿಗೆ ದುಡ್ಡು ಲೂಟಿ ಮಾಡಿವೆ. ಯಾವುದೇ ಚುನಾವಣೆ ನಡೆದರೂ ಇಲ್ಲಿನ ಪಕ್ಷಗಳು ಬಾಚಿ ಗುಡ್ಡೆಹಾಕಿ ದೆಹಲಿಗೆ ಕಳುಹಿಸುವ ಸ್ಥಿತಿಯಿದೆ. ಆದರೆ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳದಲ್ಲೂ ಹೀಗಿಲ್ಲ. ಅದಕ್ಕೆ ಕಾರಣ ಪ್ರಾದೇಶಿಕ ಪಕ್ಷಗಳಿವೆ. ನಮ್ಮಲ್ಲೂ ಇದನ್ನು ತಡೆಯಲು ಹೊಸ ಪ್ರಾದೇಶಿಕ ಪಕ್ಷವೇ ಪರ್ಯಾಯ ಮಾರ್ಗ’ ಎಂದರು.
ಎಐಬಿಎಸ್‌ಪಿ ರಾಜ್ಯಾಧ್ಯಕ್ಸ ಮಾರಸಂದ್ರ ಮುನಿಯಪ್ಪ, ಆರ್.ಮುನಿಯಪ್ಪ, ಮೋಹನರಾಜ್, ಕೆ.ಬಿ.ವಾಸು, ದಸ್ತಗಿರಿ ಮುಲ್ಲಾ, ಹನುಮೇಗೌಡ ಬೀರನಕಲ್ಲ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಕಲಬುರಗಿ ವಿಭಾಗೀಯ ಸಮ್ಮೇಳನದಲ್ಲಿ ಬೀದರ್ ರಾಯಚೂರು ಬಳ್ಳಾರಿ ಯಾದಗಿರಿ ಕೊಪ್ಪಳ ವಿಜಯಪುರ ಜಿಲ್ಲೆಗಳಿಂದ ಕನಿಷ್ಠ 1 ಲಕ್ಷ ಜನರನ್ನು ಸೇರಿಸಲಾಗುವುದು-ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.