ADVERTISEMENT

ದೇವಲ ಗಾಣಗಾಪುರಕ್ಕೆ ಮಾಸ್ಟರ್ ಪ್ಲಾನ್‌ ರೂಪಿಸಿ: ಎಂ.ವೈ ಪಾಟೀಲ ಮನವಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:45 IST
Last Updated 17 ಅಕ್ಟೋಬರ್ 2019, 14:45 IST
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ ಹೂಗಾರಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ ಹೂಗಾರಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು   

ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದು ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಭೇಟಿ ನೀಡುತ್ತಾರೆ. ಅದಕ್ಕಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಶಾಸಕ ಎಂ.ವೈ. ಪಾಟೀಲ ದೇವಲಗಾಣಗಾಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಪಾಟೀಲ, ‘ದೇವಲಗಾಣಗಾಪುರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಮಾಡಬೇಕು. ಚರಂಡಿಯ ಕೊಳಚೆ ನೀರು ಭೀಮಾ ನದಿಗೆ ಹರಿದು ಹೋಗದಂತೆ ಹೊರವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರಂಡಿ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು, ದೇವಸ್ಥಾನದ ಹತ್ತಿರ ಯಾತ್ರಿಕರಿಗೆ ಶೌಚಾಲಯ ವ್ಯವಸ್ಥೆ ಮತ್ತು ಪಾದರಕ್ಷೆ ಬಿಡುವ ವ್ಯವಸ್ಥೆ ಆಗಬೇಕು’ ಎಂದರು.

ಗ್ರಾಮ ಪಂಚಾಯ್ತಿಮಾಜಿ ಅಧ್ಯಕ್ಷ ಗುಂಡಪ್ಪ ಹೊಸಮನಿ, ಮಾಜಿ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ ದತ್ತಾತ್ರೇಯ ಪಾಟೀಲ, ಬ್ರಾಹ್ಮಣ ಸಮಾಜದ ಮುಖಂಡರಾದ ಉದಯಕುಮಾರ್ ಪೂಜಾರಿ ಹಾಗೂ ಮುಖಂಡರಾದ ರಾಮಚಂದ್ರ ಪಟ್ಟೇದ , ಸಂಗಣ್ಣ ಸಿ.ಹಸರಗುಂಡಗಿ ಇದ್ದರು.

ADVERTISEMENT

ಕಬ್ಬು ಬೆಳೆಗಾರರ ಮನವಿ: ಅಫಜಲಪುರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಅತಿವೃಷ್ಟಿ, ಅನಾವೃಷ್ಟಿಗಳಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕು. 2019–20ನೇ ಸಾಲಿನ ಕಬ್ಬಿನ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸರ್ಕಾರವೇ ನಿಗದಿ ಮಾಡಬೇಕು. ಕಬ್ಬಿಗೆ ಕ್ವಿಂಟಲ್‌ಗೆ ಕನಿಷ್ಠ ₹ 3500 ನಿಗದಿಪಡಿಸಬೇಕು ಮತ್ತು ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ ಹೂಗಾರ ಯಡಿಯೂರಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.

ರೈತ ಮುಖಂಡರಾದ ಭಾಗಣ್ಣ ಕುಂಬಾರ, ಮಲ್ಲನಗೌಡ ಪಾಟೀಲ, ಮಲ್ಲು ಬಳೂರ್ಗಿ, ಭೀಮರಾಯ ಗೌಡ ಪಾಟೀಲಲ, ಬೀರಣ್ಣ ಪೂಜಾರಿ, ಗುರು ಚಾಂದಕೋಟೆ, ಮಂಜುನಾಥ ನಿರೋಣಿ, ಗಂಗಾಧರ ಸುತಾರ ಇದ್ದರು.

ಮಾದಿಗ ಸಂಘ ಮನವಿ: ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದಲ್ಲಿ ಈಚೆಗೆ ಮಾದಿಗ ಜನಾಂಗದ ಮಹಿಳೆಯ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು, ಮಾದಿಗ ಜನಾಂಗದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯ ಮಾದಿಗ ಸಂಘರ್ಷ ಸಮಿತಿ ಉಪಾಧ್ಯಕ್ಷ ಮಲ್ಲಪ್ಪ ಮಾದರ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.