ಆರ್. ಅಶೋಕ
ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಅಭಿವೃದ್ಧಿ ವಿಚಾರವಾಗಿ ಕರೆಯುವ ಸಭೆಯಲ್ಲಿ ಮುಖ್ಯಮಂತ್ರಿ ಹೋಗುವ ಬದಲು ಬೇರೆ ಯಾರನ್ನೋ ಕಳುಹಿಸಿ ನಂತರ ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ ಎಂದು ಆರೋಪ ಮಾಡುತ್ತಾರೆ. ಅದರ ಬದಲು ತಾವೇ ಸಭೆಗೆ ಹೋಗಿ ಪರಿಸ್ಥಿತಿ ಮನವರಿಕೆ ಮಾಡಿಕೊಡಬಹುದಿತ್ತಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಕರೆಯುವ ಸಭೆಗೆ ಗೈರಾಗುವುದನ್ನು ಸಿದ್ದರಾಮಯ್ಯ ಅವರು ರೂಢಿಸಿಕೊಂಡಿದ್ದಾರೆ. ಜಿಎಸ್‌ಟಿ ಮಂಡಳಿ ಸಭೆಗೂ ಅವರ ಬದಲು ಬೇರೆಯವರು ಹೋಗುತ್ತಾರೆ’ ಎಂದು ಟೀಕಿಸಿದರು.
‘ನಮ್ಮ ಸರ್ಕಾರ ಇದ್ದಾಗ ಕೇಂದ್ರದಿಂದ ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ ಒಂದು ಮನೆ ಬಿದ್ದರೆ ₹95 ಸಾವಿರ ಪರಿಹಾರದ ಹಣದ ಜೊತೆಗೆ ರಾಜ್ಯದ ಮೊತ್ತ ಸೇರಿಸಿ ಒಟ್ಟಾರೆ ನೆರೆ ಸಂತ್ರಸ್ತರಿಗೆ ₹5 ಲಕ್ಷ, ಭಾಗಶಃ ಹಾನಿಗೀಡಾದೆರ ₹3 ಲಕ್ಷ ಪರಿಹಾರ ನೀಡುತ್ತಿದ್ದೆವು. ಇಷ್ಟು ಮೊತ್ತವನ್ನು ಕಾಂಗ್ರೆಸ್ ಸರ್ಕಾರ ನೀಡಿದೆಯೇ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ರೈತರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಅವರ ಕಣ್ಣೀರು ಒರೆಸುವ ಬದಲು ಅಲ್ಪ ಪರಿಹಾರ ಕೊಟ್ಟು ಕೈಗೊಳೆದುಕೊಳ್ಳುತ್ತಿದ್ದಾರೆ. ಕಬ್ಬಿಗೆ ಉತ್ತಮ ಬೆಲೆ ಕಲ್ಪಿಸುವಂತೆ ರೈತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೆಲ್ಲ ಪರಿಹರಿಸಬೇಕಿದ್ದ ಸರ್ಕಾರ ತನಗೂ ಈ ಸಮಸ್ಯೆಗೂ ಏನೂ ಇಲ್ಲದಂತೆ ಸುಮ್ಮನೆ ಕುಳಿತಿದೆ’ ಎಂದು ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕರಾದ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮುಖಂಡರಾದ ನಿತಿನ್ ಗುತ್ತೇದಾರ, ಶಿವರಾಜ ಪಾಟೀಲ ರದ್ದೇವಾಡಗಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.