ADVERTISEMENT

ಕಲಬುರಗಿ | ಶೀತ ಗಾಳಿ: ಅನಗತ್ಯ ತಿರುಗಾಟ ಬೇಡ ಎಂದು ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 7:47 IST
Last Updated 11 ಡಿಸೆಂಬರ್ 2025, 7:47 IST
ಬಿ.ಫೌಜಿಯಾ ತರನ್ನುಮ್‌
ಬಿ.ಫೌಜಿಯಾ ತರನ್ನುಮ್‌   

ಕಲಬುರಗಿ: ‘ಜಿಲ್ಲೆಯಾದ್ಯಂತ ಡಿ.14ರವರೆಗೆ ಜಿಲ್ಲೆಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಇದು ತೀವ್ರ ಶೀತ ಅಲೆಯ ಪರಿಸ್ಥಿತಿಗೆ ಕಾರಣವಾಗಬಹುದು. ಜಿಲ್ಲೆಯ ಸಾರ್ವಜನಿಕರು ಅನಗತ್ಯ ಹೊರಗಡೆ ತಿರುಗಾಡಬಾರದು ಮತ್ತು ಪ್ರವಾಸ ಮಿತಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಚಳಿ ಮತ್ತು ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿರುವ ಅವರು ವೃದ್ಧರು, ಮಕ್ಕಳು ಬಗ್ಗೆ ಪಾಲಕ ಪೋಷಕರು ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.

ಬುಧವಾರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನವು 13.7 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ತಾಪಮಾನವು 33.8 ಡಿಗ್ರಿ ಸೆಲ್ಸಿಯಸ್‌ಗಳಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಏನು ಮಾಡಬೇಕು?:

ಶೀತ ಮಾರುತದಿಂದ ರಕ್ಷಿಸಲು ಬೆಚ್ಚನೆಯ ಬಟ್ಟೆಗಳನ್ನು ಧರಿಸಬೇಕು. ಮೈ ಮೇಲಿನ ಬಟ್ಟೆ ಒದ್ದೆಯಾಗದಂತೆ ಎಚ್ಚರ ವಹಿಸಬೇಕು. ಒದ್ದೆಯಾದಲ್ಲಿ ದೇಹದ ಶಾಖದ ನಷ್ಟವನ್ನು ತಡೆಯಲು ಬಟ್ಟೆಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಕೈಗವಸುಗಳನ್ನು ಹಾಕಿಕೊಳ್ಳಬೇಕು. ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯಬೇಕು. ಒಣ ಪದರಗಳ ಕಂಬಳಿಗಳು, ಬಟ್ಟೆಗಳು, ಟವೆಲ್‌ಗಳಿಂದ ವ್ಯಕ್ತಿಯ ದೇಹವನ್ನು ಬೆಚ್ಚಗಿರುವಂತೆ ಎಚ್ಚರ ವಹಿಸಬೇಕು.

ಜಾನುವಾರುಗಳ ಕಾಳಜಿ ಹೇಗೆ?:

ಪಶು ಪ್ರಾಣಿಗಳನ್ನು ಸಾಕಿರುವ ಸಾರ್ವಜನಿಕರು ರಾತ್ರಿ ವೇಳೆ ಜಾನುವಾರುಗಳನ್ನು ಶೆಡ್‌ಗಳ ಒಳಗೆ ಇರಿಸಿ ಶೀತದಿಂದ ರಕ್ಷಿಸಲು ಮ್ಯಾಟ್‌ಗಳನ್ನು ಬಳಸಬೇಕು. ಚಳಿಯನ್ನು ನಿಭಾಯಿಸಲು ಮತ್ತು ಪ್ರಾಣಿಗಳು ಆರೋಗ್ಯವಾಗಿರಲು ಮೇವಿನ ಸಾಂದ್ರತೆಯಲ್ಲಿ ಪ್ರೋಟೀನ್ ಮಟ್ಟ ಮತ್ತು ಖನಿಜಗಳನ್ನು ಹೆಚ್ಚಿಸಬೇಕು. ಇದಲ್ಲದೆ ಗೋಧಿ ಧಾನ್ಯ, ಬೆಲ್ಲ ನೀಡಬಹುದು. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಕೃತಕ ಬೆಳಕನ್ನು ಒದಗಿಸುವ ಮೂಲಕ ಮರಿಗಳನ್ನು ಬೆಚ್ಚಗಿಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.