
ಮೃತ ಬೀರಪ್ಪ ಪೂಜಾರಿ ಮತ್ತು ಶಾಂತಾಬಾಯಿ
ಕಲಬುರಗಿ: ತಾಲ್ಲೂಕಿನ ಕಡಣಿ ಗ್ರಾಮಸ್ಥ ಬೀರಪ್ಪ ಪೂಜಾರಿ ಎಂಬುವವರು ಮೃತಪಟ್ಟ ಒಂಬತ್ತು ವರ್ಷಗಳ ಬಳಿಕ ದಾಖಲಾದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತಾಬಾದ್ ಪೊಲೀಸರು ಬೀರಪ್ಪ ಪತ್ನಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಮಹೇಶ ರಾಠೋಡ, ಸುರೇಶ ಅಲಿಯಾಸ್ ಕಾಂತು ರಾಠೋಡ, ಸಿದ್ದು ಬಾಗಲಕೋಟ, ಶಂಕರ ಬಿಚಗತ್ತಿ ಹಾಗೂ ಬೀರಪ್ಪನ ಪತ್ನಿ ಶಾಂತಾಬಾಯಿ ಬಂಧಿತರು. ಆರೋಪಿಗಳನ್ನು ಸದ್ಯ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಹೆಚ್ಚಿನ ತನಿಖೆಗೆ ಇನ್ನಷ್ಟೇ ಪೊಲೀಸ್ ವಶಕ್ಕೆ ಪಡೆಯಬೇಕಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘2016ರ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕಡಣಿ ಗ್ರಾಮದ ಯುವಕ ಬೀರಪ್ಪ ಪೂಜಾರಿ ಮೃತಪಟ್ಟಿದ್ದ. ಬೀರಪ್ಪ ಪತ್ನಿ ಶಾಂತಾಬಾಯಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಅದಕ್ಕೆ ಅಡ್ಡಿಯಾಗಿದ್ದ ಬೀರಪ್ಪ ಅವರನ್ನು ಆರೋಪಿಗಳು ಸಂಚು ರೂಪಿಸಿ ಕೊಲೆಗೆ ಮಾಡಿದ್ದರು. ಮೊದಲಿಗೆ ಮಾತ್ರೆ ಕೊಟ್ಟು ಸಾಯಿಸಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದಿದ್ದಾಗ ಆರೋಪಿಗಳು ಬೀರಪ್ಪಗೆ ಮದ್ಯ ಕುಡಿಸಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ವಿವರಿಸಿದರು.
‘ಆರಂಭದಲ್ಲಿ ಬೀರಪ್ಪ ಅವರದು ಸಹಜ ಸಾವು ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಸುಪಾರಿ ಪಡೆದ್ದ ಆರೋಪಿ ನಡೆಸಿದ ಸಂಭಾಷಣೆ ಹರಿದಾಡುತ್ತಿದ್ದು, ಅದನ್ನು ಆಧರಿಸಿ ಬೀರಪ್ಪ ಅವರ ಸಹೋದರ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಅದರಂತೆ ತನಿಖೆಗೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಇದೊಂದು ಸಂಕೀರ್ಣ ಹಾಗೂ ಸವಾಲಿನ ಪ್ರಕರಣ. ನಿಖರ ಕಾರಣ ಪತ್ತೆಗೆ ತಜ್ಞರ ಸಲಹೆ–ನೆರವು ಪಡೆಯಲಾಗುತ್ತಿದೆ. ಸಾಂದರ್ಭಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ವೈಜ್ಞಾನಿಕ ಪುರಾವೆ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಜೊತೆಗೆ ಮೃತದೇಹ ಹೊರತೆಗೆದು ತನಿಖೆ ನಡೆಸುವ ಚಿಂತನೆಯೂ ಸಾಗಿದೆ. ಸುಪಾರಿ ಹಣದ ವಹಿವಾಟು, ಹೇಗೆಲ್ಲ ಕೊಲೆಗೆ ಸಂಚು ನಡೆಸಿದ್ದರು, ಹೇಗೆ ಕೊಲೆ ಮಾಡಲಾಯಿತು ಎಂಬುದು ನಿಖರ ವಿವರ ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಸಬರ್ಬನ್ ಎಸಿಪಿ ಬಸವರಾಜ ಹೀರಾ ಮಾರ್ಗದರ್ಶನದಲ್ಲಿ ಫರಹತಾಬಾದ್ ಇನ್‌ಸ್ಪೆಕ್ಟರ್ ಹುಸೇನ್‌ಬಾಷಾ, ಎಎಸ್‌ಐ ಅಶೋಕ, ಸಿಬ್ಬಂದಿ ತುಕಾರಾಂ, ಶಂಕರಲಿಂಗ, ಕಲ್ಯಾಣಿ, ಆನಂದ, ಎಂ.ಆರ್.ಪಟೇಲ್, ಸಂಗೀತಾ, ಶಾಂತಮ್ಮ ಹಾಗೂ ವಾಹನ ಚಾಲಕ ಮಂಜುನಾಥ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.